ಅಹಮದಾಬಾದ್ : ಚುನಾವಣೆ ಹೊಸ್ತಿಲಲ್ಲಿರುವ ಗುಜರಾತ್‌ನ ಆನಂದ್ ಜಿಲ್ಲೆಯಲ್ಲಿ ನವರಾತ್ರಿ ವೇಳೆ ಶನಿವಾರ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಮೇಲ್ಜಾತಿ ಪಟೇಲ್ ಸಮುದಾಯದ ಗಾರ್ಬಾ ನೃತ್ಯ ಪ್ರದರ್ಶನವನ್ನು ನೋಡಿದ ಎಂಬ ಕಾರಣಕ್ಕೆ 21 ವರ್ಷ ಪ್ರಾಯದ ದಲಿತ ಯುವಕನನ್ನು ಹತ್ಯೆಗೈಯಲಾಗಿದೆ.
ಹತ್ಯೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹಲ್ಲೆ ನಡೆಸಿದ 8 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಭದ್ರಾನಿಯಾ ಪ್ರದೇಶದ ವಂಕಾರ್‌ವಾಸ್ ಪ್ರದೇಶದ ಜಯೇಶ್ ಸೋಲಂಕಿ ಎಂಬ ಯುವಕ ಇತರ ನಾಲ್ವರು ದಲಿತ ವರ್ಗದ ಸ್ನೇಹಿತರೊಂದಿಗೆ ದೇವಾಲಯದ ಬಳಿ ಬಂದು ಗಾರ್ಬಾ ನೋಡುತ್ತಿದ್ದ , ಈ ವೇಳೆ ಪಟೇಲ್ ಸಮುದಾಯದ ಮುಖಂಡನೊಬ್ಬ ಜಾತಿ ನಿಂದನೆ ಮಾಡಿ ಇತರರನ್ನು ಸ್ಥಳಕ್ಕೆ ಕರೆಸಿಕೊಂಡು ಹಲ್ಲೆ ನಡೆಸಿದ್ದಾರೆ. ಈ ವೇಳೆ ಸೋಲಂಕಿಯ ತಲೆಯನ್ನು ಗೊಡೆಗೆ ಅಪ್ಪಳಿಸಿ ಅಟ್ಟಹಾಸ ಮೆರೆದಿದ್ದಾರೆ.
ಗಂಭೀರವಾಗಿ ಗಾಯಗೊಂಡ ಸೋಲಂಕಿಯನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಆತನ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಈ ಘಟನೆ ಉನಾದಲ್ಲಿ 2016 ರಲ್ಲಿ ನಾಲ್ವರು ದಲಿತರ ಮೇಲೆ ನಡೆದ ಮಾರಣಾಂತಿಕ ಹಲ್ಲೆಯನ್ನು ನೆನಪಿಸಿದ್ದು ವ್ಯಾಪಕ ಪ್ರತಿಭಟನೆಗಳು ನಡೆಯುವ ಸಾಧ್ಯತೆಗಳಿವೆ. ಬಿಜೆಪಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ.