Advertisement

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ಸಾಮಾನ್ಯ ಸಭೆ: ಬಡ ರೋಗಿಗಳಿಗೆ ದನಿಯಾದ ಜಿ.ಪಂ. ಸದಸ್ಯರು

10:57 PM Oct 08, 2020 | mahesh |

ಮಂಗಳೂರು: ರೋಗಿಗಳ ಸ್ಥಿತಿ ಗಂಭೀರ ಇದ್ದರೂ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಹಣ ಪಾವತಿಸದೆ ದಾಖಲಿಸಿಕೊಳ್ಳುವುದಿಲ್ಲ. ಇದರಿಂದ ಬಡ ರೋಗಿಗಳ ಪಾಡು ಹೇಳತೀರದಾಗಿದೆ ಎಂಬ ಆರೋಪ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ಗುರುವಾರ ವ್ಯಕ್ತವಾಯಿತು.

Advertisement

ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಿರಿಯ ಸದಸ್ಯ ಕೊರಗಪ್ಪ ನಾಯ್ಕ ಅವರು ವಿಷಯ ಪ್ರಸ್ತಾವಿಸಿ, ಇಂತಹ 8 ಪ್ರಕರಣಗಳನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದೇನೆ. ಸಂಬಂಧಪಟ್ಟವರು ತತ್‌ಕ್ಷಣ ಗಮನ ಹರಿಸಬೇಕು ಎಂದರು.

ಆಯುಷ್ಮಾನ್‌ ಯೋಜನೆಯಡಿ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಇದ್ದು, ಚಿಕಿತ್ಸೆಗೆ ಕೇವಲ ಆಧಾರ್‌ ಕಾರ್ಡ್‌ ಇದ್ದರೆ ಸಾಕು ಎಂದು ಉಸ್ತುವಾರಿ ಸಚಿವರು ಹೇಳಿದ್ದಾರೆ. ಆದರೆ ಬಡ ರೋಗಿಗಳು ವೆನ್ಲಾಕ್‌ನಿಂದ ರೆಫರಲ್‌ ಮುಖಾಂತರ ಖಾಸಗಿ ಆಸ್ಪತ್ರೆಗೆ ಹೋದರೂ ಹಣ ನೀಡಬೇಕಾಗುತ್ತದೆ. ಚಿಕಿತ್ಸೆ ಉಚಿತವಾದರೂ ಒಂದೊಂದು ತಪಾಸಣೆಗೂ 10-15 ಸಾವಿರ ರೂ. ಬಿಲ್‌ ಮಾಡಲಾಗುತ್ತದೆ ಎಂದು ಸದಸ್ಯೆ ಮಮತಾ ಗಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

ತಪಾಸಣಾ ವೆಚ್ಚ ಕಡಿಮೆಗೊಳಿಸಿ
ಮಮತಾ ಗಟ್ಟಿ ಪ್ರತಿಕ್ರಿಯಿಸಿ, ಜನಸಾಮಾನ್ಯರಿಗೆ ಉಚಿತ ಚಿಕಿತ್ಸೆ ಎಂದಷ್ಟೇ ಗೊತ್ತಿರುವುದರಿಂದ ಅವರು ಹಣ ಹೊಂದಿಸಿಕೊಳ್ಳುವುದಿಲ್ಲ. ಅದಕ್ಕಾಗಿ ತಪಾಸಣೆ ವೆಚ್ಚದ ಬಗ್ಗೆ ಆರೋಗ್ಯ ಇಲಾಖೆ ಜನಸಾಮಾನ್ಯರಿಗೆ ತಿಳಿಸಬೇಕು. ಈ ವೆಚ್ಚವನ್ನೂ ಅತಿ ಕಡಿಮೆ ದರಕ್ಕೆ ಇಳಿಸಬೇಕು ಎಂದರು.

ಹಿಂದೇಟು ಹಾಕಬಾರದು
ಸ್ಥಾಯೀ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಗಟ್ಟಿ ಮಾತನಾಡಿ, ಪೂರ್ವ ತಪಾಸಣೆಗೆ ಹಣ ಕಟ್ಟಿಲ್ಲವೆಂಬ ಕಾರಣಕ್ಕೆ ಖಾಸಗಿ ಆಸ್ಪತ್ರೆಯವರು ಯಾವುದೇ ಕಾರಣಕ್ಕೂ ತುರ್ತು ಸಂದರ್ಭದಲ್ಲಿ ರೋಗಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕಬಾರದು. ಈ ಬಗ್ಗೆ ಎಲ್ಲ ಆಸ್ಪತ್ರೆಗಳಿಗೆ ನಿರ್ದೇಶ ನೀಡಬೇಕು ಎಂದು ಆರೋಗ್ಯಾಧಿಕಾರಿಗೆ ಸೂಚಿಸಿದರು.

Advertisement

ವರದಿ ಬರುವವರೆಗೂ ಚಿಕಿತ್ಸೆ ನಿರಾಕರಣೆ
ಸದಸ್ಯೆ ಸುಜಾತಾ ಕೆ.ಪಿ. ಮಾತನಾಡಿ, ಗಂಭೀರ ಸ್ಥಿತಿಯಲ್ಲಿರುವ ವ್ಯಕ್ತಿಗಳ ಕೊರೊನಾ ಪರೀಕ್ಷೆಗೊಳಪಡಿಸಿ ವರದಿ ಬರುವವರೆಗೂ ಚಿಕಿತ್ಸೆ ನೀಡದಿರುವ ಪ್ರಕರಣಗಳು ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುತ್ತಿವೆ. ಮರದಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ರೋಗಿಯೊಬ್ಬರಿಗೆ 8 ದಿನ ಕಾಲ ಕೊರೊನಾ ಪರೀಕ್ಷೆ ವರದಿ ಬಾರದೆ ಚಿಕಿತ್ಸೆ ಕೊಡಿಸದಿರುವ ಘಟನೆ ನಡೆದಿದೆ ಎಂದರು.

ಡಿಎಚ್‌ಒ ಡಾ| ರಾಮಚಂದ್ರ ಬಾಯರಿ ಪ್ರತಿಕ್ರಿಯಿಸಿ, ತಾಲೂಕು ಮಟ್ಟದ ಸರಕಾರಿ ಆಸ್ಪತ್ರೆಗಳಲ್ಲಿ ದಾಖಲಾದವರನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಬೇಕು. ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ರೆಫರಲ್‌ ಮಾಡಬಾರದು. ಈ ಬಗ್ಗೆ ಈಗಾಗಲೇ ಎಲ್ಲ ತಾಲೂಕು ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ ಎಂದರು.

ತಾಲೂಕು ಆಸ್ಪತ್ರೆಗಳಲ್ಲಿ ಶೈತ್ಯಾಗಾರ
ಸಹಜ ಸಾವಿನ ಸಂದರ್ಭ ಮೃತದೇಹವನ್ನು ಖಾಸಗಿ ಆಸ್ಪತ್ರೆಗಳಲ್ಲಿ ಇಡುವ ವ್ಯವಸ್ಥೆ ಇರುವುದಿಲ್ಲ. ಹೀಗಾಗಿ ತಾಲೂಕು ಆಸ್ಪತ್ರೆಗಳಲ್ಲಿ ಕನಿಷ್ಠ 3 ಮೃತದೇಹಗಳನ್ನು ಇರಿಸುವ ಶೈತ್ಯಾಗಾರ ವ್ಯವಸ್ಥೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಚಂದ್ರ ಬಾಯರಿ ತಿಳಿಸಿದರು. ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಸ್ಥಾಯೀ ಸಮಿತಿ ಅಧ್ಯಕ್ಷರಾದ ಮಮತಾ, ರವೀಂದ್ರ ಕಂಬಳಿ ಉಪಸ್ಥಿತರಿದ್ದರು.

ಪೂರ್ವ ತಪಾಸಣೆಗೆ ಪಾವತಿ ಅನಿವಾರ್ಯ
ಆಯುಷ್ಮಾನ್‌ ಭಾರತ್‌ ಯೋಜನೆಯ ಅಧಿಕಾರಿ ಡಾ| ರತ್ನಾಕರ್‌ ಉತ್ತರಿಸಿ, ಬಿಪಿಎಲ್‌ ಕಾರ್ಡ್‌ನ ರೋಗಿಗಳಿಗೆ ಆಯುಷ್ಮಾನ್‌ ಭಾರತ್‌ನಡಿ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಲಭ್ಯವಿರುತ್ತದೆ. ಆದರೆ ವ್ಯಕ್ತಿಯ ರೋಗ ನಿರ್ಣಯಕ್ಕೂ ಮುನ್ನ ಕೆಲವೊಂದು ತಪಾಸಣೆ ಅಗತ್ಯವಾಗಿದ್ದು, ಈ ತಪಾಸಣೆ ವೆಚ್ಚ ಆಯುಷ್ಮಾನ್‌ ಭಾರತ್‌ ಯೋಜನೆಯಡಿ ಬರುವುದಿಲ್ಲವಾದ್ದರಿಂದ ರೋಗಿ ಕಡೆಯವರು ತಪಾಸಣಾ ವೆಚ್ಚ ಭರಿಸಬೇಕಾಗುತ್ತದೆ. ತಪಾಸಣಾ ಬಳಿಕದ ಚಿಕಿತ್ಸೆಯ ಎಲ್ಲ ಖರ್ಚು ವೆಚ್ಚಗಳು ಉಚಿತವಾಗಿರುತ್ತವೆ ಎಂದರು.

ಜನರಲ್‌ ವಾರ್ಡ್‌ಗೆ ಅನ್ವಯ
ರೋಗಿಗೆ ಆಯುಷ್ಮಾನ್‌ ಯೋಜನೆಯ ಪ್ರಯೋಜನ ಸಿಗಬೇಕಾದರೆ ಆತ ಜನರಲ್‌ ವಾರ್ಡ್‌ನಲ್ಲೇ ಚಿಕಿತ್ಸೆ ಪಡೆಯಬೇಕು. ಸೆಮಿ ಪ್ರೈವೆಟ್‌ ಅಥವಾ ಪ್ರೈವೆಟ್‌ ವಾರ್ಡ್‌ನಲ್ಲಿ ದಾಖಲಾದರೆ ಅನ್ವಯ ಆಗುವುದಿಲ್ಲ ಎಂದರು.

ವಿದೇಶಕ್ಕೆ ತೆರಳುವವರಿಗೆ 8 ಗಂಟೆಯಲ್ಲಿ ವರದಿ
ವಿದೇಶಕ್ಕೆ ತೆರಳುವವರಿಗೆ ಕೊರೊನಾ ತಪಾಸಣೆ ವಿಳಂಬವಾಗುತ್ತಿರುವುದರಿಂದ ಕೆಲಸವನ್ನೇ ಕಳೆದುಕೊಳ್ಳುವ ಸ್ಥಿತಿ ಉಂಟಾಗಿದೆ ಎಂದು ಧನಲಕ್ಷ್ಮೀ ಗಟ್ಟಿ ಆರೋಪಿಸಿದ್ದು, ಪ್ರತಿಕ್ರಿಯಿಸಿದ ಡಿಎಚ್‌ಒ ಅವರು, ವಿದೇಶಕ್ಕೆ ತೆರಳುವ ಬಗ್ಗೆ ಮಾಹಿತಿ ನೀಡಿದಲ್ಲಿ 8 ಗಂಟೆಯೊಳಗೆ ವರದಿ ನೀಡುವಂತೆ ಎಲ್ಲ ಸರಕಾರಿ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next