Advertisement

ಮತ್ತೆ ಪ್ರತಿಧ್ವನಿಸಿದ ದಲಿತ ಸಿಎಂ ಕೂಗು

11:22 PM Mar 06, 2024 | Team Udayavani |

ಬೆಂಗಳೂರು: ನಾವೆಲ್ಲ ಕಣ್ಣು ಮುಚ್ಚಿಕೊಂಡು ಯಾರಿಗಂದ್ರೆ ಅವರಿಗೆ ಮತ ಹಾಕಿದ್ದೇವೆ. ಮತ ನಮ್ಮದು, ನಾಯಕತ್ವ ಇನ್ಯಾರಧ್ದೋ ಆಗಿದೆ. ನಾವು ಒಗ್ಗಟ್ಟಾಗಿ ಮತ ಕೊಟ್ಟು, ನಮಗೆ ಮುಖ್ಯಮಂತ್ರಿ ಸ್ಥಾನ ಕೊಡಿ ಎಂದು ಕೇಳಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ| ಎಚ್‌. ಸಿ. ಮಹದೇವಪ್ಪ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಕರ್ನಾಟಕ ರಾಜ್ಯ ಸರಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಮನ್ವಯ ಸಮಿತಿ ಆಯೋಜಿಸಿದ್ದ ರಾಜ್ಯಮಟ್ಟದ 5ನೇ ಜಾಗೃತ ಸಮಾವೇಶದ ಸಮಾರಂಭ ಸಮಾರಂಭದಲ್ಲಿ ಬುಧವಾರ ಅನೇಕ ಬೇಡಿಕೆಗಳನ್ನು ಸಚಿವರ ಮುಂದಿಡಲಾಯಿತು. ಸಮಿತಿಯ ಮನವಿ ಪತ್ರ ಪಡೆದು ಭಾಷಣ ಮಾಡಿದ ಸಚಿವ ಮಹದೇವಪ್ಪ, ನಮಗೆ ಸಿಎಂ ಸ್ಥಾನ ಕೊಡಿ ಎಂದು ಕೇಳಿಕೊಳ್ಳುವ ಸ್ಥಿತಿ ನಿರ್ಮಾಣ ಆಗಿದೆ. ಇದಕ್ಕೆ ಕಾರಣ ಏನೆಂದರೆ, ನೀವ್ಯಾರೂ ನಿಮ್ಮ ನಾಯಕರನ್ನು ಅನುಸರಿಸುತ್ತಿಲ್ಲ ಎಂದು ಹೇಳಿದರು.

ನಾನು ನೀತಿ ನಿರೂಪಣೆ ಮಾಡುವ ಜಾಗದಲ್ಲಿಲ್ಲ
ಸಿದ್ದರಾಮಯ್ಯ ಅವರೇಕೆ ಮುಖ್ಯಮಂತ್ರಿ ಆದರು? ಯಡಿಯೂರಪ್ಪ ಯಾಕೆ ಮುಖ್ಯಮಂತ್ರಿ ಆದರು? ದೇವೇಗೌಡರು ಯಾಕೆ ಮುಖ್ಯಮಂತ್ರಿ ಆದರು? ಇದಕ್ಕೆಲ್ಲ ಉತ್ತರವೇನೆಂದರೆ ಅವರಿಗೆಲ್ಲ ಜನಬೆಂಬಲ ಇದೆ ಎಂದರು.

ನೀತಿ ನಿರೂಪಣೆ ಮಾಡುವಂತಹ ಜಾಗದಲ್ಲಿ ನಮ್ಮ ಜನ ಇರಬೇಕು ಎಂದು ಅಂಬೇಡ್ಕರ್‌ ಯಾಕೆ ಹೇಳಿದ್ದಾರೆ? ಇಟ್ಟಿದ್ದೀರಲ್ಲ ಬೇಡಿಕೆಗಳನ್ನು, ಅವುಗಳನ್ನು ಈಡೇರಿಸುವುದಕ್ಕೆ. ಆದರೆ ನಾನು ನೀತಿ ನಿರೂಪಣೆ ಮಾಡುವ ಜಾಗದಲ್ಲಿಲ್ಲ. ಪರಮೇಶ್ವರ್‌ ಅವರೂ ಇಲ್ಲ, ಖರ್ಗೆ ಅವರೂ ಇಲ್ಲ. ಯಾಕೆಂದರೆ ನೀವ್ಯಾರೂ ನಿಮ್ಮ ನಾಯಕರನ್ನು ಅನುಸರಿಸುತ್ತಿಲ್ಲ ಎನ್ನುವ ಮೂಲಕ ಬಹಿರಂಗವಾಗಿ ದಲಿತ ಸಿಎಂ ಚರ್ಚೆಗೆ ನಾಂದಿ ಹಾಡಿದರು.

ಮಾಧ್ಯಮಗಳ ಮೇಲೆ ಸಿಟ್ಟಾದ ಸಚಿವ
ಸಮಾರಂಭದ ಭಾಷಣದಲ್ಲಿ ಹೇಳಿದ್ದನ್ನು ಹೊರಗೆ ಬಂದ ಬಳಿಕ ಪ್ರಶ್ನಿಸಿದ ಮಾಧ್ಯಮಗಳ ಮೇಲೆ ಸಿಟ್ಟಾದ ಸಚಿವ ಮಹದೇವಪ್ಪ, ಅಂಬೇಡ್ಕರ್‌ ಅವರ ಸಿದ್ಧಾಂತವನ್ನು ನಾನು ಪ್ರತಿಪಾದಿಸಿದ್ದೇನೆ. ಅದಕ್ಕೆ ರಾಜಕೀಯವಾಗಿ ದಲಿತ ಸಿಎಂ ಎಂದರೆ ಹೇಗೆ? ಕೇವಲ ಮೀಸಲಾತಿಯಿಂದ ನನಗೆ ಸಂತೋಷ ಆಗಲಿಲ್ಲ. ಅಧಿಕಾರದ ನಿರ್ಣಾಯಕ ಸ್ಥಾನದಲ್ಲಿ ನನ್ನ ಜನ ಇರಬೇಕು ಎಂದು ಅಂಬೇಡ್ಕರ್‌ ಹೇಳಿದ್ದನ್ನು ಹೇಳಿದ್ದೇನೆ. ನೀತಿ ನಿರೂಪಣೆ ಮಾಡುವ ಎಸ್‌ಪಿ, ಡಿಸಿ, ನ್ಯಾಯಾಧೀಶರು, ಸಿಎಂ, ಪಿಎಂ, ರಾಷ್ಟ್ರಪತಿಯಂತಹ ಸ್ಥಾನಗಳಿಗೆ ಹೋಗಬೇಕು. ಒಂದು ಸಿದ್ಧಾಂತದ ಕೆಳಗೆ ಮತ ಕೊಡುತ್ತೀರಿ. ಜಾತಿ ರಾಜಕಾರಣದಲ್ಲಿ ಅದು ಯಶಸ್ವಿಯಾಗುತ್ತಿಲ್ಲ. ಜಾತಿ ಬೆಂಬಲ ಪಡೆದವರು ನಮ್ಮಿಂದ ಮತ ಪಡೆದು ನಮ್ಮನ್ನೇ ಆಳುತ್ತಾರೆ ಎಂದಿದ್ದೇನೆ. ಅದರಲ್ಲಿ ತಪ್ಪೇನಿದೆ ಎಂದು ಸಿಟ್ಟಿನಿಂದ ಪ್ರಶ್ನಿಸಿದರು. ಬಹುಜನರು ಒಂದಾಗಿದ್ದಾರೆ. ಅದರಿಂದಲೇ ಕಾಂಗ್ರೆಸ್‌ ಗೆಲ್ಲುತ್ತಿರುವುದು. ನಿಮಗೆ ಕಣ್ಣು ಕಾಣುವುದಿಲ್ಲವೇ? ಮಹಾರಾಷ್ಟ್ರ, ಒಡಿಶಾ ಸಹಿತ ಅನೇಕ ರಾಜ್ಯಗಳಲ್ಲಿ ದಲಿತರನ್ನು ಸಿಎಂ ಮಾಡಿದ್ದು ನಮ್ಮ ಪಕ್ಷವೇ. ದೇಶದಲ್ಲಿ 31 ರಾಜ್ಯಗಳಿವೆ. ಶೇ.24ರಷ್ಟು ಎಸ್‌ಸಿ, ಎಸ್ಟಿ ಸಮುದಾಯವಿದೆ. ಈ ಲೆಕ್ಕದಲ್ಲಿ ಎಷ್ಟು ರಾಜ್ಯಗಳಲ್ಲಿ ದಲಿತ ಸಿಎಂ ಮಾಡಬೇಕು? ಇಡೀ ದೇಶದಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಈ ದಿಕ್ಕಿನಲ್ಲಿ ಚಿಂತನೆ ನಡೆಸಬೇಕು. ಎಲ್ಲಿ ಯಾವಾಗ ಹೇಳಬೇಕೋ ಅಲ್ಲಿ ಹೇಳುತ್ತೇವೆ. ಎಲ್ಲವನ್ನೂ ಮಾಧ್ಯಮಗಳನ್ನು ಕೇಳಿ ಹೇಳಬೇಕೇ ಎಂದು ಗರಂ ಆದರು.

Advertisement

ಸಚಿವ ಮಹದೇವಪ್ಪ ಅವರ ದಲಿತ ಸಿಎಂ ಹೇಳಿಕೆ ಸದ್ಯಕ್ಕೆ ಅಪ್ರಸ್ತುತ ಚರ್ಚೆ. ಸಿದ್ದರಾಮಯ್ಯನವರೇ ನಮ್ಮ ಸಿಎಂ. ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ನಮ್ಮ ಸರಕಾರ ಚೆನ್ನಾಗಿ ನಡೆಯುತ್ತಿದೆ. ನಮ್ಮ ಪಂಚ ಗ್ಯಾರಂಟಿ ಯೋಜನೆ ಸೌಲಭ್ಯವನ್ನು 4 ಕೋಟಿ ಜನರು ಪಡೆದಿದ್ದಾರೆ. 136 ಶಾಸಕರು ಆಯ್ಕೆಯಾಗಿದ್ದೇವೆ. ಸಿಎಂ, ಡಿಸಿಎಂ ನೇತೃತ್ವದಲ್ಲೇ ಲೋಕಸಭೆ ಚುನಾವಣೆ ಎದುರಿಸಿ 15- 20 ಸ್ಥಾನ ಗೆಲ್ಲುತ್ತೇವೆ.
– ಪ್ರಿಯಾಂಕ್‌ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ

ಲೋಕಸಭೆ ಚುನಾವಣೆಯ ಸ್ಪರ್ಧಿ ನಾನಲ್ಲ. ಪದೇಪದೆ ಕೇಳಬೇಡಿ. ಬಹುಜನರ ಸಂಖ್ಯೆ ಜಾಸ್ತಿ ಆಗಿರಬಹುದು. ನಾವಂತೂ ಟಿಕೆಟ್‌ ಕೊಡಿ ಎಂದು ಕೇಳಿಲ್ಲ. ಪಕ್ಷ ಅವಕಾಶ ಮಾಡಿಕೊಟ್ಟರೆ ಗೆಲುವು ಸಿಗುತ್ತದೆ. ಸುನಿಲ್‌ ಬೋಸ್‌ ಅವರಿಗೆ ಟಿಕೆಟ್‌ ಕೊಡುವ ವಿಚಾರ ಗೊತ್ತಿಲ್ಲ. ಸ್ಥಳೀಯ ವೀಕ್ಷಕ ದಿನೇಶ್‌ ಗುಂಡೂರಾವ್‌ ಅವರು ಏನು ವರದಿ ಕೊಟ್ಟಿದ್ದಾರೋ ಗೊತ್ತಿಲ್ಲ.
– ಡಾ| ಎಚ್‌.ಸಿ. ಮಹೇವಪ್ಪ, ಸಮಾಜ ಕಲ್ಯಾಣ ಸಚಿ

 

Advertisement

Udayavani is now on Telegram. Click here to join our channel and stay updated with the latest news.

Next