Advertisement

ಮೈತ್ರಿಗೆ ದಲಿತ ಸೂತ್ರ?

06:00 AM May 14, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮತ್ತೆ ನಾನೇ ಮುಖ್ಯಮಂತ್ರಿ ಎಂದು ಹೇಳುತ್ತಿದ್ದ ಸಿಎಂ ಸಿದ್ದರಾಮಯ್ಯ, “”ದಲಿತರೊಬ್ಬರನ್ನು ಮುಖ್ಯಮಂತ್ರಿ ಮಾಡುವುದಾದರೆ ಸ್ಥಾನ ಬಿಟ್ಟುಕೊಡಲು ಸಿದ್ಧ” ಎಂದು ಹೇಳುತ್ತಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಜೆಡಿಎಸ್‌ ಜತೆ ಸೇರಿ ಕಾಂಗ್ರೆಸ್‌ ಸರ್ಕಾರ ರಚಿಸಲು ಇದು ಮುನ್ನುಡಿ ಎಂದು ವಿಶ್ಲೇಷಿಸಲಾಗುತ್ತಿದೆ.

Advertisement

ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಸ್ವಾಗತಿಸಿದರೆ, ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾನೆಂದೂ ಮುಖ್ಯಮಂತ್ರಿ ಹುದ್ದೆಗೆ ಅರ್ಜಿ ಹಾಕಿಲ್ಲ, ಹಾಕುವುದೂ ಇಲ್ಲ. ದಲಿತ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಹುದ್ದೆ ನೀಡುವ ಬದಲು ಕಾಂಗ್ರೆಸ್‌ ಕಾರ್ಯಕರ್ತ, ಮುಖಂಡ ಎಂದು ನೀಡಿದರೆ ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಇದರಿಂದಾಗಿ ಕಾಂಗ್ರೆಸ್‌ನಲ್ಲಿ ದಲಿತ ಮುಖ್ಯಮಂತ್ರಿ ಪ್ರಸ್ತಾಪ ಮತ್ತೆ ಚರ್ಚೆಯ ಮುಂಚೂಣಿಗೆ ಬಂದಂತಾಗಿದೆ ಮಾತ್ರವಲ್ಲ, ಅತಂತ್ರ ವಿಧಾನಸಭೆ ಸೃಷ್ಟಿಯಾದರೆ ಬಿಜೆಪಿ ಮತ್ತು ಜೆಡಿಎಸ್‌ ಸೇರಿ ಸರ್ಕಾರ ರಚನೆ ಮಾಡದಂತೆ ನೋಡಿಕೊಳ್ಳುವ ಉದ್ದೇಶವೂ ಮುಖ್ಯಮಂತ್ರಿಗಳ ಹೇಳಿಕೆ ಹಿಂದಿದೆ ಎಂದು ಹೇಳಲಾಗುತ್ತಿದೆ.

ಜೆಡಿಎಸ್‌ ಜತೆ ಮೈತ್ರಿಗೆ ಸಿಎಂ ಅಡ್ಡಿ:
ಸಿದ್ದರಾಮಯ್ಯ ಅವರು ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿ ಮುಖ್ಯಮಂತ್ರಿಯಾಗಿರುವುದು ಮತ್ತು ನಂತರದಲ್ಲಿ ಜೆಡಿಎಸ್‌ನ ಏಳು ಶಾಸಕರನ್ನು ಕಾಂಗ್ರೆಸ್‌ಗೆ ಸೆಳೆದುಕೊಂಡಿರುವುದು ಜೆಡಿಎಸ್‌ ವರಿಷ್ಠ ಮತ್ತು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಕೂಡ ಈ ವಿಚಾರದಲ್ಲಿ ಸಿದ್ದರಾಮಯ್ಯ ಅವರೊಂದಿಗೆ ಮುನಿಸಿಕೊಂಡಿದ್ದಾರೆ. ಈ ಮಧ್ಯೆ ಚುನಾವಣಾ ಪ್ರಚಾರದ ವೇಳೆ ದೇವೇಗೌಡರು ಮತ್ತು ಆ ಪಕ್ಷದ ವಿರುದ್ಧ ಸಿದ್ದರಾಮಯ್ಯ ಅವರು ನೀಡಿದ ಹೇಳಿಕೆಗಳು, ಅವರ ವರ್ತನೆ ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಸಿಟ್ಟನ್ನು ಹೆಚ್ಚಿಸಿದೆ. ಈ ಕಾರಣಕ್ಕಾಗಿಯೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಎಲ್ಲ ರೀತಿಯ ಕಾರ್ಯತಂತ್ರಗಳನ್ನೂ ಜೆಡಿಎಸ್‌ ಹೆಣೆದಿತ್ತು.

ಈ ಎಲ್ಲಾ ಕಾರಣಗಳಿಂದಾಗಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ಜತೆ ಹೋಗಲು ದೇವೇಗೌಡ ಮತ್ತು ಕುಮಾರಸ್ವಾಮಿ ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳುವುದಿಲ್ಲ. ಅಲ್ಲದೆ, ಜೆಡಿಎಸ್‌ ಅಧಿಕಾರಕ್ಕೆ ಬಂದರೆ ದಲಿತರೊಬ್ಬರನ್ನು ಉಪಮುಖ್ಯಮಂತ್ರಿ ಮಾಡುವುದಾಗಿ ಜೆಡಿಎಸ್‌ ಈಗಾಗಲೇ ಘೋಷಿಸಿದೆ. ಇದನ್ನೇ ಮುಂದಿಟ್ಟುಕೊಂಡು ದಲಿತರನ್ನು ಮುಖ್ಯಮಂತ್ರಿ ಮಾಡುವುದಾಗಿ ಹೇಳಿ ಜೆಡಿಎಸ್‌ ಪಕ್ಷವನ್ನು ಕಾಂಗ್ರೆಸ್‌ನ ಸಮೀಪ ಬರುವಂತೆ ಮಾಡಿ ತಾವು ಮುಖ್ಯಮಂತ್ರಿ ಹುದ್ದೆಯಿಂದ ದೂರ ಉಳಿಯುವುದು. ಒಂದೊಮ್ಮೆ ದಲಿತರನ್ನು ಮುಖ್ಯಮಂತ್ರಿ ಮಾಡುವುದಾಗಿ ಹೇಳಿದರೂ, ಜೆಡಿಎಸ್‌ ಬೆಂಬಲಿಸದಿದ್ದರೆ ಅವರು ಕೋಮುವಾದಿಗಳೊಂದಿಗೆ ಕೈಜೋಡಿಸಿದ್ದಾರೆ ಎಂಬ ತಮ್ಮ ಈಗಿನ ಆರೋಪ ನಿಜವಾಗಿದೆ ಎಂದು ಹೇಳಿಕೊಳ್ಳುವುದು ಸಿದ್ದರಾಮಯ್ಯ ಅವರ ಈ ಹೇಳಿಕೆ ಹಿಂದಿರುವ ಮರ್ಮ ಎಂದು ಹೇಳಲಾಗುತ್ತಿದೆ.

Advertisement

ಮೇ 15ರಂದು ಪೂರ್ಣ ಪ್ರಮಾಣದ ಫ‌ಲಿತಾಂಶ ಬರಲಿದ್ದು, ಸಂಜೆಯ ವೇಳೆ ಬಿಜೆಪಿ ನೇತೃತ್ವದ ಸರ್ಕಾರ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬರಲಿದೆ.
– ಅಮಿತ್‌ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ

ದಲಿತರು ಸಿಎಂ ಆಗುವುದಾದರೆ ನನ್ನ ತಕರಾರಿಲ್ಲ. ಇದಕ್ಕೆ ಶಾಸಕಾಂಗ ಪಕ್ಷ ಮತ್ತು ಹೈಕಮಾಂಡ್‌ ಒಪ್ಪಿಗೆ ಬೇಕಾಗುತ್ತದೆ. ಹೈಕಮಾಂಡ್‌ ದಲಿತ ಮುಖ್ಯಮಂತ್ರಿ ಮಾಡುವುದಾಗಿ ಹೇಳಿದರೆ ಸ್ಥಾನ ಬಿಟ್ಟು ಕೊಡಲು ಸಿದ್ಧ, ಈ ವಿಷಯದಲ್ಲಿ ನನ್ನ ತಕರಾರು ಏನೂ ಇಲ್ಲ.
– ಸಿದ್ದರಾಮಯ್ಯ, ಮುಖ್ಯಮಂತ್ರಿ

ನಾನೆಂದೂ ಸಿಎಂ ಹುದ್ದೆಗೆ ಅರ್ಜಿ ಹಾಕಿಲ್ಲ, ಹಾಕುವುದೂ ಇಲ್ಲ. ನನ್ನನ್ನು ಕಾಂಗ್ರೆಸ್‌ ಹಿರಿಯ ನಾಯಕ ಎಂದು ಕರೆಯಲು ಮುಜುಗರವಾಗುತ್ತಿದ್ದರೆ ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತ ಎಂದು ಹೇಳಲಿ. ದಲಿತ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಹುದ್ದೆ ಬೇಡ.
– ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ಕಾಂಗ್ರೆಸ್‌ ನಾಯಕ

ಪಕ್ಷಗಳ ಸಮೀಕ್ಷೆಯ ನಂಬರ್‌ ಎಷ್ಟು?
ಕಾಂಗ್ರೆಸ್‌/ 122:
130 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹೇಳಿಕೊಳ್ಳುತ್ತಿದ್ದ ಕಾಂಗ್ರೆಸ್‌ ಈಗ 122 ಸ್ಥಾನ ಉಳಿಸಿಕೊಳ್ಳುತ್ತೇವೆ ಎನ್ನುತ್ತಿದೆ.
ಬಿಜೆಪಿ/ 120: ಮಿಷನ್‌ 150+ ಎಂದು ಹೇಳಿಕೊಳ್ಳುತ್ತಿದ್ದ ಬಿಜೆಪಿ ಈಗ 120 ಸ್ಥಾನ ಖಡಾಖಂಡಿತವಾಗಿ ಗೆಲ್ಲುತ್ತೇವೆ ಎಂದು ಹೇಳಿದೆ.
ಜೆಡಿಎಸ್‌: 113: ಜೆಡಿಎಸ್‌ ಮಾತ್ರ ಈಗಲೂ ಬಹುಮತ ನಮ್ಮದೇ ಎನ್ನುವುದರ ಜತೆಗೆ 113 ಸ್ಥಾನ ಗೆಲ್ಲೋದು ಗ್ಯಾರಂಟಿ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next