Advertisement

ಪ್ರವಾಸಕ್ಕೆ ರಜೆ ಇಂಬು; ಕರಾವಳಿಯ ಪುಣ್ಯಕ್ಷೇತ್ರ, ಪ್ರವಾಸಿ ತಾಣಗಳಲ್ಲಿ ಜನಸಂದಣಿ

12:32 AM Oct 17, 2021 | Team Udayavani |

ಉಡುಪಿ/ ಮಂಗಳೂರು: ಕೋವಿಡ್‌ ಹಿನ್ನೆಲೆಯಲ್ಲಿ ಸೊರಗಿದ್ದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮತ್ತೆ ಚೇತರಿಕೆ ಕಾಣುತ್ತಿದೆ. ದಸರಾ ಹಿನ್ನೆಲೆಯಲ್ಲಿ ಸಾಲು ರಜೆಗಳು ಇರುವುದರಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಹಿತ ರಾಜ್ಯದ ಪ್ರವಾಸಿ ತಾಣಗಳಲ್ಲಿ ಜನರು ದಂಡು ಕಾಣಿಸುತ್ತಿದೆ.

Advertisement

ಅ. 14ರ ದಸರಾ ದಿನದಿಂದ ರಜೆಗಳ ಸರಣಿ ಆರಂಭವಾಗಿದೆ. ಅ. 14 ಮತ್ತು 15 ದಸರಾ- ವಿಜಯದಶಮಿ ರಜೆ ಇತ್ತು. ಶನಿವಾರ ಮಾತ್ರ ಕಚೇರಿ, ರವಿವಾರ ವಾರದ ರಜೆ. ಸೋಮವಾರ ಒಂದು ದಿನ ಕಚೇರಿ. ಮತ್ತೆ ಮಂಗಳವಾರ, ಬುಧವಾರ ವಾಲ್ಮೀಕಿ ಜಯಂತಿ ಮತ್ತು ಈದ್‌ಮಿಲಾದ್‌ ರಜೆ ಇದೆ. ಹೀಗಾಗಿ ಬಹುತೇಕ ಜನರು ಶನಿವಾರ ಮತ್ತು ಸೋಮವಾರ ರಜೆ ಹಾಕಿ ದೀರ್ಘ‌ ಪ್ರವಾಸ ತೆರಳಿದ್ದಾರೆ. ಪ್ರವಾಸಿ ತಾಣಗಳು ತುಂಬಿ ತುಳುಕುತ್ತಿವೆ.

ಪುಣ್ಯಕ್ಷೇತ್ರಗಳಲ್ಲಿ ಜನದಟ್ಟಣೆ
ಕರಾವಳಿಯ ಪುಣ್ಯಕ್ಷೇತ್ರಗಳಾದ ಕೊಲ್ಲೂರು, ಉಡುಪಿ, ಕಟೀಲು, ಧರ್ಮಸ್ಥಳ, ಸುಬ್ರಹ್ಮಣ್ಯಗಳಲ್ಲಿ ಕೆಲವು ದಿನಗಳಿಂದ ಭಕ್ತರ ಸಂಖ್ಯೆ ಹೆಚ್ಚಿದೆ. ಸರಣಿ ರಜೆ ಇರುವುದರಿಂದ ಉತ್ತರ ಮತ್ತು ದಕ್ಷಿಣ ಕರ್ನಾಟಕದ ಪ್ರವಾಸಿಗರು ಕರಾವಳಿಯತ್ತ ಹರಿದು ಬರುತ್ತಿದ್ದಾರೆ. ಇನ್ನುಳಿದ ಪ್ರವಾಸಿ ತಾಣಗಳಾದ ಮಲ್ಪೆ, ಮರವಂತೆ, ಪಣಂಬೂರು ಮೊದಲಾದ ಕಡಲ ಕಿನಾರೆಗಳಲ್ಲಿ ಜನರು ತುಂಬಿ ತುಳು ಕಾಡುತ್ತಿದ್ದಾರೆ.

ಮಲ್ಪೆಯಲ್ಲಿ ಶನಿವಾರ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿ ವಾಹನಗಳು ಬೀಚ್‌ ಕಡೆಗೆ ಆಗಮಿಸಿದ್ದು, ಜನ ಜಂಗುಳಿಯಾಗಿದೆ. ಕರಾವಳಿ ಬೈಪಾಸ್‌ನಿಂದಲೇ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

ಮೈಸೂರಿನಲ್ಲಿ ದಸರೆ ಮುಗಿದ ಮೇಲೂ ಪ್ರವಾಸಿಗರ ದಂಡು ಇದೆ. ಶನಿವಾರ ಒಂದೇ ದಿನ ಮೈಸೂರಿಗೆ 50 ಸಾವಿರ ಮಂದಿ ಭೇಟಿ ನೀಡಿದ್ದಾರೆ.

Advertisement

ಜೋಗಕ್ಕೆ ಮುಗಿಬಿದ್ದ ಜನ
ಜೋಗ ಜಲಪಾತ ಮತ್ತು ಸಿಗಂದೂರು ಚೌಡೇಶ್ವರಿ ಪ್ರವಾಸಿ ತಾಣಗಳಲ್ಲೂ ಪ್ರವಾಸಿಗರು ಕಂಡುಬಂದರು. ಮಳೆ ಚೆನ್ನಾಗಿ ಆಗುತ್ತಿರುವುದರಿಂದ ಜೋಗದಲ್ಲಿ ಎಂದಿಗಿಂತ ಹೆಚ್ಚು ಜನ ಕಂಡು ಬಂದರು. ಮುಳ್ಳಯ್ಯನಗಿರಿ ಸೇರಿದಂತೆ ಬಹುತೇಕ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದಂಡು ನೆರೆದಿತ್ತು.

ಇದನ್ನೂ ಓದಿ: ಅಪರಾಧಿಯನ್ನು ಸಾರ್ವಜನಿಕವಾಗಿ ನೇಣಿಗೇರಿಸುವುದಿಲ್ಲ: ತಾಲಿಬಾನ್‌

ಪುಣ್ಯಕ್ಷೇತ್ರ, ಪ್ರವಾಸಿ ತಾಣಗಳಲ್ಲಿ ಜನದಟ್ಟಣೆ
ಕೊಲ್ಲೂರು, ಶ್ರೀಕೃಷ್ಣ ಮಠಕ್ಕೆ ಭಕ್ತರ ದಂಡು
ಮಂಗಳೂರು/ಉಡುಪಿ/ ಕೊಲ್ಲೂರು: ಸರಣಿ ರಜೆಗಳು ಮತ್ತು ವಾರಾಂತ್ಯದ ಹಿನ್ನೆಲೆಯಲ್ಲಿ ಕರಾವಳಿಯ ದೇವಸ್ಥಾನಗಳು ಮತ್ತು ಪ್ರವಾಸಿ ತಾಣಗಳಲ್ಲಿ ಶನಿವಾರ ಜನದಟ್ಟಣೆ ಕಾಣಿಸಿಕೊಂಡಿತು.

ಉಡುಪಿ ಶ್ರೀಕೃಷ್ಣ ಮಠಕ್ಕೆ ಶನಿವಾರ 10,000ಕ್ಕೂ ಮಿಕ್ಕಿದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ನವರಾತ್ರಿ ಕೊನೆಯ ವೇಳೆ, ವಾರಾಂತ್ಯದ ಕಾರಣ ಮತ್ತು ಹಿಂದಿನ ಎರಡು ದಿನ ಮತ್ತು ರವಿವಾರದ ರಜೆ ಹಿನ್ನೆಲೆಯಲ್ಲಿ ಶನಿವಾರ ಒಂದು ದಿನ ರಜೆ ಹಾಕಿ ಪ್ರವಾಸಕ್ಕೆ ಹೊರಟ ಕಾರಣ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಉಡುಪಿ ನಗರದಲ್ಲಿ ರವಿವಾರ ಟ್ರಾಫಿಕ್‌ ಜಾಮ್‌ ಕಂಡುಬಂತು.

ಕೊಲ್ಲೂರು ದೇವಸ್ಥಾನ
ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ನವರಾತ್ರಿ ಉತ್ಸವ ಮುಗಿದರೂ ಭಕ್ತರ  ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಶನಿವಾರ 10 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಶ್ರೀ ದೇವಿಯ ದರ್ಶನ ಪಡೆದರು.  ನವರಾತ್ರಿ ವೇಳೆಯಲ್ಲೂ ಇಷ್ಟು ಸಂಖ್ಯೆಯ ಭಕ್ತರ ಆಗಮನ ಆಗಿರಲಿಲ್ಲ.ದೇಗುಲದ ಆಡಳಿತ ಮಂಡಳಿ ಹಾಗೂ ಸಿಬಂದಿ ಭಕ್ತರಿಗೆ ದೇವಿಯ ಅನಾಯಾಸ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿದ್ದರು.

ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲೂ ಶನಿವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕಂಡುಬಂದರು. ರವಿವಾರ ಮತ್ತು ಸೋಮವಾರ ಇದು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.

ಮಲ್ಪೆ ಬೀಚ್‌ಗೆ ಪ್ರವಾಸಿಗರ ಲಗ್ಗೆ; ವಾಹನ ದಟ್ಟಣೆ
ಶನಿವಾರ ಮಲ್ಪೆ ಬೀಚ್‌, ಸೈಂಟ್‌ಮೇರಿ ದ್ವೀಪ, ಸೀವಾಕ್‌ಗೆ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಅಗಮಿಸಿರುವುದು ಕಂಡು ಬಂದಿದೆ.

ಬೆಳಗ್ಗಿನಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿ ವಾಹನಗಳು ಬೀಚ್‌ ಕಡೆಗೆ ಅಗಮಿಸುತ್ತಿದ್ದು, ಸಂಜೆಯಾಗುತ್ತಲೇ ಸ್ಥಳೀಯರೂ ಸೇರಿ ಜನ ಜಂಗಳಿಯಾಗಿದೆ. ಕರಾವಳಿ ಬೈಪಾಸ್‌ನಿಂದ ಮಲ್ಪೆ ರಸ್ತೆಯಲ್ಲಿ ಬೆಳಗ್ಗಿನಿಂದ ರಾತ್ರಿಯವರೆಗೂ ವಾಹನಗಳ ಸಾಲು ಕಂಡು ಬಂದಿದ್ದು, ಟ್ರಾಫಿಕ್‌ ಜಾಮ್‌ ಸಮಸ್ಯೆಯಿಂದಾಗಿ ತಾಸುಗಟ್ಟಲೆ ಸಂಚಾರ ಅಸ್ತವ್ಯಸ್ತಗೊಂಡಿತು. ಬೀಚ್‌ನ ಪಾರ್ಕಿಂಗ್‌ ಏರಿಯಾಗಳಲ್ಲಿ ವಾಹನ ನಿಲುಗಡೆಗೆ ಜಾಗದ ಸಮಸ್ಯೆ ಎದುರಾಗಿ ಬಹುತೇಕ ಮಂದಿ ವಾಪಸಾಗಿದ್ದರು. ಪೊಲೀಸರು ಸುಗಮ ಸಂಚಾರ ವ್ಯವಸ್ಥೆಗೆ ಹರಸಾಹಸ ಪಡುತ್ತಿದ್ದರು. ಸುರತ್ಕಲ್‌, ಪಣಂಬೂರು ಬೀಚ್‌ಗಳಲ್ಲೂ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next