Advertisement

Dakshina Kannada: ಮಹಾಮಳೆಗೆ ತತ್ತರಿಸಿದ ಜಿಲ್ಲೆ; ಹಲವು ಪ್ರದೇಶಗಳ ಸಂಪರ್ಕ ಕಡಿತ

02:04 AM Jul 31, 2024 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಂಗಳವಾರ ದಿನವಿಡೀ ಧಾರಾಕಾರ ಮಳೆಯಾಗಿದ್ದು, ಹಲವು ರಸ್ತೆಗಳು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ನದಿಗಳು ಅಪಾಯ ಮಟ್ಟವನ್ನು ಮೀರಿ ಧುಮ್ಮುಕ್ಕಿ ಹರಿಯುತ್ತಿದ್ದು, ಕೆಲ ಮನೆಗಳು ಅಪಾಯ ಸ್ಥಿತಿಯಲ್ಲಿವೆ. ಮುನ್ನೆಚ್ಚರಿಕೆ ದೃಷ್ಟಿಯಿಂದ ದ.ಕ. ಜಿಲ್ಲೆಯಲ್ಲಿ ಜು. 31ರಂದು ಪ್ರಾಥಮಿಕ, ಪ್ರೌಢ ಶಾಲೆ ಮತ್ತು ಪದವಿ ಪೂರ್ವ ತರಗತಿಗಳಿಗೆ ರಜೆ ಘೋಷಿಸಿ ಜಿಲ್ಲಾಡಳಿತ ಆದೇಶಿಸಿದೆ.

Advertisement

ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿದು ಉಪ್ಪಿನಂಗಡಿಯಲ್ಲಿ ನೇತ್ರಾವತಿ ಮತ್ತು ಕುಮಾರಾಧಾರ ನದಿಗಳು ಸಹಸ್ರಲಿಂಗೇಶ್ವರ ದೇವಸ್ಥಾನದ ಮುಂಭಾಗ ಸಂಗಮ ಗೊಂಡರೆ ಬಂಟ್ವಾಳ ತಾ|ನ ನದಿ ತೀರದ ಹಲವು ಮನೆಗಳು ಮುಳುಗಡೆಯಾಗಿವೆ. ತಾಲೂಕಿನ ಪಾಣೆಮಂಗಳೂರು, ಬಂಟ್ವಾಳ, ನಾವೂರು, ಸರಪಾಡಿ, ಮಣಿನಾಲ್ಕೂರು ಗ್ರಾಮಗಳಲ್ಲಿ ಕೃಷಿ ತೋಟಗಳು, ಗದ್ದೆಗಳು ಮುಳುಗಡೆಯಾಗಿವೆ.

ಬಂಟ್ವಾಳ- ಜಕ್ರಿಬೆಟ್ಟು ರಸ್ತೆಯ ಕೋಟೆಕಣಿ, ಬಿ.ಸಿ.ರೋಡ್‌ನ‌ ಬಸ್ತಿಪಡು³, ಆಲಡ್ಕ ಪ್ರದೇಶ ಮೊದಲಾದ ಪ್ರದೇಶದಲ್ಲಿ ರಸ್ತೆಗೆ ನೀರು ಬಿದ್ದು ಸಂಚಾರ ಕಡಿತಗೊಂಡಿದೆ. ಬಿ.ಸಿ.ರೋಡು- ಪೊಳಲಿ ರಸ್ತೆಯ ಅಮಾrಡಿ ಬಳಿ ಗುಡ್ಡ ಕುಸಿದು ರಸ್ತೆ ಕಡಿತಗೊಂಡಿದೆ. ಬಿ.ಸಿ.ರೋಡು- ಪುಂಜಾಲಕಟ್ಟೆಯ ಹಲವೆಡೆ ಮಣ್ಣು ಕುಸಿದು ಹೆದ್ದಾರಿಗೆ ಬಿದ್ದಿದೆ. ಮಾವಿನಕಟ್ಟೆ- ಅಜಿಲಮೊಗರು ರಸ್ತೆಯಲ್ಲಿ ಗುಡ್ಡ ಕುಸಿದು ರಸ್ತೆಗೆ ಬಿದ್ದಿದ್ದು, ಮಣಿನಾಲ್ಕೂರು ಗ್ರಾಮದ ಡೆಚ್ಚಾರ್‌ ಬಳಿ ಗುಡ್ಡ ಕುಸಿದು ರಸ್ತೆಗೆ ಬಿದ್ದಿರುವ ಜತೆಗೆ ಕೃಷಿ ಭೂಮಿಗೆ ಮಣ್ಣು ಬಿದ್ದಿದೆ.

ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಮುಳುಗಡೆಯಾಗಿದ್ದು, ಸುಳ್ಯದ ಪಯಸ್ವಿನಿ ನದಿ ತುಂಬಿ ಹರಿಯುತ್ತಿದೆ. ಕಡಬ-ಸುಬ್ರಹ್ಮಣ್ಯ ಹೆದ್ದಾರಿಯ ಬಿಳಿನೆಲೆ ಸಮೀಪದ ಕೈಕಂಬ ಸೇತುವೆ ಮುಳುಗಡೆಯಾಗಿದೆ. ಸುಬ್ರಹ್ಮಣ್ಯ-ಗುಂಡ್ಯ ಹೆದ್ದಾರಿಯ ಚೇರು ಎಂಬಲ್ಲಿ ಹೆದ್ದಾರಿಗೆ ನುಗ್ಗಿದೆ. ಭಾರೀ ಮಳೆಗೆ ಸುಬ್ರಹ್ಮಣ್ಯ ಮಂಜೇಶ್ವರ ಹೆದ್ದಾರಿ ಜಲಾವೃತಗೊಂಡಿದೆ.

ಸರಪಾಡಿ ಅಣೆಕಟ್ಟಿನಿಂದ ನೀರು ಹರಿಸಿದ ಪರಿಣಾಮ ಪಾವೂರು, ಅಂಬ್ಲಿ ಮೊಗರು, ಹರೇಕಳ, ಪೆರ್ಮನ್ನೂರು, ಉಳ್ಳಾಲ ಭಾಗದ ನೇತ್ರಾವತಿ ತೀರದಲ್ಲಿ ಹಲವು ಮನೆ ಜಲಾವೃತಗೊಂಡಿದ್ದು ಮನೆ ಮಂದಿಯನ್ನು ಸ್ಥಳಾಂತರ ಗೊಳಿಸಲಾಗಿದೆ. ನರಿಂಗಾನದಲ್ಲಿ ಸುಂಟರಗಾಳಿಗೆ 10ಕ್ಕೂ ಮನೆಗಳಿಗೆ ಹಾನಿಯಾಗಿದೆ. ನೂರಕ್ಕೂ ಅಧಿಕ ಮರಗಳು ಧರೆಗುರುಳಿವೆ. ಕಾವೂರು ಬಳಿಯ ಶಾಂತಿನಗರದಲ್ಲಿ ಮನೆಯ ತಡೆಗೋಡೆ ಕುಸಿತಗೊಂಡಿದೆ. ಮುಲ್ಲಕಾಡು ಸಮೀಪ ಗುಡ್ಡ ಕುಸಿಯುವ ಭೀತಿ ಇದೆ. ಮಂಗಳೂರು ನಗರದಲ್ಲಿ ಬೆಳಗ್ಗೆಯಿಂದಲೇ ಬಿರುಸಿನ ಮಳೆಯಾಗಿದ್ದು, ರಾಷ್ಟ್ರೀಯ ಹೆದ್ದಾರಿ ಸಹಿತ ನಗರದ ರಸ್ತೆಗಳಲ್ಲಿ, ತಗ್ಗು ಪ್ರದೇಶಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ.

Advertisement

ತುರ್ತು ಸಂದರ್ಭ ಎದುರಿಸಲು ಸಜ್ಜಾಗಿ: ಕ್ಯಾ| ಚೌಟ ಮನವಿ
ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಜಿಲ್ಲೆಯ ಜನತೆ ಮುನ್ನೆಚ್ಚರಿಕೆ ವಹಿಸುವಂತೆ ಸಂಸದ ಕ್ಯಾ| ಬ್ರಿಜೇಶ್‌ ಚೌಟ ಮನವಿ ಮಾಡಿದ್ದಾರೆ. ಮಳೆಯಿಂದಾಗಿ ಹಲವೆಡೆ ಗುಡ್ಡ ಕುಸಿತ, ರಸ್ತೆ ಬ್ಲಾಕ್‌, ಮತ್ತು ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದು ಸ್ಥಳೀಯಾಡಳಿತದ ಸೂಚನೆಗಳನ್ನು ಪಾಲಿಸುವಂತೆ ತಿಳಿಸಿದ್ದಾರೆ. ತುರ್ತು ಸಂದರ್ಭವನ್ನು ಎದುರಿಸಲು ಜಿಲ್ಲಾಡಳಿತ ಸಜ್ಜಾಗಿರುವಂತೆ ಜಿಲ್ಲಾ ಅ ಧಿಕಾರಿಗಳಿಗೆ ಸಂಸದರು ಸೂಚನೆಯನ್ನು ನೀಡಿದ್ದು, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕಂಟ್ರೋಲ್‌ ರೂಂ ಗೆ ಮಾಹಿತಿ ನೀಡುವಂತೆ ಸಂಸದರು ವಿನಂತಿಸಿದ್ದಾರೆ.

ಮುನ್ನೆಚ್ಚರಿಕೆ ವಹಿಸಿ: ಡಿಸಿ
ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ತೀರ, ಸಮುದ್ರ ತೀರಕ್ಕೆ ಸಾರ್ವಜನಿಕರು/ಪ್ರವಾಸಿಗರು ತೆರಳದಂತೆ ಜಾಗ್ರತೆ ವಹಿಸಬೇಕು. ಮೀನುಗಾರರು ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಬಾರದು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಸಂಭಾವ್ಯ ಪ್ರವಾಹ/ಭೂಕುಸಿತ ಪ್ರದೇಶಗಳನ್ನು ಗುರುತಿಸಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.

ಜಿಲ್ಲೆಯಲ್ಲಿ ವಿಪರೀತ ಮಳೆ ಸುರಿಯುತ್ತಿರುವುದರಿಂದ ಸಾರ್ವಜನಿಕರು ನದಿಗಳ/ತೋಡುಗಳ ಸಮೀಪ ಹೋಗದಂತೆ ಎಚ್ಚರಿಕೆ ವಹಿಸಬೇಕು. ಪ್ರಾಕೃತಿಕ ವಿಕೋಪದಿಂದ ಯಾವುದೇ ರೀತಿಯ ಘಟನೆ ಸಂಭವಿಸಿದಲ್ಲಿ ಅಥವಾ ಸಂಭವಿಸಬಹುದಾದ ಸೂಚನೆ ಇದ್ದಲ್ಲಿ ಸಾರ್ವಜನಿಕರು ಕೂಡಲೇ ಸಂಬಂಧಪಟ್ಟ ಪಂಚಾಯತ್‌/ಸಂಸ್ಥೆಗಳಿಗೆ ಮಾಹಿತಿ ನೀಡಬೇಕು ಎಂದು ಅವರು ತಿಳಿಸಿದ್ದಾರೆ.

ಕೆತ್ತಿಕಲ್ಲು ಗುಡ್ಡದಲ್ಲಿ ಭೂಕುಸಿತ
ನಗರದ ಹೊರವಲಯದ ವಾಮಂಜೂರು ಬಳಿಯ ಕೆತ್ತಿಕಲ್ಲು ಗುಡ್ಡದಲ್ಲಿ ಭೂ ಕುಸಿತ ಉಂಟಾಗಿದ್ದು, ಗುಡ್ಡದ ಮೇಲಾºಗದಲ್ಲಿ ಅಲ್ಲಲ್ಲಿ ಕುಸಿತ ಉಂಟಾಗಿದೆ. ಸಾರ್ವಜನಿಕರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಸ್ಥಳಕ್ಕೆ ಪಾಲಿಕೆ ಆಯುಕ್ತ ಆನಂದ್‌ ಸಿ.ಎಲ್‌. ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರತಿಕ್ರಿಯಿಸಿದ ಅವರು,ಯಾವುದೇ ರೀತಿಯ ಆತಂಕಪಡುವ ಅಗತ್ಯವಿಲ್ಲ. ತುರ್ತುಕಾರ್ಯಾಚರಣೆಗೆ ರಾ. ಹೆದ್ದಾರಿ ಪ್ರಾಧಿಕಾರದ ವತಿಯಿಂದ ಪ್ರತ್ಯೇಕ ತಂಡ ನಿಯೋಜನೆ ಮಾಡಲಾಗಿದೆ. ಒಂದು ವೇಳೆ ಗುಡ್ಡಕುಸಿತ ಸಂಭವಿಸಿದರೆ ಪರ್ಯಾಯ ರಸ್ತೆಯ ಕುರಿತು ಪೊಲೀಸ್‌ ಇಲಾಖೆ ಸಮಾಲೋಚನೆ ನಡೆಸಿದೆ ಎಂದರು.

ಪ್ರವಾಹ ಪರಿಸ್ಥಿತಿ ನಿರ್ವಹಿಸಲು ಆದ್ಯತೆ ಮೇಲೆ ಕ್ರಮ: ದಿನೇಶ್‌ ಗುಂಡೂರಾವ್‌

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಡಳಿತ ಸಂಪೂರ್ಣ ಸನ್ನದ್ಧವಾಗಿರುವಂತೆ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಅವರು ಮಂಗಳವಾರ ಸೂಚಿಸಿದ್ದಾರೆ. ದ.ಕ. ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಿ, ಜಿಲ್ಲೆಯ ಮಳೆ ಹಾನಿ ಪರಿಸ್ಥಿತಿಯನ್ನು ಅವರು ಪರಾಮರ್ಶೆ ನಡೆಸಿದರು. ತುರ್ತು ಸಂದರ್ಭದಲ್ಲಿ ಕಾರ್ಯಾಚರಣೆಗೆ ತುರ್ತು ಸ್ಪಂದನಾ ಪಡೆ ಸದಾ ಸನ್ನದ್ಧವಾಗಿರಬೇಕು. ಮುಳುಗಡೆ ಪ್ರದೇಶದ ನಿವಾಸಿಗಳನ್ನು ಆದ್ಯತೆಯಲ್ಲಿ ಸ್ಥಳಾಂತರಿಸಬೇಕು ಎಂದು ಅವರು ತಿಳಿಸಿದರು.

ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಸನ್ನದ್ಧ
ಮುಂಗಾರು ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ತಂಡ ಸನ್ನದ್ಧವಾಗಿದೆ. ದೀಪಕ್‌ ಕುಮಾರ್‌ ಅವರ ನೇತೃತ್ವದ 26 ಮಂದಿಯ ಎನ್‌ಡಿಆರ್‌ಎಫ್‌ ತಂಡ ಪುತ್ತೂರು ತಾಲೂಕಿನಲ್ಲಿ ತಂಗಿದ್ದಾರೆ. 25 ಮಂದಿಯ ಎಸ್‌ಡಿಆರ್‌ಎಫ್‌ ತಂಡ ಸುಬ್ರಹ್ಮಣ್ಯ ಮತ್ತು ಮಂಗಳೂರಿನಲ್ಲಿ ಸನ್ನದ್ಧವಾಗಿದ್ದಾರೆ. 26 ಬೋಟ್‌ಗಳು ಇರಿಸಲಾಗಿದೆ.

143 ವಿದ್ಯುತ್‌ ಕಂಬಗಳಿಗೆ ಹಾನಿ
ಭಾರೀ ಗಾಳಿ-ಮಳೆಯ ಪರಿ ಣಾಮ ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿ ಎರಡು ದಿನಗಳಲ್ಲಿ 143 ವಿದ್ಯುತ್‌ ಕಂಬಗಳಿಗೆ ಹಾನಿ ಉಂಟಾಗಿದೆ.

ದ.ಕ.: ಇಂದು ಶಾಲೆಗೆ ರಜೆ
ದ.ಕ. ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗಿದ್ದು, ಹವಾಮಾನ ಇಲಾಖೆ “ರೆಡ್‌ ಅಲರ್ಟ್‌’ ಘೋಷಿಸಿದೆ. ಈ ನಿಟ್ಟಿನಲ್ಲಿ ದ.ಕ. ಜಿಲ್ಲೆಯ ಎಲ್ಲ ಅಂಗನವಾಡಿ, ಸರಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು (12ನೇ ತರಗತಿ) ಗಳಿಗೆ ಜು.31ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅವರು ಆದೇಶಿಸಿದ್ದಾರೆ.

ತುರ್ತು ಸೇವೆಗೆ 24×7 ಕಂಟ್ರೋಲ್‌
ರೂಂ: 1077/2442590
ಮಂಗಳೂರು ತಾ : 0824-2220587
ಉಳ್ಳಾಲ ತಾ. : 0824-2204424
ಬಂಟ್ವಾಳ ತಾ. : 08255 -232500
ಪುತ್ತೂರು ತಾ. : 08251-230349
ಬೆಳ್ತಂಗಡಿ ತಾ. : 08256-232047
ಸುಳ್ಯ ತಾ. : 08257-231231
ಮೂಡುಬಿದಿರೆ ತಾ. : 08258-238100
ಮೂಲ್ಕಿ ತಾ. : 0824-2294496

 

ಚಿತ್ರಕೃಪೆ: ವಸಂತ ನಾಯಕ್‌ ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next