Advertisement

ಕರಾವಳಿಯ ಎಲ್ಲ ತಾಲೂಕು ಬರಪೀಡಿತ !​​​​​​​

12:30 AM Jan 17, 2019 | |

ಮಂಗಳೂರು: ಕರಾವಳಿಗೆ ಕಳೆದ ಬಾರಿ ಮುಂಗಾರು ಮಳೆ ಉತ್ತಮವಾಗಿದ್ದರೂ ಹಿಂಗಾರು ಕೈಕೊಟ್ಟ ಪರಿಣಾಮ ದ.ಕ.,  ಉಡುಪಿ ಜಿಲ್ಲೆಗಳ ಎಲ್ಲ ತಾಲೂಕುಗಳನ್ನು “ಬರಪೀಡಿತ’ ಎಂದು ಸರಕಾರ ಘೋಷಿಸಿದೆ.

Advertisement

ಹಿಂಗಾರು ಹಂಗಾಮಿನಲ್ಲಿ ಮಳೆ ಕೊರತೆ ಕಾರಣದಿಂದ ಇದೇ ಮೊದಲ ಬಾರಿಗೆ ಎಲ್ಲ ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರಿವೆ. 2017ರಲ್ಲಿ    ಮಂಗಳೂರು ಹಾಗೂ ಬಂಟ್ವಾಳ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿ ಸಲಾಗಿತ್ತು. ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯು ಮೊದಲ ಬಾರಿಗೆ ಬರದ ಛಾಯೆಯ ಹಣೆಪಟ್ಟಿ ಪಡೆದಿತ್ತು.
 
ರಾಜ್ಯದಲ್ಲಿ ಹಿಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಶೇ.49ರಷ್ಟು ಕಡಿಮೆ ಮಳೆಯಾಗಿದ್ದು, ದ.ಕ., ಉಡುಪಿ ಸಹಿತ 30 ಜಿಲ್ಲೆಗಳ 156 ತಾಲೂಕುಗಳನ್ನು “ಬರಪೀಡಿತ’ ಎಂದು ಘೋಷಿಸಲಾಗಿದೆ. 

ಕೇಂದ್ರ ಸರಕಾರ ಪ್ರಕಟಿಸಿರುವ “2016ರ ಬರ ಕೈಪಿಡಿ’ ಹಾಗೂ ಪರಿಷ್ಕೃತ ಮಾರ್ಗಸೂಚಿಯಲ್ಲಿ ಕಡ್ಡಾಯ ಮಾನದಂಡಗಳಾದ ವಾಡಿಕೆಗಿಂತ ಶೇ.60ರಷ್ಟು ಮಳೆ ಕೊರತೆ, ಸತತ 4 ವಾರ ಅಥವಾ ಅಧಿಕ ಶುಷ್ಕ ವಾತಾವರಣ, ತೇವಾಂಶ ಕೊರತೆ, ಬೆಳೆ ಬಿತ್ತನೆ ಪ್ರದೇಶ, ಅಂತರ್ಜಲ ಕುಸಿತ ಇತ್ಯಾದಿ ಸೂಚ್ಯಂಕಗಳನ್ನು ಬರಪೀಡಿತ ಎಂದು ಘೋಷಿಸಲು ಪರಿಗಣಿಸಲಾಗುತ್ತಿದೆ.

ಶೇ. 20ರಷ್ಟು ಮಳೆ ಕೊರತೆ
ಮುಂಗಾರು ಹಂಗಾಮಿನಲ್ಲಿ ದ.ಕ. ಜಿಲ್ಲೆಯಲ್ಲಿ ವಾಡಿಕೆಯಾಗಿ 367 ಮಿ.ಮೀ. ಮಳೆ ಆಗಬೇಕಿದ್ದು, 302 ಮಿ.ಮೀ.ಮಾತ್ರ ಸುರಿದಿತ್ತು. ಶೇ.18ರಷ್ಟು ಕೊರತೆ ಅನುಭವಿಸಿದ್ದರೆ, ಉಡುಪಿ ಜಿಲ್ಲೆಯಲ್ಲಿ 299 ಮಿ.ಮೀ. ಮಳೆಯ ಬದಲಿಗೆ 236 ಮಿ.ಮೀ.ಮಾತ್ರ ಸುರಿದು ಶೇ.21ರಷ್ಟು ಕೊರತೆ ಕಂಡಿದೆ. ಮುಂದೇನು?ಎರಡೂ ಜಿಲ್ಲೆಯ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಶೀಘ್ರವೇ ಸಭೆ ನಡೆಯಲಿದ್ದು, ಎಲ್ಲಾ ತಾಲೂಕುಗಳ ಪರಿಸ್ಥಿತಿ ಪ್ರಕಾರ ಕೈಗೊಳ್ಳಬೇಕಾದ ಪರಿಹಾರ ಕಾಮಗಾರಿಗಳ ಬಗ್ಗೆ ಚರ್ಚಿಸಲಾಗುತ್ತದೆ. ಬಳಿಕ ಸಮಗ್ರ ವರದಿಯನ್ನು ಸರಕಾರಕ್ಕೆ ಸಲ್ಲಿಸಿ ಪರಿಹಾರ ಕ್ರಮಗಳನ್ನು ಜಾರಿಗೊಳಿಸಲಾಗುತ್ತದೆ.


ಏನು ಲಭ್ಯವಾಗಬಹುದು?
ಬರಪೀಡಿತ ತಾಲೂಕುಗಳಲ್ಲಿ ಭೂ ರಹಿತ ಕಾರ್ಮಿಕರು, ಸಣ್ಣ ಹಾಗೂ ಅತೀ ಸಣ್ಣ ರೈತರಿಗೆ ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಕುಡಿಯುವ ನೀರು ಸರಬರಾಜು ಹಾಗೂ ಜಾನುವಾರು ಸಂರಕ್ಷಣೆ ಇತ್ಯಾದಿ ಕಾರ್ಯಗಳನ್ನು  ಎಸ್‌ಡಿಆರ್‌ಎಫ್‌/ ಎನ್‌ಡಿಆರ್‌ಎಫ್‌ ಮಾರ್ಗಸೂಚಿಯ ಪ್ರಕಾರ ಕೈಗೊಳ್ಳಲಾಗುತ್ತದೆ. 

ಪ್ರಸ್ತುತ ಮಾಹಿತಿ ಪ್ರಕಾರ ಎರಡೂ ಜಿಲ್ಲೆಗಳಲ್ಲಿ ನೀರಿನ ಕೊರತೆ ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಇಲ್ಲ. ಮುಂದಿನ ಪರಿಸ್ಥಿತಿಯನ್ನು ಎದುರಿಸಲೂ ಜಿಲ್ಲಾಡಳಿತ ಸಜ್ಜಾಗಿವೆ.

Advertisement

ಅವಲೋಕಿಸಿ ಕ್ರಮ
ಹಿಂಗಾರು ಕೊರತೆ ಕಾರಣ ಜಿಲ್ಲೆಯ 7 ತಾಲೂಕುಗಳು ಬರಪೀಡಿತ ಎಂದು ಘೋಷಿಸ ಲಾಗಿದೆ. ಜಿಲ್ಲೆಯಲ್ಲಿ ನೀರಿನ ಕೊರತೆ, ಮೇವು ಕೊರತೆ ಇಲ್ಲ. ಬೆಳೆ ನಾಶವೂ ಆಗಿಲ್ಲ. ಸ್ಥಿತಿಗತಿಗಳ ಬಗ್ಗೆ ಅವಲೋಕಿಸಿ ಕ್ರಮ ಕೈಗೊಳ್ಳಲಾಗುವುದು.
– ಶಶಿಕಾಂತ ಸೆಂಥಿಲ್‌,
ಜಿಲ್ಲಾಧಿಕಾರಿ, ದ.ಕ.

ಪರಿಶೀಲಿಸಿ ಅಗತ್ಯ ಕ್ರಮ
ಜಿಲ್ಲೆಯ ಎಲ್ಲ ತಾಲೂಕುಗಳು ಬರಪೀಡಿತವಾಗಿವೆ. ಜಿಲ್ಲೆಯಲ್ಲಿ ಮುಂದಿನ ದಿನದಲ್ಲಿ ಕೈಗೊಳ್ಳಬೇಕಾದ ಅಂಶಗಳ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
– ಪ್ರಿಯಾಂಕಾ  ಮೇರಿ ಫ್ರಾನ್ಸಿಸ್‌, ಜಿಲ್ಲಾಧಿಕಾರಿ ಉಡುಪಿ    

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next