ಮಂಗಳೂರು: ಮೈಸೂರಿನಿಂದ ವಾರಕ್ಕೊಮ್ಮೆ ಇಲ್ಲಿಗೆ ಬರುವ ಆರ್‌ಟಿಒ ಅಧಿಕಾರಿ, ಬಹುತೇಕ ಹುದ್ದೆಗಳು ಖಾಲಿಯಾಗಿಯೇ ಇರುವ ಕಚೇರಿ, ರಾಶಿ ಬೀಳುತ್ತಿರುವ ಕಡತಗಳು… ಕೆಲಸಕ್ಕಾಗಿ ಪದೇ ಪದೇ ಎಡತಾಕಬೇಕಾಗಿ ಬರುವ ಸಾರ್ವಜನಿಕರು…
ಅತ್ಯಧಿಕ ರಾಜಸ್ವ ಸಂಗ್ರಹ ಮಾಡಿಕೊಡುವ ಸಾರಿಗೆ ಕಚೇರಿ ಎಂಬ ಹೆಗ್ಗಳಿಕೆ ಪಡೆದ ಮಂಗಳೂರು ಆರ್‌ಟಿಒ ಕಚೇರಿಯ ಪರಿಸ್ಥಿತಿ ಇದು. ಜಿಲ್ಲೆಯ ಇತರ ಎರಡು ಕಚೇರಿಗಳಾಗಿರುವ ಪುತ್ತೂರು, ಬಂಟ್ವಾಳದ ಪರಿಸ್ಥಿತಿಯೂ ಭಿನ್ನವೇನಿಲ್ಲ.
ಅತಿ ಮುಖ್ಯ ಹುದ್ದೆ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ)ಯದ್ದು. ನವೆಂಬರ್‌ನಿಂದೀಚೆಗೆ ಮಂಗಳೂರಿಗೆ ಪೂರ್ಣಕಾಲಿಕ ಆರ್‌ಟಿಒ ಬಂದಿಲ್ಲ. ಆರಂಭದಲ್ಲಿ ಉಡುಪಿಯ ಅಧಿಕಾರಿಯನ್ನು ಪ್ರಭಾರ ಆಗಿ ನಿಯೋಜಿಸಲಾಯಿತು. ಈಗ ಮೈಸೂರಿನ ಅಧಿಕಾರಿಯನ್ನು ನಿಯೋಜಿಸಲಾಗಿದೆ. ಅವರು ವಾರಕ್ಕೊಮ್ಮೆ ಬಂದು ಮೂರು ದಿನ ಇಲ್ಲಿರುತ್ತಾರೆ. ಅವರಿಲ್ಲದಾಗ ಕಡತಗಳು ರಾಶಿ ಬೀಳುತ್ತವೆ.
ಪೂರ್ಣಕಾಲಿಕ ಅಧಿಕಾರಿ ಅಗತ್ಯ
ಮುಖ್ಯವಾಗಿ ಆಡಳಿತದ ಮುಖ್ಯಾಧಿಕಾರಿ, ಸಹಿ ಅಧಿಕಾರಿಯೂ ಆರ್‌ಟಿಒ ಅವರೇ ಆಗಿರುವುದರಿಂದ ಅವರೇ ಪ್ರಭಾರವಾದರೆ ಮಹತ್ವದ ಕೆಲಸಗಳು ಬಾಕಿಯಾಗುತ್ತವೆ. ಅಲ್ಲದೆ ಜಿಲ್ಲಾ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿಯೂ ಅವರೇ ಆಗಿರುವುದರಿಂದ ಅವರಿಗೆ ಜವಾಬ್ದಾರಿ ಹೆಚ್ಚಿರುತ್ತದೆ. ಅವೆಲ್ಲವೂ ಸುಸೂತ್ರವಾಗಿ ನಡೆಯಲು ಪೂರ್ಣಕಾಲಿಕ ಅಧಿಕಾರಿಯ ನಿಯೋಜನೆಯಾಗಬೇಕಿದೆ.
Related Articles
ಇದೇ ರೀತಿ ಲೆಕ್ಕ ಪತ್ರಾಧಿಕಾರಿ 1 ಹುದ್ದೆ, ತೆರಿಗೆ/ಖಜಾನಾಧಿಕಾರಿ (1), ಲೆಕ್ಕಾಧೀಕ್ಷಕರು (1), ಪ್ರಥಮ ದರ್ಜೆ ಸಹಾಯಕ (9), ಲೆಕ್ಕಪರಿಶೋಧಕ (1) ಅಲ್ಲದೆ 28 ದ್ವಿತೀಯ ದರ್ಜೆ ಸಹಾಯಕ ಹುದ್ದೆ ಸಹಿತ 73 ಹುದ್ದೆಗಳು ಖಾಲಿ ಬಿದ್ದಿವೆ. 6 ಮಂದಿಯನ್ನು ಇದೇ ಕಚೇರಿಯಿಂದ ಬೇರೆ ಕಚೇರಿಗಳಿಗೆ ನಿಯೋಜನೆ ಮಾಡಿದ್ದರೆ ಐವರು ಇತರ ಕಚೇರಿಗಳಿಂದ ಇಲ್ಲಿ ನಿಯೋಜನೆಯಲ್ಲಿದ್ದಾರೆ.
ಚಾಲನಾ ಪರೀಕ್ಷೆ ಇತ್ಯಾದಿಗೆ ಬೇಕಾಗುವ ಮೋಟಾರು ವಾಹನ ನಿರೀಕ್ಷಕರ ಹುದ್ದೆ 12ರಲ್ಲಿ 9 ಖಾಲಿ ಇವೆ. ಹಿರಿಯ ಮೋಟಾರು ವಾಹನ ನಿರೀಕ್ಷಕರ 6 ಹುದ್ದೆ ಖಾಲಿ. ಖಜಾನೆ ಕಾವಲುಗಾರರೂ ಇಲ್ಲ, ರಾತ್ರಿ ಕಾವಲುಗಾರರೂ ಇಲ್ಲ.
ಗರಿಷ್ಠ ರಾಜಸ್ವ ಸಂಗ್ರಹ
ಬೆಂಗಳೂರು ಬಿಟ್ಟರೆ ಗರಿಷ್ಠ ರಾಜಸ್ವ ಸಂಗ್ರಹವಾಗುವ ಕಚೇರಿ ಮಂಗಳೂರು ಆರ್‌ಟಿಒ. ಕಳೆದ 5 ವರ್ಷಗಳ ಅಂಕಿ-ಅಂಶ ನೋಡಿದರೆ ಸರಾಸರಿ 190 ಕೋಟಿ ರೂ. ರಾಜಸ್ವ ಬರುತ್ತಿದೆ. ಹಾಗಿರುವಾಗ ಸೌಲಭ್ಯ ಕೊರತೆ ಯಾಕೆ ಎನ್ನುವುದು ನಾಗರಿಕರ ಪ್ರಶ್ನೆ.
ನಾವು ರಾಜ್ಯದಲ್ಲಿ ಗರಿಷ್ಠ, ಎಂದರೆ ಶೇ. 99ರಷ್ಟು ಗುರಿ ಸಾಧಿಸುತ್ತೇವೆ, ಈ ಬಾರಿ ನಮ್ಮ ಇಲಾಖೆಯಲ್ಲಿ 8 ಸಾವಿರ ಕೋಟಿ ರೂ. ರಾಜಸ್ವ ಸಂಗ್ರಹವಾಗಿದೆ. ಆದರೆ ಸಿಬಂದಿ ಕೊರತೆ ತೀವ್ರ ಇರುವುದು ನಿಜ. ಮುಖ್ಯಮಂತ್ರಿಯವರು ಈ ಬಾರಿ ಸಿಬಂದಿ ನೇಮಕಾತಿಗೆ ಒಪ್ಪಿದ್ದಾರೆ. ಮಂಗಳೂರಿನ ಸ್ಥಿತಿಯ ಅರಿವಿದೆ, ರೆಗ್ಯುಲರ್ ಆರ್‌ಟಿಒ ನಿಯೋಜನೆಗೆ ಕ್ರಮ ಕೈಗೊಳ್ಳುವೆ.
– ಶ್ರೀರಾಮುಲು, ಸಾರಿಗೆ ಸಚಿವರು
ಪುತ್ತೂರು ಕಚೇರಿ
2022 -23ರ ರಾಜಸ್ವ ಗುರಿ: 59.73 ಕೋಟಿ ರೂ.
ಸಾಧನೆ: 44.52 ಕೋಟಿ ರೂ. (ಡಿಸೆಂಬರ್ ವರೆಗೆ)
ಮಂಜೂರಾದ ಹುದ್ದೆ: 25
ಖಾಲಿ ಹುದ್ದೆ: 16
ಭರ್ತಿಯಾದ ಹುದ್ದೆ: 8
ಬಂಟ್ವಾಳ ಕಚೇರಿ
2020-21ರ ರಾಜಸ್ವ ಗುರಿ 36.48 ಕೋ.ರೂ.
ಸಂಗ್ರಹ-25.62 ಕೋಟಿ ರೂ.
2021-22 ರಾಜಸ್ವ ಗುರಿ-39.47 ಕೋಟಿ ರೂ.
ಸಂಗ್ರಹ-29.43 ಕೋಟಿ ರೂ.
2022-23 ರಾಜಸ್ವ ಗುರಿ-45.40 ಕೋ.ರೂ.
ಸಂಗ್ರಹ 27.11 ಕೋ.ರೂ. (ಜನವರಿ ವರೆಗೆ)
ಮಂಜೂರಾದ ಹುದ್ದೆಗಳು – 14
ಪ್ರಸ್ತುತ ಇರುವುದು – 5 ಮಂದಿ
– ವೇಣುವಿನೋದ್ ಕೆ.ಎಸ್.