Advertisement

ದ.ಕ. : 8 ವಿದ್ಯಾರ್ಥಿಗಳು ಟಾಪರ್‌ ಪಟ್ಟಿಯಲ್ಲಿ

02:26 AM May 12, 2017 | Karthik A |

ಮಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಕಳೆದ ಬಾರಿ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದ ದ.ಕ. ಜಿಲ್ಲೆ ಈ ಸಲ ಎರಡನೇ ಸ್ಥಾನ ಗಳಿಸಿದೆ. ಜತೆಗೆ ವಿಜ್ಞಾನ ವಿಭಾಗದಲ್ಲಿ ಮೊದಲ ಹಾಗೂ ತೃತೀಯ ಸ್ಥಾನ, ವಾಣಿಜ್ಯ ವಿಭಾಗದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳಿಸುವ ಮೂಲಕ ದ.ಕ. ಮುಂಚೂಣಿಯಲ್ಲಿದೆ. ವಿಜ್ಞಾನ ವಿಭಾಗದಲ್ಲಿ ಮಂಗಳೂರಿನ ಎಕ್ಸ್‌ ಪರ್ಟ್‌ ಪ.ಪೂ. ಕಾಲೇಜಿನ ಸೃಜನಾ ಎನ್‌. 596 ಅಂಕಗಳೊಂದಿಗೆ ಮೊದಲ ಸ್ಥಾನಗಳಿಸಿದ್ದಾರೆ. ಆಳ್ವಾಸ್‌ ಪ.ಪೂ. ಕಾಲೇಜಿನ ಮಹಾಗುಂಡಯ್ಯ ವಸ್ತ್ರದ್‌, ನಿಹಾರಿಕಾ ಎಚ್‌.ಆರ್‌. ಮತ್ತು ಎಸ್‌ಡಿಎಂ ಪ.ಪೂ. ಕಾಲೇಜಿನ ಪ್ರಣವ್‌ ಭಟ್‌ ತಲಾ 594 ಅಂಕಗಳೊಂದಿಗೆ 3ನೇ ಸ್ಥಾನ ಗಳಿಸಿದ್ದಾರೆ. ಇನ್ನೊಂದೆಡೆ ವಾಣಿಜ್ಯ ವಿಭಾಗದಲ್ಲಿಯೂ ದ.ಕ. ಪ್ರಥಮ ಸ್ಥಾನ ಪಡೆದಿದ್ದು, ಅಳಿಕೆ ಸತ್ಯಸಾಯಿ ಲೋಕಸೇವಾ ಪಪೂ ಕಾಲೇಜಿನ ಸಾಯಿ ಸಮರ್ಥ್ 595 ಅಂಕ ಪಡೆಯುವುದರೊಂದಿಗೆ ಮುಂಚೂಣಿಯಲ್ಲಿದ್ದಾರೆ.
 
ಹಾಗೆಯೇ ಆಳ್ವಾಸ್‌ ಪಪೂ ಕಾಲೇಜಿನ ವಿ. ಸ್ಪಂದನಾ 594 ಅಂಕದೊಂದಿಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಅಲ್ಲದೇ ಆಳ್ವಾಸ್‌ ಪಪೂ ಕಾಲೇಜಿನ ಅನಿತಾ ಕೃಷ್ಣಾನಂದ ಹೆಗ್ಡೆ ಹಾಗೂ ಮಂಗಳೂರಿನ ಸಂತ ಅಲೋಶಿಯಸ್‌ ಪಪೂ ಕಾಲೇಜಿನ ದರ್ಶನ್‌ ಪಿ. ತಲಾ 593 ಅಂಕಗಳೊಂದಿಗೆ 3ನೇ ಸ್ಥಾನ ಗಳಿಸಿದ್ದಾರೆ.

Advertisement

ಶೇಕಡಾವಾರು ಫಲಿತಾಂಶದಲ್ಲೂ ಕುಸಿತ: ದ.ಕ. ಜಿಲ್ಲೆಯಲ್ಲಿ ಈ ಶೈಕ್ಷಣಿಕ ಸಾಲಿನಲ್ಲಿ ಒಟ್ಟು 38,568 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 33,578 ಮಂದಿ ಉತ್ತೀರ್ಣರಾಗಿ ಶೇ. 89.92 ಫಲಿತಾಂಶ ಬಂದಿದೆ. ಖಾಸಗಿಯಾಗಿ ಕುಳಿತ ವಿದ್ಯಾರ್ಥಿಗಳ ಸಂಖ್ಯೆ 4,002 ಆಗಿದ್ದು, ಈ ಪೈಕಿ 1620 ಮಂದಿ ಉತ್ತೀರ್ಣರಾಗಿ ಶೇ. 40.18 ಫಲಿತಾಂಶ ದೊರಕಿದೆ. 184 ಪುನರಾವರ್ತಿತ ವಿದ್ಯಾರ್ಥಿಗಳಲ್ಲಿ 43 ಮಂದಿ ಉತ್ತೀರ್ಣರಾಗಿದ್ದಾರೆ. 

ವಿಭಾಗವಾರು ಫಲಿತಾಂಶ: ಕಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 4,498 ವಿದ್ಯಾರ್ಥಿಗಳ ಪೈಕಿ 3,414 ಮಂದಿ ಉತ್ತೀರ್ಣರಾಗಿ ಶೇ. 75.9 ಫಲಿತಾಂಶ ದಾಖಲಾಗಿದೆ. ವಾಣಿಜ್ಯ ವಿಭಾಗದಲ್ಲಿ 14,906 ಮಂದಿಯಲ್ಲಿ 13,651 ಮಂದಿ ಪಾಸಾಗಿ ಶೇ. 91.58 ಫಲಿತಾಂಶ ಪಡೆದಿದೆ. ವಿಜ್ಞಾನ ವಿಭಾಗದಲ್ಲಿ 14,978 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 13,850 ಮಂದಿ ತೇರ್ಗಡೆ ಹೊಂದಿ ಶೇ. 92.47 ಫಲಿತಾಂಶ ಬಂದಿದೆ.

ನಗರ/ಗ್ರಾಮಾಂತರ: ನಗರ ಪ್ರದೇಶದ 23,574 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು, 21,387 ಮಂದಿ ಪಾಸಾಗಿ ಶೇ. 90.72 ಫಲಿತಾಂಶ ಬಂದಿದೆ. ಗ್ರಾಮಾಂತರ ಪ್ರದೇಶದ 10,606 ಮಂದಿಯ ಪೈಕಿ 9,528 ಮಂದಿ ಉತ್ತೀರ್ಣರಾಗಿ ಶೇ. 88.16 ಫಲಿತಾಂಶ ಬಂದಿದೆ.

ಹುಡುಗಿಯರೇ ಮೇಲುಗೈ: ಫಲಿತಾಂಶದಲ್ಲಿ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆ ಬರೆದ 19,456 ಮಂದಿ ವಿದ್ಯಾರ್ಥಿನಿಯರ ಪೈಕಿ 17,367 ಮಂದಿ ಪಾಸಾಗಿ ಶೇ. 89.26 ಫಲಿತಾಂಶ ಬಂದಿದೆ. 19,112 ಹುಡುಗರು ಹಾಜರಾಗಿದ್ದು, 15,211 ಮಂದಿ ತೇರ್ಗಡೆಯಾಗಿದ್ದಾರೆ.

Advertisement

ಟಾಪರ್ಸ್‌: ದ.ಕ.ದ 8 ವಿದ್ಯಾರ್ಥಿಗಳು
ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ದ.ಕ. ಜಿಲ್ಲೆಯ ಒಟ್ಟು 8 ವಿದ್ಯಾರ್ಥಿಗಳು ಅಗ್ರ 10 ಮಂದಿಯಲ್ಲಿ ಸ್ಥಾನ ಗಳಿಸುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಕಳೆದ ಮೂರು ವರ್ಷಗಳಿಂದ ಸತತವಾಗಿ ದ.ಕ. ಜಿಲ್ಲೆಯು ಪಿಯು ಫಲಿತಾಂಶದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next