Advertisement

ದಲಿತ, ಲಿಂಗಾಯಿತ ಮತಬ್ಯಾಂಕ್‌ ಮೇಲೆ ಪಕ್ಷಗಳ ಕಣ್ಣು

03:45 AM Apr 07, 2017 | Harsha Rao |

ಮೈಸೂರು: ನಂಜನಗೂಡು (ಎಸ್ಸಿ ಮೀಸಲು) ವಿಧಾನಸಭಾ ಕ್ಷೇತ್ರಕ್ಕೆ ಇದೇ 9ರಂದು ಉಪ ಚುನಾವಣೆ ನಡೆಯಲಿದ್ದು, ಅಂತಿಮ ಕಣದಲ್ಲಿ 11 ಅಭ್ಯರ್ಥಿಗಳಿದ್ದಾರೆ. ಆದರೆ, ನೇರ ಹಣಾಹಣಿ ಇರುವುದು ಕಾಂಗ್ರೆಸ್‌ನ ಕಳಲೆ ಎನ್‌.ಕೇಶವಮೂರ್ತಿ ಹಾಗೂ ಬಿಜೆಪಿಯ ವಿ.ಶ್ರೀನಿವಾಸಪ್ರಸಾದ್‌ ನಡುವೆ.

Advertisement

2008ರಲ್ಲಿ ಕ್ಷೇತ್ರ ಪುನರ್ವಿಂಗಡಣೆಯಾದಾಗ ನಂಜನಗೂಡು ಮೀಸಲು ಕ್ಷೇತ್ರವಾಯಿತು. ಈ ಹಿಂದಿನ ಎರಡೂ ಚುನಾವಣೆಗಳಲ್ಲಿ ಕಳಲೆ ಕೇಶವಮೂರ್ತಿ ಹಾಗೂ ಶ್ರೀನಿವಾಸ ಪ್ರಸಾದ್‌ ಎದುರಾಳಿಗಳಾಗಿ ಸೆಣಸಿದ್ದಾರೆ. ಈ ಚುನಾವಣೆಯಲ್ಲೂ ಇವರಿಬ್ಬರ ನಡುವೆಯೇ ಹಣಾಹಣಿ. 2008, 20013ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಪ್ರಸಾದ್‌, ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ. ಜೆಡಿಎಸ್‌ ಅಭ್ಯರ್ಥಿಯಾಗಿ 2008ರ ಚುನಾವಣೆಯಲ್ಲಿ 25,551 ಮತ, 2013ರ ಚುನಾವಣೆಯಲ್ಲಿ 41,843 ಮತಗಳಿಸಿ ಸೋಲುಂಡಿದ್ದ ಕಳಲೆ ಕೇಶವಮೂರ್ತಿ, ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿ. ಮಂತ್ರಿಮಂಡಲದಿಂದ ಕೈಬಿಟ್ಟ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸಿಟ್ಟಿಗೆದ್ದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರಿ ಉಪ ಚುನಾವಣೆ ಎದುರಿಸುತ್ತಿರುವ ಪ್ರಸಾದ್‌ ಅವರನ್ನು ಖೆಡ್ಡಾಕ್ಕೆ ಕೆಡವಲು ಸಿದ್ದರಾಮಯ್ಯ ಹಾಗೂ ಅವರ ಪರಮಾಪ್ತ ಸಚಿವ
ಡಾ.ಎಚ್‌.ಸಿ.ಮಹದೇವಪ್ಪ, ಎಲ್ಲಾ ಮಾರ್ಗೋಪಾಯಗಳನ್ನೂ ಅನುಸರಿಸುತ್ತಿದ್ದಾರೆ. ಇತ್ತ ಈ ಉಪಚುನಾವಣೆಯನ್ನು
ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಜೆಪಿ ರಾಜಾಧ್ಯಕ್ಷ ಬಿ.ಎಸ್‌ .ಯಡಿಯೂರಪ್ಪ, ಕ್ಷೇತ್ರದ ಚುನಾವಣಾ ಉಸ್ತುವಾರಿಯ ಹೊಣೆಯನ್ನು ಮಾಜಿ ಸಚಿವರಾದ ಶೋಭಾ ಕರಂದ್ಲಾಜೆ ಹಾಗೂ ವಿ.ಸೋಮಣ್ಣ ಅವರಿಗೆ ವಹಿಸಿದ್ದಾರೆ. ಜೊತೆಗೆ, ಕಳೆದ 20 ದಿನಗಳಿಂದ ಮೈಸೂರಿನಲ್ಲೇ ಠಿಕಾಣಿ ಹೂಡಿ ಕ್ಷೇತ್ರದಾದ್ಯಂತ ಸಂಚರಿಸಿ ಮತದಾರರ ಮನವೊಲಿಸುವ ಪ್ರಯತ್ನ
ಮಾಡುತ್ತಿದ್ದಾರೆ.

ಬಜೆಟ್‌ ಅಧಿವೇಶನದ ನಂತರ ಮೈಸೂರಿನಲ್ಲಿ ಠಿಕಾಣಿ ಹೂಡಿರುವ ಸಿದ್ದರಾಮಯ್ಯ, ದಿನ ಬಿಟ್ಟು ದಿನ ಎರಡೂ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ, ತಮ್ಮ ಸರ್ಕಾರದ ನಾಲ್ಕು ವರ್ಷಗಳ ಸಾಧನೆ ಹಾಗೂ ಹಿಂದಿನ ಬಿಜೆಪಿ ಸರ್ಕಾರದ ವೈಫ‌ಲ್ಯ, ಕೇಂದ್ರ ಸರ್ಕಾರದ ಅಸಹಕಾರದ ಬಗ್ಗೆ ಜನತೆಗೆ ಮನವರಿಕೆ ಮಾಡಿಕೊಟ್ಟು ಮತದಾರರನ್ನು “ಕೈ’ ನತ್ತ ಸೆಳೆಯುವ ಪ್ರಯತ್ನ ನಡೆಸಿದ್ದಾರೆ. ಜತೆಗೆ ಜಿಪಂ ಕ್ಷೇತ್ರ ವ್ಯಾಪ್ತಿಗೆ ಇಬ್ಬರಂತೆ ಮಂತ್ರಿಗಳು, ಶಾಸಕರು, ಪಕ್ಷದ ಹಿರಿಯ ಮುಖಂಡರುಗಳನ್ನು ನಿಯೋಜಿಸಿದ್ದು, ಅವರೆಲ್ಲರೂ ಮತದಾರರ ಮನೆಬಾಗಿಲುಗಳಿಗೆ ಎಡತಾಕುತ್ತಿದ್ದಾರೆ.

ಸಿದ್ದು-ಬಿಎಸ್‌ವೈ ಪ್ರಭಾವಳಿ: ಇದು ಸಿದ್ದ ರಾಮಯ್ಯ-ಯಡಿಯೂರಪ್ಪ ನಡುವಿನ ಸಂಘರ್ಷವಲ್ಲ ಎಂದು ಹೇಳಿದರೂ, ಈ ಚುನಾವಣೆ ನಡೆಯುತ್ತಿರುವುದೇ ಅವರಿಬ್ಬರ ಪ್ರಭಾವಳಿ ಮೇಲೆ. ಹೀಗಾಗಿ ಪ್ರಸಾದ್‌ಗೆ ದಲಿತ ಸಮುದಾಯದ ಮೇಲಿರುವ ಹಿಡಿತದ ಜೊತೆಗೆ ಲಿಂಗಾಯಿತ ಸಮುದಾಯವೂ ಅವರ ಬೆನ್ನಿಗೆ ನಿಂತರೆ ಗೆಲುವು ಸುಲಭವಾಗಲಿದೆ ಎಂಬುದು ಬಿಜೆಪಿ ಲೆಕ್ಕಾಚಾರ. ಇದೇ ಕಾರಣಕ್ಕೆ ಲಿಂಗಾಯಿತ ಸಮುದಾಯದವರು ಪ್ರಬಲವಾಗಿರುವ ಗ್ರಾಮಗಳಿಗೆ ಯಡಿಯೂರಪ್ಪ ಅವರೇ ಭೇಟಿ ನೀಡಿ, ಪ್ರಸಾದ್‌ರಂತಹ ಹಿರಿಯ ದಲಿತ ನಾಯಕ ನಮ್ಮ ಜತೆ ಬಂದಿರುವಾಗ ಅವರನ್ನು ಗೆಲ್ಲಿಸದಿದ್ದರೆ ಮುಂದೆ ರಾಜ್ಯದಲ್ಲಿ ತಾವು ಹೇಗೆ ತಲೆ ಎತ್ತಿ ಓಡಾಡಲಿ ಎಂದು ಭಾವನಾತ್ಮಕ ಅಸ್ತ್ರ ಪ್ರಯೋಗಿಸುತ್ತಿದ್ದಾರೆ.

ಇತ್ತ ಕಾಂಗ್ರೆಸ್‌ ಕೂಡ, ಸಿದ್ದರಾಮಯ್ಯಗೆ ಅಹಿಂದ ವರ್ಗಗಳ ಮೇಲಿರುವ ಹಿಡಿತದ ಜೊತೆಗೆ ಮಹದೇವಪ್ಪ ಹಾಗೂ ಧ್ರುವನಾರಾಯಣ ಅವರ ಮೂಲಕ ದಲಿತ ಸಮುದಾಯದ ಮತಬ್ಯಾಂಕ್‌ಗೆ ಕೈಹಾಕುತ್ತಿದೆ. ಉಳಿದಂತೆ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳ ಜೊತೆಗೆ ಕ್ಷೇತ್ರದಲ್ಲಿ ಪ್ರಬಲವಾಗಿರುವ ದಲಿತ ಮತ್ತು ಲಿಂಗಾಯಿತ ಮತಬ್ಯಾಂಕ್‌ಗೆ ಕೈ ಹಾಕಿ ಹೆಚ್ಚಿನ ಮತ ಕಸಿದಷ್ಟೂ ಪಕ್ಷಕ್ಕೆ ಲಾಭ ಎಂಬ ಲೆಕ್ಕಾಚಾರದ ಮೇಲೆ ಕಾರ್ಯತಂತ್ರ ಹೆಣೆದಿದೆ. ಕ್ಷೇತ್ರವ್ಯಾಪ್ತಿಯ ಯಾವುದೇ ಹಳ್ಳಿಗಳಿಗೆ ಹೋದರೂ ಈಗ ಇಂಥದ್ದೇ ಮಾತುಗಳು ಕೇಳಿ ಬರುತ್ತಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next