Advertisement

“ಕಮಲ’ದಲ್ಲಿ “ದಳ’ಪತಿಗಳು ಅರಳುವುದು ಸುಲಭವಲ್ಲ!

03:05 PM Jan 19, 2018 | |

ರಾಯಚೂರು: ವಿಧಾನಸಭೆ ಚುನಾವಣೆಗೆ ಇನ್ನೂ ಮೂರ್‍ನಾಲ್ಕು ತಿಂಗಳಿರುವಾಗಲೇ ಜಿಲ್ಲೆಯ ಇಬ್ಬರು ಶಾಸಕರು ತಮ್ಮ ಶಾಸಕಾಂಗ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯದ ಗಮನ ಸೆಳೆದಿದ್ದಾರೆ. ಇಬ್ಬರು ಪ್ರತಿಪಕ್ಷದಲ್ಲಿರುವ ಕಾರಣ ಜಿಲ್ಲೆಗೆ ಅಷ್ಟೇನು ನಷ್ಟವಾಗದಿದ್ದರೂ ಜಿಲ್ಲೆಯಲ್ಲಿ ಜೆಡಿಎಸ್‌ಗೆ ಮಾತ್ರ ಭಾರೀ ಹಿನ್ನಡೆಯಾಗುವ ಸಾಧ್ಯತೆಗಳಿವೆ.

Advertisement

ಕಳೆದ ಚುನಾವಣೆಯಲ್ಲಿ ಜಲ್ಲೆಯ ಮತದಾರರು ಯಾವುದೇ ಪಕ್ಷಕ್ಕೂ ಬದ್ಧರಾಗದೆ ಮೂರೂ ಪಕ್ಷಗಳಿಗೂ ಆಶೀರ್ವದಿಸಿದ್ದರು. ಏಳು ವಿಧಾನಸಭೆ ಕ್ಷೇತ್ರಗಳಲ್ಲಿ ಮೂರು ಕಾಂಗ್ರೆಸ್‌ ಪಾಲಾದರೆ, ಬಿಜೆಪಿ, ಜೆಡಿಎಸ್‌ಗೆ ತಲಾ ಎರಡು ಸ್ಥಾನ ಸಿಕ್ಕಿದ್ದವು. ಇದರಿಂದ ಜಿಲ್ಲೆಯಲ್ಲಿ ಯಾವುದೇ ಪಕ್ಷ ಪ್ರಬಲ ಎಂದು ಹೇಳುವುದು ಕಷ್ಟವಾಗಿತ್ತು. ಆದರೆ, ಜೆಡಿಎಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಇಬ್ಬರು ಶಾಸಕರು ಈಗ ಕಮಲ ಹಿಡಿದಿರುವುದು ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಬಿಜೆಪಿಗೆ ತಕ್ಕಮಟ್ಟಿಗೆ ಬಲ ಬಂದಂತಾಗಿದೆ.

ಪಕ್ಷದ ಆಂತರಿಕ ಭಿನ್ನಮತವೇ ಪಕ್ಷ ತೊರೆಯಲು ಕಾರಣ ಎಂದು ಶಾಸಕರಿಬ್ಬರು ಹೇಳುತ್ತಿದ್ದಾರಾದರೂ, ಇದರ ಹಿಂದೆ ಬೇರೆಯದ್ದೇ ಲೆಕ್ಕಾಚಾರಗಳಿವೆ. ಆಡಳಿತ ಪಕ್ಷದ ವಿರೋಧಿ ಅಲೆ ಹಾಗೂ ದೇಶದಲ್ಲಿ ಬಿಜೆಪಿ ಪ್ರಾಬಲ್ಯ ಅರಿತು ಪಕ್ಷಾಂತರ ಮಾಡಿರುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.

ಗೆಲುವು ಸುಲಭವಲ್ಲ: ಬಿಜೆಪಿ ವರಿಷ್ಠರೊಂದಿಗೆ ಮಾತುಕತೆ ನಡೆಸಿ ಟಿಕೆಟ್‌ ನೀಡುವ ಬಗ್ಗೆ ಖಚಿತಪಡಿಸಿಕೊಂಡ ನಂತರವೇ ಶಾಸಕರು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ, ಬಿಜೆಪಿಯಲ್ಲಿನ ಈಗಿನ ಸ್ಥಿತಿಗತಿ ಅವಲೋಕಿಸಿದರೆ ಗೆಲುವು ಸುಲಭ ಸಾಧ್ಯವಲ್ಲ. ಲಿಂಗಸುಗೂರು ಮಟ್ಟಿಗೆ ಶಾಸಕ ವಜ್ಜಲ್‌ ಸ್ವಂತ ವರ್ಚಸ್ಸಿನ ಜತೆಗೆ ಪಕ್ಷದ ಪ್ರಾಬಲ್ಯದೊಂದಿಗೆ ಪ್ರಬಲ ಸೆಣಸಾಟ ಮಾಡಬಹುದು. ಆದರೆ, ಬಿಜೆಪಿ ಆಕಾಂಕ್ಷಿಗಳೆಂದೇ ಬಿಂಬಿಸಿಕೊಂಡ ಉಮೇಶ ಕಾರಜೋಳ, ಸಿದ್ದು ಬಂಡಿ ಅವರನ್ನು ಮನವೊಲಿಸಿದಲ್ಲಿ ವಜ್ಜಲ್‌ ಹಾದಿ ಸುಗಮವಾಗಬಹುದು. ಜೆಡಿಎಸ್‌ ಅಭ್ಯರ್ಥಿ ಆಲ್ಕೋಡ್‌ ಹನುಮಂತಪ್ಪ, ಕಾಂಗ್ರೆಸ್‌ನ ಡಿ.ಎಸ್‌.ಹುಲಿಗೇರಿ ತಮ್ಮದೇ ಸಾಮರ್ಥ್ಯ ಹೊಂದಿದ ನಾಯಕರಾಗಿದ್ದು, ವಜ್ಜಲ್‌ ಗೆಲುವಿನ ಹಾದಿ ಸುಗಮವೇನಿಲ್ಲ.

ನಗರ ಕ್ಷೇತ್ರದಲ್ಲಿ ಮಾತ್ರ ಬಿಜೆಪಿಯಲ್ಲೇ ಪ್ರಬಲ ವಿರೋಧ ವ್ಯಕ್ತವಾಗುವ ಸಾಧ್ಯತೆಯಿದೆ. ಜತೆಗೆ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಮತಗಳು ನಿರ್ಣಾಯಕವಾಗಿರುವ ಕಾರಣ ಕಾಂಗ್ರೆಸ್‌ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದರ ಮೇಲೂ ಡಾ| ಶಿವರಾಜ್‌ ಪಾಟೀಲ್‌ ಗೆಲುವು ನಿರ್ಧರಿತವಾಲಿದೆ. ಕಳೆದ ಬಾರಿ ಹೀನಾಯ ಸೋಲುಂಡಿದ್ದ ಬಿಜೆಪಿಗೆ ಈ ಬಾರಿ ತುಸು ಚೇತರಿಕೆ ಕಂಡಿದೆ. ಪಕ್ಷದಲ್ಲಿ 12 ಜನ ಅಭ್ಯರ್ಥಿಗಳಿದ್ದಾರೆ ಎಂಬ ಕೆಟ್ಟ ಸಂದೇಶ ರವಾನೆಯಾಗುತ್ತಿದ್ದು, ಪಕ್ಷಕ್ಕೆ ಡ್ಯಾಮೇಜ್‌ ಆಗುತ್ತಿದೆ. ಆದರೆ, ಶಿವರಾಜ್‌ ಪಾಟೀಲ್‌ ಅಭ್ಯರ್ಥಿಯಾದಲ್ಲಿ ಇಲ್ಲೂ ನೇರ ಹಣಾಹಣಿ ಏರ್ಪಡುವುದು ಬಹುತೇಕ ಖಚಿತ.

Advertisement

ಸಂಭ್ರಮಾಚರಣೆ: ಶಾಸಕರಿಬ್ಬರು ಬೆಂಗಳೂರಿನಲ್ಲಿ ಬಿಜೆಪಿ ಸೇರುತ್ತಿದ್ದಂತೆ ನಗರದಲ್ಲಿ ಬೆಂಬಲಿಗರು ಬೈಕ್‌ ರ್ಯಾಲಿ ನಡೆಸುವ ಮೂಲಕ ಸಂಭ್ರಮಾಚರಣೆ ಮಾಡಿದರು. ಗರಡಿ ಮನೆಯಂತಾದ ಜೆಡಿಎಸ್‌ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಜಿಲ್ಲೆಗೆ ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿಗೊಳಿಸುವ ಮೂಲಕ ದೊಡ್ಡ ಕೊಡುಗೆ ನೀಡಿದ್ದರು. ಇದರಿಂದ ಜಿಲ್ಲೆಗೆ ಜೆಡಿಎಸ್‌ ಕೊಡುಗೆ ಅಪಾರ ಎಂದೇ ಹೇಳಬಹುದು. ಅಂಥ ಪಕ್ಷ ಈಗ ಜನಪ್ರತಿನಿ ಧಿಗಳ ಪಾಲಿಗೆ ಗರಡಿಯಂತಾಗಿರುವುದು ವಿಪರ್ಯಾಸ. ಹಿಂದೆ ದೇವದುರ್ಗ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆಲುವು ಸಾ ಧಿಸಿದ್ದ ಕೆ.ಶಿವನಗೌಡ ನಾಯಕ ಕೆಲವೇ ದಿನಗಳಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಈಗ ಡಾ.ಶಿವರಾಜ್‌ ಪಾಟೀಲ್‌ ಕೂಡ ಇನ್ನೂ ಅಧಿಕಾರಾವಧಿ ಇರುವಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶಾಸಕ ಮಾನಪ್ಪ ವಜ್ಜಲ್‌ ಹಿಂದೆ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಕಳೆದ ಬಾರಿ ಜೆಡಿಎಸ್‌ಗೆ ಬಂದು ಶಾಸಕರಾಗಿ ಆಯ್ಕೆಯಾಗಿದ್ದರು. ಈಗ ಪುನಃ ಬಿಜೆಪಿ ಕಡೆ ತೆರಳುತ್ತಿದ್ದಾರೆ. ಇದರಿಂದ ಜೆಡಿಎಸ್‌ ಜಿಲ್ಲೆಯ ಜನಪ್ರತಿನಿಧಿಗಳ ಪಾಲಿಗೆ ಗರಡಿಮನೆಯಂತಾಗಿದೆ ಎಂಬ ಮಾತು ಕೇಳಿ ಬರುತ್ತಿವೆ. ಜೆಡಿಎಸ್‌ಗೆ ಸವಾಲು: ಈಗಾಗಲೇ ಲಿಂಗಸುಗೂರು ಕ್ಷೇತ್ರದಲ್ಲಿ ಅನೇಕ ಕಾರ್ಯಕರ್ತರು ಜೆಡಿಎಸ್‌ಗೆ ರಾಜೀನಾಮೆ ನೀಡಿದ್ದಾರೆ.

ರಾಯಚೂರು ಕ್ಷೇತ್ರದಲ್ಲೂ ಶೀಘ್ರದಲ್ಲೇ ಡಾ| ಶಿವರಾಜ್‌ ಪಾಟೀಲ್‌ ಬೆಂಬಲಿಗರು ಬಿಜೆಪಿ ಸೇರುವ ಸಾಧ್ಯತೆಗಳಿವೆ. ಇದರಿಂದ ಚುನಾವಣೆ ಮುನ್ನೆಲೆಯಲ್ಲಿ ಮತ್ತೆ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವುದು ಜೆಡಿಎಸ್‌ ಮುಖಂಡರಿಗೆ ಸವಾಲಿನ ಕೆಲಸ ಎಂದೇ ಹೇಳಬಹುದು.

ಡಾ| ಶಿವರಾಜ್‌ ಪಾಟೀಲ್‌ ರಾಜೀನಾಮೆ ಬೆನ್ನಲ್ಲೇ ಬೆಂಬಲಿಗರು ಬಿಜೆಪಿ ಸೇರುವ ಸಾಧ್ಯತೆಗಳಿವೆ. ಜೆಡಿಎಸ್‌ನಲ್ಲಿ ಎರಡು ಬಣಗಳಿದ್ದು, ಜಿಲ್ಲಾಧ್ಯಕ್ಷರೇ ಶಾಸಕರ ವಿರುದ್ಧ ದಿಕ್ಕಿನಲ್ಲಿದ್ದರು. ಹೀಗಾಗಿ ಶಾಸಕರ ಗುಂಪು ಪ್ರತ್ಯೇಕತೆ ತೋರುತ್ತ ಬಂದಿದೆ. ಈಗಲೂ ಅವರ ಹಿಂದೆ ಬಿಜೆಪಿಗೆ ತೆರಳಲು ಅನೇಕ ಮುಖಂಡರು ಸಿದ್ಧತೆ ನಡೆಸಿದ್ದಾರೆ. ಸಮಾನ ಮನಸ್ಕರೆಲ್ಲ ಸಭೆ ನಡೆಸಿ ಶೀಘ್ರದಲ್ಲೇ ಮುಂದಿನ ನಡೆ ಬಗ್ಗೆ ನಿರ್ಧರಿಸಲಾಗುವುದು. 
 ಎನ್‌. ಶಿವಶಂಕರ, ಜೆಡಿಎಸ್‌ ಜಿಲ್ಲಾ ಕಾರ್ಯಾಧ್ಯಕ್ಷ 

ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next