ಮಹಾನಗರ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉರಿ ಬಿಸಿಲಿನಿಂದ ಸೆಕೆಯ ಬೇಗೆ ಹೆಚ್ಚುತ್ತಿದೆ. ಪರಿಣಾಮ ತರಕಾರಿ, ಹಣ್ಣುಗಳು ಕೆಡುತ್ತಿದೆ. ರಸ್ತೆ ಬದಿಯಲ್ಲಿ ಮಾರಾಟಕ್ಕಿಟ್ಟ ಹೂವುಗಳು ಬಾಡುತ್ತಿದೆ. ಬಿಸಿಲಿನ ಝಳ ಹೆಚ್ಚಿದ ಪರಿಣಾಮ ರಸ್ತೆಗಳ ಇಕ್ಕೆಲಗಳಲ್ಲಿ, ಡಿವೈಡರ್‌ಗಳಲ್ಲಿ ನೆಟ್ಟ ಗಿಡಗಳು ಸೊರಗಿದೆ. ಮಳೆ ಬಾರದ ಕಾರಣ ನೀರಿನ ಕೊರತೆ ಕೂಡ ನಗರದಲ್ಲಿದ್ದು, ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ.
ಕೆಲವು ವರ್ಷಗಳಿಗೆ ಹೋಲಿಸಿದರೆ ಈ ರೀತಿ ಸೆಕೆಯ ಇದೇ ಮೊದಲು. ಗರಿಷ್ಠ ಉಷ್ಣಾಂಶ ಹೆಚ್ಚಿಲ್ಲದಿದ್ದರೂ ತೇವಾಂಶದಲ್ಲಿ ಉಂಟಾಗುವ ಏರುಪೇರಿನ ಪರಿಣಾಮದಿಂದಾಗಿ ಸೆಕೆಯ ಅನುಭವ ಹೆಚ್ಚಾಗುತ್ತಿದೆ. ಮಧ್ಯಾಹ್ನ ವೇಳೆಯಂತೂ ಗರಿಷ್ಠ ಉಷ್ಣಾಂಶ ಮತ್ತಷ್ಟು ಏರಿಕೆಯಾಗುತ್ತಿದ್ದು, 38ರಿಂದ 39 ಡಿ.ಸೆ.ವರೆಗೆ ತಲುಪುತ್ತಿದೆ. ಬಿಸಿಲ ಧಗೆಯಿಂದ ಮತ್ತು ಮರಗಳ ಸಂಖ್ಯೆ ಕ್ಷೀಣಿಸಿದ ಪರಿ ಣಾಮ ಅನೇಕ ಹಕ್ಕಿಗಳು ನೀರನ್ನು ಅರಸಿ ಕಾಡಿನಿಂದ ನಾಡಿಗೆ ಬರುತ್ತಿವೆ. ಕಾಡಿನಲ್ಲಿ ಕಾಣಿಸಿಕೊಳ್ಳಬೇಕಾಗಿದ್ದ ಹೆಬ್ಟಾವು, ಚಿರತೆ ಅಲ್ಲಲ್ಲಿ ಕಾಣಿಸುತ್ತಿದೆ. ಅದೇ ರೀತಿ ಹಳ್ಳಿ ಪ್ರದೇಶದಲ್ಲಿ ನವಿಲುಗಳು ಸದಾ ಮನೆಯಂಗಳದಲ್ಲಿ ನೀರು, ಆಹಾರ
ಅರಸಿಕೊಂಡು ಇರುತ್ತದೆ.
ರೋಗಗಳ ಬಗ್ಗೆ ಎಚ್ಚರ ಅಗತ್ಯ
ವಾತಾವರಣದಲ್ಲಿ ತಾಪಮಾನ ಹೆಚ್ಚುತ್ತಿರುವ ಪರಿಣಾಮದಿಂದಾಗಿ ಅನೇಕ ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಅದರಲ್ಲಿಯೂ ಹೆಚ್ಚಿದ ತಾಪಮಾನದಿಂದಾಗಿ ಸಾಂಕ್ರಾಮಿಕ ರೋಗಗಳು, ಮೈ ತುರಿಕೆ, ಹುಣ್ಣು, ಗಂಟಲು ನೋವು, ತಲೆನೋವು, ಶೀತ- ಜ್ವರ ಸಹಿ ತ ಅನೇಕ ರೋಗಗಳಿಗೆ ಕಾರಣವಾಗಬಹುದು. ಈ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಅಗತ್ಯ.
ಮರದಲೇ ಕೊಳೆಯುತ್ತಿದೆ ಹಲಸಿನಹಣ್ಣು
Related Articles
ಸಾಮಾನ್ಯವಾಗಿ ಎಪ್ರಿಲ್-ಮೇ ತಿಂಗಳಿನಲ್ಲಿ ಹಲಸಿನ ಕಾಯಿ ಹಣ್ಣಾಗುವ ಅವಧಿ. ದ.ಕ. ಜಿಲ್ಲೆಯಲ್ಲಿ ಉಂಟಾಗುವ ಬಿಸಿಲಿನ ಬೇಗೆಗೆ ಮರದಲ್ಲೇ ಹಲಸಿನ ಹಣ್ಣುಗಳು ಕೊಳೆಯುತ್ತಿವೆ. ಅದೇ ರೀತಿ, ತರಕಾರಿಗಳು ಕೂಡ ಗಿಡ/ಬಳ್ಳಿಯಲ್ಲೇ ಕೆಡುವ ಪರಿಸ್ಥಿತಿ ಇದೆ. ಬಾಳೆ ಗಿಡಗಳು ಬಾಡಿ ಮುರಿಯುತ್ತಿವೆ. ಬಿಸಿಲಿನ ತೀವ್ರತೆಗೆ ಹೂವಿನ ವ್ಯಾಪಾರಸ್ಥರು ವ್ಯವಹಾರವಿಲ್ಲದೆ ಕಂಗಾಲಾಗಿದ್ದಾರೆ.
ಬಿಸಿಲಿನ ಹೆಚ್ಚಳದಿಂದಾಗಿ ಹೂವುಗಳು ಒಣಗುತ್ತಿದೆ. ಅದರಲ್ಲಿಯೂ ಸೇವಂತಿಗೆ ಹೂವುಗಳು ಸಾಮಾನ್ಯವಾಗಿ ಎರಡು ದಿನಗಳ ಕಾಲ ಒಣಗುವುದಿಲ್ಲ. ಆದರೆ ಇದೀಗ ಸಂಜೆ ವೇಳೆಗೆ ಬಾಡುತ್ತಿದೆ. ಇನ್ನು, ಕಾಕಡ ಮಲ್ಲಿಗೆ ಪ್ರಿಡ್ಜ್ ನಿಂದ ತೆಗೆದು ಹೊರ ಗಿ ಡು ವಂತಿಲ್ಲ ಎಂಬಂತಾಗಿದೆ. ಇದ ರಿಂದ ಹೂವಿನ ವ್ಯಾಪಾರಸ್ಥರು ತೊಂದರೆ ಅನುಭವಿಸುತ್ತಿದ್ದಾರೆ ಎನ್ನುತ್ತಾರೆ ಮಾರುಕಟ್ಟೆ ವ್ಯಾಪಾರಸ್ಥರು.
ಉಷ್ಣ ಅಲೆ ¡
ಕರಾವಳಿ ಭಾಗದಲ್ಲಿ ಸಮುದ್ರ ಇರುವ ಕಾರಣ ವಾತಾವರಣದಲ್ಲಿ ತೇವಾಂಶ ಜಾಸ್ತಿ ಇರುತ್ತದೆ. ಗರಿಷ್ಠ ಉಷ್ಣಾಂಶ ಮತ್ತು
ತೇವಾಂಶ ಒಟ್ಟಿಗೆ ಸೇರಿ “ಹೀಟ್ ಇಂಡೆಕ್ಸ್ ‘ ಉಂಟಾಗುತ್ತದೆ. ಇದು ಬೇಸಗೆ ಬೇಗೆ ಮತ್ತಷ್ಟು ಹೆಚ್ಚು ಮಾಡುತ್ತದೆ. ಸದ್ಯ ಅರಬಿ ಸಮುದ್ರದಲ್ಲಿ ಸುಳಿಗಾಳಿ ಉಂಟಾಗಿದ್ದು, ಪರಿಣಾಮ ಉತ್ತರ ದಿಕ್ಕಿನಿಂದ ಗಾಳಿ ಬೀಸುತ್ತಿದೆ. ಈ ಗಾಳಿ ಉಷ್ಣ ಅಲೆಯನ್ನು ತರುತ್ತಿದೆ. –ಪ್ರಸಾದ್, ಭಾರತೀಯ ಹವಾಮಾನ ಇಲಾಖೆ ಅಧಿಕಾರಿ
*ನವೀನ್ ಭಟ್ ಇಳಂತಿಲ