Advertisement

ದ.ಕ ಜಿಲ್ಲೆಯಲ್ಲಿ ಕೋವಿಡ್-19 ಅಟ್ಟಹಾಸ: ಒಂದೇ ದಿನ ಮೂವರ ಸಾವು

12:06 PM Jul 08, 2020 | mahesh |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ಅಟ್ಟಹಾಸ ಅಂಕೆ ಮೀರುತ್ತಿದೆ. ಇಂದು ಬೆಳಿಗ್ಗೆ ಮೂವರು ಕೋವಿಡ್-19 ಸೋಂಕಿತರು ಸಾವನ್ನಪ್ಪಿದ್ದು. ಜಿಲ್ಲೆಯಲ್ಲಿ  ವೈರಾಣು ಪೀಡಿತರ ಸಾವಿನ ಸಂಖ್ಯೆ 29ಕ್ಕೆ ಏರಿಕೆಯಾಗಿದೆ.

Advertisement

ಉಳ್ಳಾಲ ಅಜಾದ್ ನಗರದ 56 ವರ್ಷದ ಮಹಿಳೆ, ಪುತ್ತೂರು ಮೂಲದ 32 ವರ್ಷದ ಮಹಿಳೆ, ಭಟ್ಕಳ ಮೂಲದ 60 ವರ್ಷದ ವ್ಯಕ್ತಿ ಕೋವಿಡ್ ವೈರಸ್ ಗೆ  ಅಸುನೀಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ವಿವಿಧ ಖಾಯಿಲೆಗಳಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.

ಅಜಾದ್ ನಗರದ 56 ವರ್ಷದ ಪ್ರಥಮ ಸೋಂಕಿತ ಮಹಿಳೆ ಜೂನ್ 19 ರಂದು ಭೇದಿ ಕಾಯಿಲೆಗೆಂದು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಜೂನ್ 22 ರಂದು ಇವರಿಗೆ ಕೋವಿಡ್ ಸೋಂಕು ಇರುವುದು ಪತ್ತೆಯಾಗಿತ್ತು.

ಸದ್ಯ ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಮೂವರು ಕೋವಿಡ್ ಮಹಾಮಾರಿಗೆ ಬಲಿಯಾಗಿರುವುದು ಖಚಿತವಾಗಿದ್ದು ಅರೋಗ್ಯ ಇಲಾಖೆಯ ಅಧಿಕೃತ ಮಾಹಿತಿ ಇನ್ನಷ್ಟೇ ಬರಬೇಕಿದೆ.

ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ 83 ಮಂದಿಗೆ ಕೋವಿಡ್ ಇರುವುದು  ದೃಢಪಟ್ಟಿದೆ. ಈ ಪೈಕಿ 48 ಮಂದಿಗೆ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ, ಇಬ್ಬರಿಗೆ ದ್ವಿತೀಯ ಸಂಪರ್ಕದಿಂದ, 21 ಮಂದಿಗೆ ತೀವ್ರ ಉಸಿರಾಟದ ಸಮಸ್ಯೆಯಿಂದ, ಇಬ್ಬರಿಗೆ ಚಿಕ್ಕಮಗಳೂರಿಗೆ ಪ್ರಯಾಣ ಮಾಡಿದ ಹಿನ್ನೆಲೆಯಲ್ಲಿ ಕೋವಿಡ್ 19 ಸೋಂಕು ಬಾಧಿಸಿದೆ. 3 ಮಂದಿಗೆ ರ್‍ಯಾಂಡಮ್‌ ಪರೀಕ್ಷೆ ವೇಳೆ, 3 ಮಂದಿಗೆ ಶಸ್ತ್ರಚಿಕಿತ್ಸೆಗೂ ಮುನ್ನ ಮತ್ತು ಓರ್ವರಿಗೆ ಹೆರಿಗೆಗೂ ಮುನ್ನ ಪರೀಕ್ಷಿಸಿದಾಗ ಕೋವಿಡ್ 19 ಸೋಂಕು ದೃಢಪಟ್ಟಿದೆ. 3 ಮಂದಿಯ ಸಂಪರ್ಕವನ್ನು ಪತ್ತೆಹಚ್ಚಲಾಗುತ್ತಿದೆ. ಪ್ರಾಥಮಿಕ ಸಂಪರ್ಕದಿಂದ 11 ತಿಂಗಳ ಗಂಡು ಮಗುವಿಗೂ ಕೋವಿಡ್  ಬಾಧಿಸಿದೆ.

Advertisement

ಪುತ್ತೂರು ಮೂಲದ ಬಾಣಂತಿ ಸಾವು:

ವೈರಸ್ ಸೋಂಕಿತ ಪುತ್ತೂರು ಕೂರ್ನಡ್ಕ ಮೂಲದ ಬಾಣಂತಿ ಒಬ್ಬರು ಮಂಗಳೂರು ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.  ಇವರು ಇತ್ತೀಚೆಗೆ ಹೆರಿಗೆಗೆಂದು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಈ ವೇಳೆ ಇವರ  ಗಂಟಲು ದ್ರವ ಮಾದರಿ ಪರೀಕ್ಷೆಗೊಳಪಡಿಸಿದಾಗ ಆಕೆಗೆ ಸೋಂಕು ಇರುವುದು ದೃಢಪಟ್ಟಿತ್ತು. ಹೆರಿಗೆಯಾದ ಬಳಿಕ ಮಹಿಳೆ ಮತ್ತು ಹಸುಳೆಯನ್ನು ಮಂಗಳೂರು ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಇದೀಗ ಬಾಣಂತಿ ಆರೋಗ್ಯದಲ್ಲಿ ಏರುಪೇರಾಗಿದ್ದು ಜುಲೈ 8ರ ನಸುಕಿನ ಜಾವ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಮೃತ ದೇಹ ಪುತ್ತೂರಿಗೆ

ಮಹಿಳೆಯ ಮೃತ ದೇಹವನ್ನು ಪುತ್ತೂರಿಗೆ ತರಲಾಗುವುದು. ಬಳಿಕ ಬೆದ್ರಾಳದಲ್ಲಿ ಕೋವಿಡ್ ಸುರಕ್ಷತೆಯೊಂದಿಗೆ, ಸರ್ಕಾರದ ಮಾರ್ಗಸೂಚಿ ಪ್ರಕಾರ ಆಂತ್ಯಕ್ರೀಯೆ  ನಡೆಯಲಿದೆ ಎಂದು ಮಾಹಿತಿ ತಿಳಿದು ಬಂದಿದೆ

Advertisement

Udayavani is now on Telegram. Click here to join our channel and stay updated with the latest news.

Next