Advertisement

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ : 15 ತಿಂಗಳಲ್ಲಿ 324ಕ್ಕೂ ಅಧಿಕ ಮಹಿಳೆಯರು ನಾಪತ್ತೆ!

01:36 AM May 04, 2022 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಳೆದ 15 ತಿಂಗಳಲ್ಲಿ 324ಕ್ಕೂ ಅಧಿಕ ಮಹಿಳೆಯರು ನಾಪತ್ತೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ!

Advertisement

ನಾಲ್ಕೂವರೆ ವರ್ಷಗಳಲ್ಲಿ ಉಭಯ ಜಿಲ್ಲೆಗಳಲ್ಲಿ 679ಕ್ಕೂ ಅಧಿಕ ಮಹಿಳೆಯರ ನಾಪತ್ತೆ ಪ್ರಕರಣಗಳು ದಾಖಲಾಗಿದ್ದು, ಬಹುತೇಕ ಮಂದಿ ಪತ್ತೆಯಾಗಿದ್ದಾರೆ. ಈ ಪೈಕಿ ದ.ಕ. ಜಿಲ್ಲೆಯಲ್ಲಿ 35 ಮತ್ತು ಉಡುಪಿ ಜಿಲ್ಲೆಯಲ್ಲಿ 10 ಮಂದಿ ಪತ್ತೆಗೆ ಬಾಕಿ ಇದ್ದಾರೆ.

ಕಾರಣವೇನು?
ಮಹಿಳೆಯರ ನಾಪತ್ತೆಗೆ ವಿಭಿನ್ನ ಕಾರಣಗಳು ಕಂಡುಬಂದಿವೆ. ಕೌಟುಂಬಿಕ ಕಲಹ, ಪ್ರೇಮ ಪ್ರಕರಣ, ಉದ್ಯೋಗ, ಆಮಿಷ, ಮಾನಸಿಕ ಅಸ್ವಾಸ್ಥ é ಮೊದಲಾದುವು ಪ್ರಮುಖ ಎಂದು ಪೊಲೀಸರು ಮತ್ತು ಆಪ್ತ ಸಮಾಲೋಚಕರು ಗುರುತಿಸಿದ್ದಾರೆ.

ಕೊರೊನಾ ಕಾಲದಲ್ಲಿ ಹೆಚ್ಚು
ಬಹುತೇಕ ಪ್ರಕರಣ ಕೊರೊನಾ ಅವಧಿಯಲ್ಲಾಗಿದೆ. 2020 ಮತ್ತು 2021ರಲ್ಲಿ ದ.ಕ. ಜಿಲ್ಲೆಯಲ್ಲಿ 293, ಉಡುಪಿಯಲ್ಲಿ 164 ಮಂದಿ ನಾಪತ್ತೆಯಾಗಿದ್ದರು. ದ.ಕ. ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ 2022ರ ಜನವರಿಯಿಂದ ಎಪ್ರಿಲ್‌ ಅಂತ್ಯದ ವರೆಗೆ 26 ಮಂದಿ, ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ 2022ರ ಜನವರಿಯಿಂದ ಫೆಬ್ರವರಿ ಅಂತ್ಯದ ವರೆಗೆ 13 ಮಂದಿ ನಾಪತ್ತೆಯಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 2022ರ ಜನವರಿಯಿಂದ ಎಪ್ರಿಲ್‌ 10ರ ವರೆಗೆ 32 ಮಂದಿ ನಾಪತ್ತೆಯಾಗಿದ್ದಾರೆ.

ಅವಿವಾಹಿತರು ಅಧಿಕ
ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ 2019ರ ಜನವರಿಯಿಂದ 2022ರ ಫೆಬ್ರವರಿ 25ರ ವರೆಗೆ 147 ಮಂದಿ ಅವಿವಾಹಿತೆಯರು ನಾಪತ್ತೆಯಾಗಿದ್ದು ಅವರಲ್ಲಿ 145 ಮಂದಿ ಪತ್ತೆಯಾಗಿದ್ದಾರೆ. 97 ಮಂದಿ ವಿವಾಹಿತೆಯರು ನಾಪತ್ತೆಯಾಗಿದ್ದು ಬಹುತೇಕ ಮಂದಿ ಪತ್ತೆಯಾಗಿದ್ದಾರೆ ಎಂದು ಪೊಲೀಸ್‌ ಇಲಾಖೆಯ ಮೂಲಗಳು ತಿಳಿಸಿವೆ.

Advertisement

ನಮ್ಮ ಜಿಲ್ಲೆಯವರು ಮಾತ್ರವಲ್ಲದೆ ಹೊರ ಜಿಲ್ಲೆ, ರಾಜ್ಯಗಳಿಂದ ಬಂದು ಇಲ್ಲಿ ಕಾಣೆಯಾಗುವ ಪ್ರಕರಣಗಳೂ ಇರುತ್ತವೆ. ದೌರ್ಜನ್ಯ, ಮಾನಸಿಕ ಅನಾರೋಗ್ಯವೂ ನಾಪತ್ತೆಗೆ ಕಾರಣವಾಗುತ್ತದೆ. ಅವಿವಾಹಿತರ ಪೈಕಿ ಕೆಲವರು ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ ಮನೆ ತೊರೆಯುತ್ತಾರೆ. ಇನ್ನು ಕೆಲವರು ಆಮಿಷಕ್ಕೆ ಒಳಗಾಗಿ ನಾಪತ್ತೆಯಾಗುವ ಸಾಧ್ಯತೆಯೂ ಇರುತ್ತದೆ.
– ಪ್ರೊ| ಹಿಲ್ಡಾ ರಾಯಪ್ಪನ್‌,
ಹಿರಿಯ ಆಪ್ತ ಸಮಾಲೋಚಕರು

ಗಂಭೀರವಾಗಿ ಪರಿಗಣನೆ
ನಾಪತ್ತೆ ಪ್ರಕರಣಗಳನ್ನು ಪೊಲೀಸ್‌ ಇಲಾಖೆ ಗಂಭೀರವಾಗಿ ಪರಿಗಣಿಸುತ್ತದೆ. ಬಹುತೇಕ ಮಂದಿಯನ್ನು ಪತ್ತೆಹಚ್ಚಲಾಗಿದೆ. ಕರಾವಳಿಯಲ್ಲಿ ಮಾನವ ಕಳ್ಳಸಾಗಣೆ ಪ್ರಕರಣ ಕಡಿಮೆ. ಜನರಲ್ಲಿ ಜಾಗೃತಿ ಮೂಡಿರುವುದರಿಂದ ನಾಪತ್ತೆ ಬಗ್ಗೆ ದೂರುಗಳು ಕೂಡ ಹೆಚ್ಚು ದಾಖಲಾಗುತ್ತಿರಬಹುದು. ದೂರು ನೀಡಿದರೆ ಪತ್ತೆ ಕಾರ್ಯಾಚರಣೆಗೂ ಅನುಕೂಲವಾಗುತ್ತದೆ.
– ಹರಿರಾಂ ಶಂಕರ್‌, ಡಿಸಿಪಿ ಮಂಗಳೂರು

-ಸಂತೋಷ್‌ ಬೊಳ್ಳೆಟ್ಟು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next