ಮಂಗಳೂರು : ಪ್ರಜಾಪ್ರಭುತ್ವದಲ್ಲಿ ಮತದಾರ ಪ್ರಭು ಅತ್ಯಂತ ಪ್ರಮುಖ ವ್ಯಕ್ತಿ. ಜಿಲ್ಲೆ, ವಿಧಾನ ಸಭಾ ಕ್ಷೇತ್ರಗಳಲ್ಲಿರುವ ಮೂಲಭೂತ ಸಮಸ್ಯೆಗಳ ನಿವಾರಣೆಗೆ ಶ್ರಮಿಸುವ ಅರ್ಹ ಜನಪ್ರತಿನಿಧಿಯನ್ನು ಆಯ್ಕೆ ಮಾಡಲು ಪ್ರಜಾಪ್ರಭುತ್ವ ನಮಗೆ ನೀಡಿರುವ ಮತದಾನದ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಹೇಳಿದರು.
ಪುರಭವನದಲ್ಲಿ ಜಿಲ್ಲಾಡಳಿತ, ಜಿ.ಪಂ. ಹಾಗೂ ಮನಪಾ ವತಿಯಿಂದ ಬುಧವಾರ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶೇ. 37ರಷ್ಟು ಯುವ ಮತದಾರರು ಇರುವ ಪ್ರಜಾಪ್ರಭುತ್ವ ದೇಶ ಭಾರತ. 18 ವರ್ಷ ತುಂಬಿದ ಪ್ರತಿಯೊಬ್ಬರು ತಮ್ಮ ಭವಿಷ್ಯದ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ಸಂವಿಧಾನ ನೀಡಿರುವ ಹಕ್ಕನ್ನು ಚಲಾಯಿಸಬೇಕು. ಮುಖ್ಯವಾಗಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿ, ಗುರುತಿನ ಚೀಟಿ ಪಡೆದು ಮತ ಚಲಾಯಿಸಿ ಉತ್ತಮ ಜನಪ್ರತಿನಿಧಿ ಆಯ್ಕೆ ಮಾಡಬೇಕು ಎಂದರು.
ಪಶ್ಚಿಮ ವಲಯದ ಡಿಐಜಿ ಚಂದ್ರಗುಪ್ತ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಭಗವಾನ್ ಸೋನಾವಣೆ, ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ರಥಬೀದಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಜಯಕರ್ ಭಂಡಾರಿ ಉಪಸ್ಥಿತರಿದ್ದರು.
Related Articles
ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಸ್ವಾಗತಿಸಿದರು. ಸಹಾಯಕ ಆಯುಕ್ತ ಮದನ್ ಮೋಹನ್ ವಂದಿಸಿದರು.
ಗುರುತಿನ ಚೀಟಿ ವಿತರಣೆ
18 ವರ್ಷ ತುಂಬಿದ ನವ ಮತದಾರರಿಗೆ ಚುನಾವಣ ಗುರುತಿನ ಚೀಟಿಗಳನ್ನು ವಿತರಿಸಲಾಯಿತು. ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕ್ವಿಜ್, ಪ್ರಬಂಧ ಸೇರಿದಂತೆ ವಿವಿಧ ರೀತಿಯ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.