ಮಂಗಳೂರು: ನಗರದ ಜ್ಯುವೆಲ್ಲರಿ ಅಂಗಡಿಯೊಂದರಲ್ಲಿ ಶುಕ್ರವಾರ ಹಾಡಹಗಲೇ ಸಿಬಂದಿಯನ್ನು ಹತ್ಯೆಗೈದ ಆರೋಪಿಯ ಪತ್ತೆ ಕಾರ್ಯಾಚರಣೆ ಮುಂದುವರಿದಿದೆ.
ಅಕ್ಕಪಕ್ಕದ ಅಂಗಡಿಗಳು ಸೇರಿದಂತೆ ಹಲವಾರು ಕಟ್ಟಡಗಳ ಸಿಸಿ ಕೆಮರಾ ದೃಶ್ಯಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದು, ದುಷ್ಕರ್ಮಿ ಕೃತ್ಯ ನಡೆಸಿದ ಬಳಿಕ ತುಂಬಾ ದೂರದವರೆಗೂ ಓಡಿ ಹೋಗಿರುವ ಮಾಹಿತಿ ಲಭ್ಯವಾಗಿದೆ ಎಂದು ತಿಳಿದುಬಂದಿದೆ. ಇಬ್ಬರು ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದು ಬೈಕ್‌ನ್ನು ಸಾಕಷ್ಟು ದೂರದಲ್ಲಿ ನಿಲ್ಲಿಸಿ ಓರ್ವ ಮಾತ್ರ ಜುವೆಲರಿ ಅಂಗಡಿಯೊಳಗೆ ನುಗ್ಗಿ ಹತ್ಯೆ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆಯಾದರೂ ದುಷ್ಕಮಿಗಳು ಸಂಚರಿಸಿರುವ ವಾಹನ ಯಾವುದು ಎಂಬುದು ಇನ್ನು ಕೂಡ ಸ್ಪಷ್ಟವಾಗಿ ಗೊತ್ತಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೊದಲೇ ಯೋಜನೆ ರೂಪಿಸಿದ್ದರು!
ಕೃತ್ಯಕ್ಕೂ ಮೊದಲು ಇಬ್ಬರು ದುಷ್ಕರ್ಮಿಗಳು ಬೈಕ್ ಅಥವಾ ಬೇರೆ ವಾಹನದಲ್ಲಿ ಅಂಗಡಿ ಪರಿಸರಕ್ಕೆ ಬಂದು ಸುತ್ತು ಹೊಡೆದು ಹೋಗಿದ್ದರು. ಸಾಕಷ್ಟು ಪೂರ್ವಯೋಜಿತವಾಗಿಯೇ ದಾಳಿ ನಡೆದಿದೆ ಎಂದು ತಿಳಿದುಬಂದಿದೆ. ಅಂಗಡಿ ಮಾಲಕರು ಪ್ರತೀದಿನ ಒಂದೇ ಸಮಯಕ್ಕೆ ಊಟಕ್ಕೆ ಹೋಗುತ್ತಿದ್ದರು. ಆ ವೇಳೆ ಸಿಬಂದಿ ರಾಘವೇಂದ್ರ ಮಾತ್ರ ಇರುತ್ತಿದ್ದರು. ಇದನ್ನು ಕೂಡ ಹಲವು ದಿನಗಳಿಂದ ಗಮನಿಸಿಯೇ ದುಷ್ಕರ್ಮಿಗಳು ಶುಕ್ರವಾರ ಕೃತ್ಯ ಎಸಗಿರುವ ಸಾಧ್ಯತೆ ಇದೆ.
ಆಟೋದ ಮೇಲೂ ಸಂಶಯ
ದುಷ್ಕರ್ಮಿ ಬೈಕ್‌ನಲ್ಲಿ ಬಂದಿದ್ದನೆ ಅಥವಾ ಬೇರೆ ಯಾವುದೇ ವಾಹನದಲ್ಲಿ ಬಂದಿದ್ದನೆ ಎಂಬುದು ಸ್ಪಷ್ಟವಾಗಿಲ್ಲ. ಸಿಸಿ ಕೆಮರಾದಲ್ಲಿ ದಾಖಲಾಗಿರುವ ಚಹರೆಯನ್ನು ಹೋಲುವ ಓರ್ವ ವ್ಯಕ್ತಿ ಆಟೋರಿಕ್ಷಾವನ್ನು ಏರಿರುವ ದೃಶ್ಯಗಳು ಕೂಡ ಪೊಲೀಸರಿಗೆ ಲಭಿಸಿದೆ. ವಾಹನ ಪತ್ತೆ ಪೊಲೀಸರಿಗೆ ಸವಾಲಾಗಿದೆ. ಅನುಮಾನಸ್ಪದ ಬೈಕೊಂದು ಸಂಚರಿಸುತ್ತಿರುವ ದೃಶ್ಯ ಸಿಸಿ ಕೆಮರಾದಲ್ಲಿ ದಾಖಲಾಗಿದ್ದರೂ ಅದರ ನೋಂದಣಿ ಸಂಖ್ಯೆ ಸ್ಪಷ್ಟವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
Related Articles
3 ಸರ ದರೋಡೆ
ಘಟನೆ ಬಗ್ಗೆ ಮಂಗಳೂರು ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಟ್ಟು 12 ಗ್ರಾಂ ತೂಕದ 60,000 ರೂ. ಮೌಲ್ಯದ 3 ಚಿನ್ನದ ಸರಗಳನ್ನು ದರೋಡೆ ಮಾಡಲಾಗಿದೆ ಎಂದು ಮಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ. ದುಷ್ಕರ್ಮಿ ಮಾಸ್ಕ್, ಕ್ಯಾಪ್ ಮತ್ತು ಜರ್ಕಿನ್ ಧರಿಸಿದ್ದ. ಆತ ಕೃತ್ಯ ನಡೆಸುವಾಗಲೂ ಅದನ್ನು ತೆಗೆದಿರಲಿಲ್ಲ . ಅಲ್ಲದೆ ಜುವೆಲರಿ ಅಂಗಡಿಯೊಳಗಿನ ಸಿಸಿ ಕೆಮರಾದ ದೃಶ್ಯ ಸಮರ್ಪಕವಾಗಿ ದೊರೆಯದೇ ಇರುವುದು ಕೂಡ ತನಿಖೆಗೆ ತೊಡಕಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಡಕುಟುಂಬದ ಅಮಾಯಕ
ದುಷ್ಕರ್ಮಿಗಳಿಂದ ಹತ್ಯೆಯಾದ ಜುವೆಲರಿ ಅಂಗಡಿಯ ಸಿಬಂದಿ ರಾಘವ ಆಚಾರ್ಯ (55) ಅವರದ್ದು ಬಡ ಕುಟುಂಬ. ಅತ್ತಾವರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಹಲವು ವರ್ಷಗಳಿಂದ ವಿವಿಧೆಡೆ ಚಿನ್ನದ ಅಂಗಡಿಗಳಲ್ಲಿ ಕೆಲಸ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಕಳೆದ 7 ವರ್ಷಗಳಿಂದ ಕೃತ್ಯ ನಡೆದ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ರಾಘವ ಆಚಾರ್ಯ ಅವರ ಓರ್ವ ಪುತ್ರ ಊರಿನಲ್ಲಿ ಸರಿಯಾದ ಕೆಲಸ ಸಿಗದೆ ಇತ್ತೀಚೆಗಷ್ಟೆ ದುಬಾೖಗೆ ಕೆಲಸ ಹುಡುಕಿಕೊಂಡು ಹೋಗಿದ್ದರು. ಇನ್ನೋರ್ವ ಪುತ್ರ ಕೂಡ ಉದ್ಯೋಗವಿಲ್ಲದೆ ಪರದಾಡುತ್ತಿದ್ದಾರೆ. ಪುತ್ರಿ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ರಾಘವ ಅವರ ಪತ್ನಿ ಬೇಕರಿಯಲ್ಲಿ ಕೆಲಸ ಮಾಡುತ್ತಾ ಕುಟುಂಬಕ್ಕೆ ಹೆಗಲು ಕೊಡುತ್ತಿದ್ದಾರೆ. ಇದೀಗ ರಾಘವ ಅವರ ಹತ್ಯೆಯಿಂದ ಕುಟುಂಬ ಕಂಗಾಲಾಗಿದೆ.
ಇದನ್ನೂ ಓದಿ: 2019ರ ಜಾಮಿಯಾ ಮಿಲಿಯಾ ಗಲಭೆ : ಶರ್ಜೀಲ್ ಇಮಾಮ್‌ಗೆ ಜಾಮೀನು