Advertisement

ದಕ್ಷಿಣ ಕನ್ನಡ ಲೋಕಸಭೆ :ಐವರಿಂದ ನಾಮಪತ್ರ ಸಲ್ಲಿಕೆ

02:10 AM Mar 26, 2019 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ನಳಿನ್‌ ಕುಮಾರ್‌ ಕಟೀಲು, ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮಿಥುನ್‌ ರೈ, ಎಸ್‌ಡಿಪಿಐ ಅಭ್ಯರ್ಥಿಯಾಗಿ ಇಲ್ಯಾಸ್‌ ಮಹಮ್ಮದ್‌ ತುಂಬೆ ಅವರು ಸೋಮವಾರ ಜಿಲ್ಲಾ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಕೆ ಮಾಡಿದರು. ಪಕ್ಷೇತರ ಅಭ್ಯರ್ಥಿಯಾಗಿ ಮ್ಯಾಕ್ಸಿಂ ಪಿಂಟೋ ಹಾಗೂ ಎಸ್‌ಡಿಪಿಐ ಹೆಸರಿನಲ್ಲಿ ಇಸ್ಮಾಯಿಲ್‌ ಶಾಫಿ ಕೆ. ನಾಮಪತ್ರ ಸಲ್ಲಿಸಿದ್ದಾರೆ.

Advertisement

ಬಿಜೆಪಿ ಅಭ್ಯರ್ಥಿ 2 ಸೆಟ್‌ಗಳಲ್ಲಿ, ಕಾಂಗ್ರೆಸ್‌ ಅಭ್ಯರ್ಥಿ 4 ಸೆಟ್‌ಗಳಲ್ಲಿ ನಾಮ
ಪತ್ರ ಸಲ್ಲಿಸಿದರು. ಎಸ್‌ಡಿಪಿಐ ವತಿಯಿಂದ ಇಬ್ಬರು ನಾಮಪತ್ರ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಯಾದ ಶಶಿಕಾಂತ ಸೆಂಥಿಲ್‌ ನಾಮಪತ್ರಗಳನ್ನು ಸ್ವೀಕರಿಸಿದರು. ಮಾ. 26 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಮಾ. 27ರಂದು ಅವುಗಳ ಪರಿಶೀಲನೆ ನಡೆಯಲಿದೆ.

ನಳಿನ್‌ ನಾಮಪತ್ರ
ಬಿಜೆಪಿ ಅಭ್ಯರ್ಥಿ ನಳಿನ್‌ ಕುಮಾರ್‌ ಕಟೀಲು ಬೆಳಗ್ಗೆ 9.30ಕ್ಕೆ ಬಂಟ್ಸ್‌ಹಾಸ್ಟೆಲ್‌ ವೃತ್ತದ ಬಳಿ ಇರುವ ಜಿಲ್ಲಾ ಬಿಜೆಪಿ ಚುನಾವಣಾ ಪ್ರಚಾರ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರ ಸಭೆಯ ಬಳಿಕ ಪಕ್ಷದ ಪ್ರಮುಖರ ಜತೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಶಾಸಕ ಸಂಜೀವ ಮಠಂದೂರು, ವಿಧಾನಸಭೆಯ ವಿಪಕ್ಷದ ಮುಖ್ಯ ಸಚೇತಕ ಸುನಿಲ್‌ ಕುಮಾರ್‌, ವಿಧಾನ ಪರಿಷತ್‌ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ನ್ಯಾಯವಾದಿ ಪುರುಷೋತ್ತಮ ಭಟ್‌ ಜತೆಗಿದ್ದರು.

ಮಿಥುನ್‌ ರೈ ನಾಮಪತ್ರ ಸಲ್ಲಿಕೆ
ದ.ಕ. ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಮಿಥುನ್‌ ರೈ ಅವರು ಪುರಭವನದಲ್ಲಿ ಕಾರ್ಯಕರ್ತರ ಸಮಾವೇಶ ನಡೆಸಿದ ಬಳಿಕ ಜಿಲ್ಲಾಧಿಕಾರಿ ಕಚೇರಿ ತನಕ ಪಾದಯಾತ್ರೆಯಲ್ಲಿ ತೆರಳಿ ಮಧ್ಯಾಹ್ನ 1.27ಕ್ಕೆ ನಾಮಪತ್ರ ಸಲ್ಲಿಸಿದರು. ಸಚಿವ ಯು.ಟಿ. ಖಾದರ್‌, ಹಿರಿಯ ನಾಯಕರಾದ ಬಿ. ಜನಾರ್ದನ ಪೂಜಾರಿ, ಬಿ. ರಮಾನಾಥ ರೈ, ಕೆ. ಅಮರನಾಥ ಶೆಟ್ಟಿ ಜತೆಗಿದ್ದರು.

ಎಸ್‌ಡಿಪಿಐ ನಾಮಪತ್ರ
ಸೋಶಿಯಲ್‌ ಡೆಮಾಕ್ರೆಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ಅಭ್ಯರ್ಥಿ ಇಲ್ಯಾಸ್‌ ಮಹಮ್ಮದ್‌ ತುಂಬೆ ಸೋಮವಾರ ಹಂಪನಕಟ್ಟೆ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿ ನಾಮಪತ್ರ ಸಲ್ಲಿಸಿದರು.
ಪಕ್ಷದ ಹಿರಿಯರಾದ ದೇವನೂರು ಪುಟ್ಟನಂಜಯ್ಯ, ರಿಯಾಝ್ ಫರಂಗಿ ಪೇಟೆ, ಅಕ್ರಂ ಹಸನ್‌, ಅಥಾವುಲ್ಲಾ ಜೋಕಟ್ಟೆ ಜತೆಗಿದ್ದರು.

Advertisement

ಕ್ಷೇತ್ರದಿಂದ 3ನೇ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ಪಕ್ಷದ ಕಾರ್ಯಕರ್ತರ, ನಾಯಕರ ಆಶೀರ್ವಾದದೊಂದಿಗೆ ನಾಮಪತ್ರ ಸಲ್ಲಿಸಿದ್ದೇನೆ. ಕಳೆದ ಎರಡು ಬಾರಿ ಜನ ಅಶೀರ್ವಾದ ಮಾಡಿದ್ದಾರೆ. ಪ್ರಾಮಾಣಿಕವಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದು, 3ನೇ ಬಾರಿಗೆ ಆಶೀರ್ವಾದ ಮಾಡುವಂತೆ ಕೋರುವೆ.
– ನಳಿನ್‌ ಕುಮಾರ್‌ ಕಟೀಲು

ಜಿಲ್ಲೆಯಲ್ಲಿ ಬದಲಾವಣೆ ಆಗಬೇಕೆಂದು ಎಲ್ಲರೂ ಬಯಸುತ್ತಿದ್ದಾರೆ. 28 ವರ್ಷಗಳಿಂದ ಬಿಜೆಪಿಗೆ ಅವಕಾಶ ಇದ್ದರೂ ಜಿಲ್ಲೆಯ ಅಭಿವೃದ್ಧಿ ಆಗಿಲ್ಲ. ಜಿಲ್ಲೆಯ ಸರ್ವತೋಮುಖ ಅಭಿವೃದ್ದಿಗಾಗಿ ನನಗೆ ಒಂದು ಅವಕಾಶ ಕೊಡಿ. ಇದು ಮತದಾರರಲ್ಲಿ ನನ್ನ ಮನವಿ. ನಾನು ಗೆದ್ದರೆ ಅದು ಜಿಲ್ಲೆಯ ಸರ್ವ ಜನರ ಗೆಲುವು.
– ಮಿಥುನ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next