ಮಂಗಳೂರು: ಕರಾವಳಿಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿದ್ದ ಬಿರುಸಿನ ಮಳೆ ತುಸು ತಗ್ಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಮೋಡ ಮತ್ತು ಬಿಸಿಲಿನಿಂದ ಕೂಡಿದ ವಾತಾವರಣ ಇತ್ತು. ಕೆಲವು ಕಡೆ ಹಗುರದಿಂದ ಕೂಡಿದ ಮಳೆಯಾಗಿದೆ. ಬಿಸಿಲಿದ್ದ ಕಾರಣ ಮಂಗಳೂರಿನಲ್ಲಿ ತುಸು ಸೆಕೆಯ ವಾತಾವರಣ ಇತ್ತು.
ಕಡಬ ತಾಲೂಕು: ವಿವಿಧೆಡೆ ಮಳೆ
ಮಂಗಳವಾರ ಸಂಜೆ ಕಡಬ ತಾಲೂಕಿನ ವಿವಿಧೆಡೆ ಗುಡುಗು ಸಹಿತ ಮಳೆಯಾಗಿದೆ. ಕೊಂಬಾರು ಪರಿಸರದಲ್ಲಿ ಸುಮಾರು ಅರ್ಧ ಗಂಟೆ ಉತ್ತಮ ಮಳೆಯಾಗಿದ್ದರೆ, ಕಡಬ ಪರಿಸರದಲ್ಲಿ ಸಾಧಾರಣ ಮಳೆಯಾಗಿದೆ.
ಉಡುಪಿ ಜಿಲ್ಲೆಯಲ್ಲಿಯೂ ಮೋಡ ಮತ್ತು ಬಿಸಿಲಿನ ವಾತಾವರಣ ಇತ್ತು. ಕಾರ್ಕಳ ತಾಲೂಕಿನ ಗ್ರಾಮಾಂತರ ಪರಿಸರದಲ್ಲಿ ಲಘು ಮಳೆಯಾಗಿದೆ.
ಮಳೆ ದೂರವಾಗುವ ಸಾಧ್ಯತೆ
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮೇ 30ರ ವರೆಗೆ ಮತ್ತೆ ಮಳೆ ಬಿರುಸುಗೊಳ್ಳುವ ಸಾಧ್ಯತೆ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.
Related Articles
ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆ ಬುಧವಾರ ಮತ್ತು ಗುರುವಾರ ಸಿಡಿಲು ಸಹಿತ ತುಂತುರು ಅಥವಾ ಸಾಧಾರಣ ಮಳೆಯಾಗುವ ಸಂಭವ ಇದೆ. ಇದೇ ಅವಧಿಯಲ್ಲಿ ಉಡುಪಿಯಲ್ಲಿ ತುಂತುರು ಮಳೆ ನಿರೀಕ್ಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕೃಷಿಕರಲ್ಲಿ ಆತಂಕ
ಕೆಲವು ದಿನ ಉತ್ತಮ ಮಳೆ ಸುರಿದಿದ್ದರಿಂದ ಕೆಲವು ಕಡೆ ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದರು. ಆದರೆ ಈಗ ಮತ್ತೆ ಮಳೆ ದೂರವಾಗಿರುವುದರಿಂದ ಅವರಲ್ಲಿ ಆತಂಕ ಶುರುವಾಗಿದೆ. ಹವಾಮಾನ ಇಲಾಖೆಯ ಈಗಿನ ಮಾಹಿತಿ ಪ್ರಕಾರ ಕರಾವಳಿಗೆ ಜೂನ್ ಮೊದಲ ವಾರದಲ್ಲಷ್ಟೇ ಮುಂಗಾರು ಮಳೆ ಪ್ರವೇಶಿಸಲಿದೆ. ಕೇರಳದಲ್ಲಿ ಮೇ 27ರ ಬಳಿಕ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಪ್ರಸ್ತುತ ಮುಂಗಾರು ಮಾರುತ ಅರಬಿ ಸಮುದ್ರದಲ್ಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಳೆ ನಿಂತ ಕೂಡಲೇ ಸೆಕೆ
ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಮಳೆ ನಿಂತು ಒಂದು ದಿನವಾಗುವಷ್ಟರಲ್ಲಿ ಮತ್ತೆ ಸೆಕೆ ಅನುಭವವಾಗುತ್ತಿದೆ. ಎರಡು ದಿನಗಳ ಹಿಂದೆ ಇಲ್ಲಿ ಚಳಿಯ ವಾತಾವರಣವಿತ್ತು.
ಕರಾವಳಿಯಲ್ಲಿ ಗರಿಷ್ಠ ಉಷ್ಣಾಂಶ ಕೂಡ ಏರಿಕೆ ಕಂಡಿದ್ದು, ಮಂಗಳೂರಿನಲ್ಲಿ ಮಂಗಳವಾರ 32 ಡಿ.ಸೆ. ಗರಿಷ್ಠ ಮತ್ತು 25.9 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು. ಗುರುವಾರ ಬಳಿಕ ಗರಿಷ್ಠ ತಾಪಮಾನ ಮತ್ತಷ್ಟು ಹೆಚ್ಚಳವಾಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.