Advertisement

ದಕ್ಷಿಣ ಕನ್ನಡ: ಮಲೇರಿಯಾ, ಡೆಂಗ್ಯೂ ನಿಯಂತ್ರಣಕ್ಕೆ ಶಿಬಿರ

03:38 PM Jul 03, 2019 | Vishnu Das |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಲೇರಿಯಾ, ಡೆಂಗ್ಯೂ ಪ್ರಕರಣಗಳು ವರದಿಯಾಗುವ ಪ್ರದೇಶದಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸಿ ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಆರ್‌. ಸೆಲ್ವಮಣಿ ತಿಳಿಸಿದರು.

Advertisement

ದ.ಕ. ಜಿ.ಪಂ.ನ 16ನೇ ಸಾಮಾನ್ಯ ಸಭೆಯ ಮುಂದುವರಿಕಾ ಸಭೆಯು ಮಂಗಳವಾರ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆಯಲ್ಲಿ ಜರಗಿತು. ಜಿಲ್ಲೆಯಲ್ಲಿ ಮಲೇರಿಯಾ ಹಾಗೂ ಡೆಂಗ್ಯೂ ಹಾವಳಿ ಕುರಿತಂತೆ ಜಿ.ಪಂ. ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಜಿ.ಪಂ. ಸಿಇಒ ಅವರು ಈಗಾಗಲೇ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಮಲೇರಿಯಾ, ಡೆಂಗ್ಯೂ ವರದಿಯಾಗುವ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆ ಹಾಗೂ ಖಾಸಗಿ ವೈದ್ಯಕೀಯ ಆಸ್ಪತ್ರೆಗಳ ಸಹಯೋಗ ದೊಂದಿಗೆ ವಿಶೇಷ ಶಿಬಿರಗಳನ್ನು ಆಯೋಜಿಸಲಾಗುವುದು ಎಂದರು.

ರೋಗ ನಿಯಂತ್ರಣದ ಬಗ್ಗೆ ಆರೋಗ್ಯ ಇಲಾಖೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ ರಾವ್‌ ಅವರು, ಕಳೆದ ಸಾಲಿಗೆ ಹೋಲಿಸಿದರೆ ಮಲೇರಿಯಾ ಇಳಿಮುಖವಾಗಿದೆ. ಮಂಗಳೂರು ನಗರದಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ ಎಂದರು.

ಎಸ್‌ಎಸ್‌ಎಲ್‌ಸಿ ಫಲಿತಾಂಶ: ಅಭಿನಂದನೆ
ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದ.ಕ. ಜಿಲ್ಲೆ ರ್‍ಯಾಂಕಿಂಗ್‌ನಲ್ಲಿ 7 ನೇ ಸ್ಥಾನಕ್ಕೆ ಕುಸಿದರೂ ಒಟ್ಟು ಉತ್ತೀರ್ಣತೆಯಲ್ಲಿ ಉತ್ತಮ ಸಾಧನೆ ಮಾಡಿದ್ದು ಇದಕ್ಕೆ ಜಿಲ್ಲೆಯ ಶಿಕ್ಷಣ ಇಲಾಖೆ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅಭಿನಂದನೀಯರು ಎಂದು ಸದಸ್ಯ ಸಾಹುಲ್‌ ಹಮೀದ್‌ ಹೇಳಿದರು. ಮಮತಾ ಗಟ್ಟಿ , ತುಂಗಪ್ಪ ಬಂಗೇರ ಮೊದಲಾದವರು ಸಹಮತ ವ್ಯಕ್ತಪಡಿಸಿದರು.

ಫಲಿತಾಂಶದ ವಿವರ ನೀಡಿದ ಡಿಡಿಪಿಐ ವೈ. ಶಿವರಾಮಯ್ಯ ಅವರು, ದ.ಕ. ಜಿಲ್ಲೆ ಎಸ್‌ಎಸ್‌ಎಲ್‌ಸಿಯಲ್ಲಿ 2017ರಲ್ಲಿ ಶೇ. 82.39, 2018ರಲ್ಲಿ ಶೇ. 85.56 ಹಾಗೂ 2019ರಲ್ಲಿ ಶೇ. 86.85 ಫಲಿತಾಂಶ ದಾಖಲಿಸಿದೆ. ಮರು ಮಾಪನದ ಬಳಿಕ ಇದು ಶೇ. 87.88ಕ್ಕೇರಿದೆ. ವರ್ಷದಿಂದ ವರ್ಷಕ್ಕೆ ಒಟ್ಟು ಉತ್ತೀರ್ಣದಲ್ಲಿ ಹೆಚ್ಚಳವಾಗಿದೆ. ಇದಲ್ಲದೆ ಮರುಮೌಲ್ಯ ಮಾಪನದ ಬಳಿಕ ಜಿಲ್ಲೆಯ ಮೂವರು ವಿದ್ಯಾರ್ಥಿಗಳು ರಾಜ್ಯದಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದಿದ್ದಾರೆ. ಶೇ. 100 ಫಲಿತಾಂಶದಲ್ಲೂ ಜಿಲ್ಲೆ ಉತ್ತಮ ಸಾಧನೆ ತೋರಿದೆ ಎಂದರು.

Advertisement

43 ಶಾಲೆಗಳಲ್ಲಿ ಆಂಗ್ಲಮಾಧ್ಯಮ
ಜಿಲ್ಲೆಯ 43 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭಿಸಲಾಗಿದ್ದು ಹೆಚ್ಚುವರಿಯಾಗಿ 14 ಶಾಲೆಗಳಿಗೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಡಿಡಿಪಿಐ ತಿಳಿಸಿದರು.

ಕ್ರೀಡಾ ಇಲಾಖೆಯ ಅನುದಾನ ವಿನಿಯೋಗ, ಕಾರ್ಯನಿರ್ವಹಣೆ ಬಗ್ಗೆ ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ ಸದಸ್ಯೆ ಆಶಾ ತಿಮ್ಮಪ್ಪ, ಸುಚರಿತ ಶೆಟ್ಟಿ , ಹರೀಶ್‌ ಕಂಜಿಪಿಲಿ ಅಸಮಾಧಾನ ವ್ಯಕ್ತಪಡಿಸಿ ಈ ಬಗ್ಗೆ ಇಲಾಖೆ ಸಮಗ್ರ ವಿವರ ನೀಡಬೇಕು ಎಂದರು. ಇದಕ್ಕೆ ಉತ್ತರಿಸಿದ ಜಿ.ಪಂ. ಸಿಇಒ, ತಾಲೂಕು ಕ್ರೀಡಾ ಸಮಿತಿಗಳ ಸಭೆಯನ್ನು ಜು. 17ರೊಳಗೆ ನಡೆಸಿ ವರದಿ ನೀಡಬೇಕು ಎಂದರು.

ಪ್ರತಿಧ್ವನಿಸಿದ ಪುತ್ತೂರು ಪ್ರಕರಣ
ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ಪುತ್ತೂರಿನಲ್ಲಿ ಸರಕಾರಿ ಆಸ್ಪತ್ರೆಯ ವೈದ್ಯೆಯೊಂದಿಗೆ ದುರ್ವರ್ತನೆ ತೋರಿ ಕರ್ತವ್ಯಕ್ಕೆ ಅಡ್ಡಿಪಡಿಸಿದರೆನ್ನಲಾದ ಪ್ರಕರಣ ಜಿ.ಪಂ. ಸಭೆಯಲ್ಲೂ ಪ್ರತಿಧ್ವನಿಸಿತು. ವಿಷಯ ಪ್ರಸ್ತಾವಿಸಿದ ಸದಸ್ಯ ಎಂ.ಎಸ್‌. ಮಹಮ್ಮದ್‌ ಅವರು ಸರಕಾರಿ ವೈದ್ಯರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕುರಿತು ಜಿ.ಪಂ. ಅಧ್ಯಕ್ಷರ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಾಗಿರುವುದಾಗಿ ವರದಿಯಾಗಿದೆ. ವೈದ್ಯರಿಂದಲೂ ಪ್ರತಿಭಟನೆ ವ್ಯಕ್ತವಾಗಿದೆ. ಈ ಬಗ್ಗೆ ಜಿ.ಪಂ. ಅಧ್ಯಕ್ಷರು ಸತ್ಯಾಂಶ ಸದನಕ್ಕೆ ತಿಳಿಸಬೇಕು ಎಂದರು

ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಪೊಲೀಸ್‌ ದೌರ್ಜನ್ಯಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿಯನ್ನು ಭೇಟಿಯಾಗಲು ಆಸ್ಪತ್ರೆಗೆ ತೆರಳಿದ್ದೆ. ವೈದ್ಯರಿಂದ ಮಾಹಿತಿ ಕೋರಿದಾಗ ಸರಿಯಾದ ಅವರಿಂದ ಸ್ಪಂದನೆ ದೊರಕಿಲ್ಲ ಎಂದರು. ಎಫ್‌ಐಆರ್‌ ದಾಖಲಾಗಿರುವುದರಿಂದ ಅಧ್ಯಕ್ಷರು ಸಭೆಯ ಅಧ್ಯಕ್ಷತೆ ವಹಿಸಬಹುದೇ ಎಂದು ಸಾಹುಲ್‌ ಹಮೀದ್‌ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜಿ.ಪಂ. ಸಿಇಒ ಈ ಬಗ್ಗೆ ಕರ್ನಾಟಕ ಪಂಚಾಯತ್‌ರಾಜ್‌ ಕಾಯ್ದೆಯಲ್ಲಿ ಯಾವುದೇ ಸ್ಪಷ್ಟ ಉಲ್ಲೇಖವಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next