ಹುಣಸೂರು: ಟಿಬೆಟಿಯನ್ನರ ಆರಾದ್ಯ ದೈವ, ನೋಬಲ್ ಪ್ರಶಸ್ತಿ ಪುರಸ್ಕೃತ ದಲೈಲಾಮ 83ನೇ ಹುಟ್ಟುಹಬ್ಬದ ಅಂಗವಾಗಿ ತಾಲೂಕಿನ ಗುರುಪುರ ಟಿಬೆಟಿಯನ್ನರ ನಿರಾಶ್ರಿತರ ಶಿಬಿರದ ಟಿಬೆಟಿಯನ್ ಮುಖಂಡರು ಗುರುಪುರ ಸುತ್ತಮುತ್ತಲ ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಸಂಭ್ರಮಿಸಿದರು.
ಗುರುಪುರ ಸರ್ಕಾರಿ ಕಿರಿಯ, ಹಿರಿಯ ಪ್ರಾಥಮಿಕ ಶಾಲೆ, ಉರ್ದು ಶಾಲೆ, ನಾಗಪುರದ ಸರ್ಕಾರಿ ಪ್ರೌಢಶಾಲೆ ಹಾಗೂ ಗಿರಿಜನ ಆಶ್ರಮ ಶಾಲೆಯ ಒಟ್ಟು 900ಕ್ಕೂ ಹೆಚ್ಚು ಮಕ್ಕಳಿಗೆ ಸಿಹಿ ಹಂಚಿ ಹುಟ್ಟು ಹಬ್ಬ ಆಚರಿಸಲಾಯಿತು.
ಈ ವೇಳೆ ಟಿಬೆಟಿಯನ್ ನಿರಾಶ್ರಿತರ ಶಿಬಿರದ ಅಧಿಕಾರಿ ಲಾಕಾ³ ಡೋಲ್ಮಾ ಮಾತನಾಡಿ, ಟಿಬೆಟಿಯನ್ನರ ಧಾರ್ಮಿಕ ಗುರು, ವಿಶ್ವದ 6 ಮಿಲಿಯನ್ ಟಿಬೆಟಿಯನ್ನರ ಸ್ವಾತಂತ್ರ್ಯಕ್ಕಾಗಿ ದಲೈಲಾಮ ಹೋರಾಟ ನಡೆಸುತ್ತಿರುವ ಮಹಾ ಸಂತ ದಲೈಲಾಮರ 83ನೇ ಹುಟ್ಟುಹಬ್ಬ ನಮಗೆ ಅತೀವ ಸಂತಸ ತಂದಿದೆ.
ತಾಯಿನೆಲ ಟಿಬೆಟ್ ಆದರೆ, ನಮಗೆ ಬದುಕುಕೊಟ್ಟ ನೆಲ ಭಾರತ. ಕಳೆದ 50 ವರ್ಷಗಳಿಂದ ನಾವಿಲ್ಲಿ ನೆಲೆಸಿದ್ದೇವೆ. ಇಲ್ಲಿನ ಸರಕಾರಗಳು ಹಾಗೂ ಸ್ಥಳೀಯರು ನಮ್ಮನ್ನು ತಮ್ಮ ಕುಟುಂಬದವರಂತೆ ನೋಡಿಕೊಳ್ಳುತ್ತಿದ್ದು, ಎಲ್ಲರ ಸಹಕಾರ, ಸಹಾನುಭೂತಿ ನಾವ್ಯಾರು ಮರೆಯುವಂತಿಲ್ಲ, ನಾವೆಲ್ಲ ಈ ದೇಶದ ನಾಗರಿಕರಿಗೆ ಚಿರಋಣಿಯಾಗಿದ್ದೇವೆ ಎಂದು ಹೇಳಿದರು.
ಟಿಬೆಟಿಯನ್ ಮೂಮೆಂಟ್ ಅಧ್ಯಕ್ಷ ಕೆಲ್ಸಂಗ್, ಸಹಕಾರಿ ಸಂಘದ ಕಾರ್ಯದರ್ಶಿ ಛೋಫಲ್, ಅಸೆಂಬ್ಲಿ ಅಧ್ಯಕ್ಷ ಕೈಪಾಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.