ಭೋಪಾಲ್: ಬುಡಕಟ್ಟು ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆ ನಡೆದು ಕೆಲ ದಿನಗಳಷ್ಟೇ ಆಗಿದೆ. ಇದೀಗ ಅಂಥದ್ದೇ ಮತ್ತೊಂದು ಹೇಯ ಘಟನೆ ಮಧ್ಯ ಪ್ರದೇಶದಲ್ಲೇ ನಡೆದಿರುವುದು ವರದಿಯಾಗಿದೆ.
ಶುಕ್ರವಾರ(ಜು.21 ರಂದು) ದಶರತ್ ಅಹಿರ್ವಾರ್ ಎಂಬ ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿ ಛತ್ತರ್‌ಪುರ ಜಿಲ್ಲಾ ಕೇಂದ್ರದಿಂದ ಸುಮಾರು 35 ಕಿಮೀ ದೂರದಲ್ಲಿರುವ ಬಿಕೌರಾ ಗ್ರಾಮದಲ್ಲಿ ಪಂಚಾಯತ್‌ಗೆ ಚರಂಡಿ ನಿರ್ಮಾಣದಲ್ಲಿ ತೊಡಗಿದ್ದ ವೇಳೆ ಈ ಘಟನೆ ನಡೆದಿದೆ.
ಕೆಲಸದಲ್ಲಿ ನಿರತರಾಗಿದ್ದ ವೇಳೆ ಗ್ರೀಸ್ ಮೆತ್ತಿಕೊಂಡಿದ್ದ ನನ್ನ ಕೈಯಿಂದ ಸಮೀಪದ ಹ್ಯಾಂಡ್ ಪಂಪ್‌ನಲ್ಲಿ ಸ್ನಾನ ಮಾಡುತ್ತಿದ್ದ ರಾಮಕೃಪಾಲ್ ಪಟೇಲ್ ಅವರ ಕೈಯನ್ನು ಆಕಸ್ಮಿಕವಾಗಿಮುಟ್ಟಿದ್ದೇನೆ. ಇಷ್ಟು ಸಣ್ಣ ವಿಚಾರಕ್ಕೆ ರಾಮಕೃಪಾಲ್ ಪಟೇಲ್ ಜಾತಿ ನಿಂದನೆಯನ್ನು ಮಾಡಿ, ಸ್ನಾನಕ್ಕೆ ಬಳಸುವ ಚೊಂಬಿನಲ್ಲಿ ಮಾನವನ ಮಲವನ್ನು ತಂದು ನನ್ನ ತಲೆ, ಮುಖ ಹಾಗೂ ಮೈಮೇಲೆ ಹಾಕಿದ್ದಾರೆ ಎಂದು ಘಟನೆ ಬಗ್ಗೆ ದಶರತ್ ಅಹಿರ್ವಾರ್ ಹೇಳಿದ್ದಾರೆ.
“ನಾನು ಈ ವಿಷಯವನ್ನು ಪಂಚಾಯತ್‌ಗೆ ಹೋಗಿ ಹೇಳಿದ್ದೇನೆ. ಆದರೆ ಅವರು ಕ್ರಮ ಕೈಗೊಳ್ಳುವ ಬದಲು, ನನ್ನ ಮೇಲೆಯೇ 600 ರೂಪಾಯಿಯ ದಂಡವನ್ನು ಹಾಕಿದ್ದಾರೆಂದು” ಅಹಿರ್ವಾರ್ ಆರೋಪಿಸಿದ್ದಾರೆ.
ಈ ಸಂಬಂಧ ಶನಿವಾರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, “ದೂರಿದ ಆಧಾರದ ಮೇಲೆ ರಾಮಕೃಪಾಲ್ ಪಟೇಲ್ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 294 (ಅಶ್ಲೀಲ ಕೃತ್ಯಗಳು ಅಥವಾ ಸಾರ್ವಜನಿಕ ಪದಗಳಿಗೆ ಶಿಕ್ಷೆ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಎಂದು ಪೊಲೀಸ್ ಉಪವಿಭಾಗಾಧಿಕಾರಿ ಸಿಂಗ್ ಮನ್ಮೋಹನ್ ತಿಳಿಸಿದ್ದಾರೆ.
ಅಹಿರ್ವಾರ್ ಇತರರೊಂದಿಗೆ ಕೆಲಸ ಮಾಡುತ್ತಿದ್ದಾಗ, ಅವರು ಸಮೀಪದಲ್ಲಿ ಸ್ನಾನ ಮಾಡುತ್ತಿದ್ದ ಪಟೇಲ್ ಅವರೊಂದಿಗೆ ತಮಾಷೆ ಮಾಡುತ್ತಿದ್ದರು. ಅಹಿರ್ವಾರ್ ಪಟೇಲ್ ಅವರ ಕೈಗೆ ಗ್ರೀಸ್ ಹಾಕಿದಾಗ ಅವರು ತಮಾಷೆಯಾಗಿ ಪರಸ್ಪರ ವಸ್ತುಗಳನ್ನು ಎಸೆಯುತ್ತಿದ್ದರು. ನಂತರ ಪಟೇಲ್ ಮಾನವ ಮಲವನ್ನು ಕೈಯಿಂದ ಎತ್ತಿಕೊಂಡು ಅಹಿರ್ವಾರ್ ಅವರ ಬೆನ್ನಿನ ಮೇಲೆ ಎಸೆದರು ಎಂದು ಪೊಲೀಸ್ ಅಧಿಕಾರಿ ಹೇಳಿದರು.