ಉಡುಪಿ: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿಯ ಮುಂಗಾರಿಗೆ ಒಟ್ಟು 47,390 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಉತ್ಪಾದನೆ ಗುರಿ ಹೊಂದಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಒಟ್ಟು 38 ಸಾವಿರ ಹೆಕ್ಟೇರ್ ಹಾಗೂ ದ.ಕ. ಜಿಲ್ಲೆಯಲ್ಲಿ 9,390 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಉತ್ಪಾದನೆ ಗುರಿ ಹೊಂದಲಾಗಿದೆ. ಕಳೆದ ವರ್ಷವೂ ಇಷ್ಟೇ ಪ್ರಮಾಣದ ಗುರಿ ಹೊಂದಲಾಗಿತ್ತು.
ಈ ಬಾರಿ ಉಡುಪಿಯಲ್ಲಿ 17,650, ಕುಂದಾಪುರ 13,250 ಹಾಗೂ ಕಾರ್ಕಳದಲ್ಲಿ 7,100 ಹೆಕ್ಟೇರ್ ಹಾಗೂ ದ.ಕ. ಜಿಲ್ಲೆಯ ಮಂಗಳೂರು 1,500, ಮೂಡುಬಿದಿರೆ 1,650, ಮೂಲ್ಕಿ 1,700, ಉಳ್ಳಾಲ 850, ಬಂಟ್ವಾಳ 1,510, ಬೆಳ್ತಂಗಡಿ 1,600, ಪುತ್ತೂರು 205, ಕಡಬ 165, ಸುಳ್ಯ 210 ಹೆಕ್ಟೇರ್ ಪ್ರದೇಶಗಳಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದೆ.
ಬಿತ್ತನೆ ಬೀಜ ಉತ್ಪಾದನೆ
ಜಿಲ್ಲೆಗೆ 2,500 ಕ್ವಿಂಟಲ್ ಬಿತ್ತನೆ ಬೀಜಕ್ಕೆ ಬೇಡಿಕೆ ಇದೆ. 1,914 ಕ್ವಿಂಟಲ್ ಬಿತ್ತನೆ ಬೀಜ ಸರಬರಾಜಾಗಿದ್ದು, 1,870 ಮಂದಿ ರೈತರಿಗೆ 829 ಕ್ವಿಂಟಲ್ ಬಿತ್ತನೆ ಬೀಜಗಳನ್ನು ಈಗಾಗಲೇ ವಿತರಿಸಲಾಗಿದೆ. 1,085 ಕ್ವಿಂಟಲ್ ಬಿತ್ತನೆ ಬೀಜಗಳನ್ನು ದಾಸ್ತಾನು ಇರಿಸಲಾಗಿದೆ. ದ.ಕ. ಜಿಲ್ಲೆಯಲ್ಲಿ 340 ಕ್ವಿಂಟಾಲ್ ಬಿತ್ತನೆ ಬೀಜ ಬಂದಿದ್ದು 15 ರೈತ ಸೇವಾ ಕೇಂದ್ರಗಳಲ್ಲಿ ಲಭ್ಯವಿದೆ.
ರೈತ ಕೇಂದ್ರಗಳಲ್ಲಿ ಲಭ್ಯ
ಜಿಲ್ಲೆಯ ಕಾಪು, ಕೋಟ, ಬ್ರಹ್ಮಾವರ, ಉಡುಪಿ, ಕುಂದಾಪುರ, ಬೈಂದೂರು, ವಂಡ್ಸೆ, ಕಾರ್ಕಳ, ಅಜೆಕಾರಿನ ಹೋಬಳಿ ರೈತ ಸೇವಾ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳು ಲಭ್ಯವಿದೆ. 1 ಕೆ.ಜಿ.ಬಿತ್ತನೆ ಬೀಜ ಕೆ.ಜಿ.ಗೆ 45.75 ರೂ. ನಿಗದಿಪಡಿಸಲಾಗಿದೆ. ಜನರಲ್‌ಗೆ 8 ರೂ. ಹಾಗೂ ಎಸ್‌ಸಿ-ಎಸ್‌ಟಿಗೆ 12 ರೂ. ಸಬ್ಸಿಡಿಯಲ್ಲಿ ಬಿತ್ತನೆ ಬೀಜ ಲಭ್ಯವಾಗಲಿದೆ. ಹಸುರೆಲೆ ಗೊಬ್ಬರ ಬೀಜಗಳೂ ದಾಸ್ತಾನಿವೆ. ಡಿಎಪಿ, ಎಂಓಪಿ, ಎನ್‌ಪಿಕೆ ಕಾಂಪ್ಲೆಕ್ಸ್ ಹಾಗೂ ಯೂರಿಯಾ ಸೇರಿದಂತೆ ಒಟ್ಟು 1,380 ಟನ್ ವಿವಿಧ ರಸಗೊಬ್ಬರಗಳು ಜಿಲ್ಲೆಯ ವಿವಿಧ ಸಹಕಾರ ಹಾಗೂ ಖಾಸಗಿ ಮಳಿಗೆಗಳಲ್ಲಿ ಲಭ್ಯವಿದೆ.
Related Articles
ಶೇ. 95ರಷ್ಟು ಎಂಒ4 ಭತ್ತ
ಉಡುಪಿ ಜಿಲ್ಲೆಯಲ್ಲಿ ಎಂಒ4 ಭತ್ತಕ್ಕೆ ಹೆಚ್ಚಿದ ಬೇಡಿಕೆ ವ್ಯಕ್ತವಾಗುತ್ತಿದೆ. ಈ ಹಿಂದೆ ಹೆಚ್ಚಿನ ಮಂದಿ ಜಯ ಭತ್ತದ ಬೀಜ ಖರೀದಿಸುತ್ತಿದ್ದರು. ಆದರೆ ಇದರ ಪೈರು ಎತ್ತರಕ್ಕೆ ಬೆಳೆಯುವ ಕಾರಣ ಗಾಳಿ, ಮಳೆಗೆ ಅಡ್ಡ ಬಿದ್ದು, ಕಟಾವು ಕಷ್ಟಕರವಾಗುತ್ತಿತ್ತು. ಎಂಒ4 ಗಿಡ್ಡ ತಳಿಯಾಗಿದ್ದು, ಇಳುವರಿಯೂ ಉತ್ತಮವಾಗಿ ಬರುತ್ತಿದೆ. ಈ ಕಾರಣಕ್ಕೆ ರೈತರು ಈಗ ಇದನ್ನೇ ಖರೀದಿ ಮಾಡುತ್ತಿದ್ದಾರೆ. ಜಿಲ್ಲೆಗೆ ಈ ಬಾರಿ ಶೇ.95ರಷ್ಟು ಎಂಓ4 ಬಿತ್ತನೆ ಬೀಜಗಳು ಆಗಮಿಸಿವೆ. ಮುಂದಿನ ದಿನದಲ್ಲಿ ಜ್ಯೋತಿ, ಜಯ ತಳಿಯ ಬಿತ್ತನೆ ಬೀಜಗಳೂ ಲಭ್ಯವಿರಲಿವೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.
– ಪುನೀತ್ ಸಾಲ್ಯಾನ್