Advertisement

Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !

12:48 PM May 02, 2024 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಸಿಲಿನ ತಾಪ ಏರಿಕೆಯಾಗುತ್ತಿದ್ದರೂ ಇಲ್ಲಿನ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲೇನು ಕಡಿಮೆಯಾಗಿಲ್ಲ. ಮೂರು ತಿಂಗಳಲ್ಲಿ ಜಿಲ್ಲೆಗೆ ಸುಮಾರು 1.23 ಕೋಟಿ ಗೂ ಅಧಿಕ ಮಂದಿ ಪ್ರವಾಸಿಗರು ವಿವಿಧ ಪ್ರವಾಸಿ ತಾಣಗಳಿಗೆ ಆಗಮಿಸಿದ್ದಾರೆ.

Advertisement

ದ.ಕ. ಜಿಲ್ಲೆಯ ಬೀಚ್‌, ಧಾರ್ಮಿಕ ಕ್ಷೇತ್ರ, ಉದ್ಯಾನವನ ಸಹಿತ ವಿವಿಧ ಪ್ರೇಕ್ಷಣೀಯ ಸ್ಥಳಗಳು ಪ್ರವಾಸಿಗರಿಗೆ ಆಕರ್ಷಣೆ ಪಡೆಯುತ್ತಿದೆ. ಜನವರಿ ತಿಂಗಳಿನಿಂದ ಮಾರ್ಚ್‌ ತಿಂಗಳವರೆಗೆ ಒಟ್ಟು 1,23,28,390 ಮಂದಿ ದೇಶೀಯ ಮತ್ತು 3347 ಮಂದಿ ವಿದೇಶಿ ಪ್ರವಾಸಿಗರು ಆಗಮಿಸಿ, ವಿವಿಧ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಒಟ್ಟಾರೆ ಗಮಿನಿಸಿದರೆ ಧಾರ್ಮಿಕ ಕ್ಷೇತ್ರಗಳಿಗೆ ಆಗಮಿಸಿದ ಪ್ರವಾಸಿಗರೇ ಸಿಂಹ ಪಾಲು.

ಕುಕ್ಕೆ ಸುಬ್ರಹ್ಮಣ್ಯಕ್ಕೆ 27 ಲಕ್ಷ ಮಂದಿ, ಧರ್ಮಸ್ಥಳ ಕ್ಷೇತ್ರಕ್ಕೆ 26.01 ಲಕ್ಷ, ಶ್ರೀ ಕ್ಷೇತ್ರ ಕಟೀಲಿಗೆ 23.99 ಲಕ್ಷ, ತಣ್ಣೀರುಬಾವಿ 5.96 ಲಕ್ಷ, ಸೋಮೇಶ್ವರ 3.11 ಲಕ್ಷ, ಪಣಂಬೂರು ಬೀಚ್‌ಗೆ 6.76 ಲಕ್ಷ, ಪಿಲಿಕುಳ 2.83 ಲಕ್ಷ, ಬಪ್ಪನಾಡು ಕ್ಷೇತ್ರ 6.51 ಲಕ್ಷ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಕ್ಷೇತ್ರ 2.49 ಲಕ್ಷ ಸಹಿತ ವಿವಿಧ ಕಡೆಗಳಿಗೆ ಪ್ರವಾಸಿಗರು ಭೇಟಿ ನೀಡಿದ್ದಾರೆ.

ವಿದೇಶಿ ಪ್ರವಾಸಿಗರು ಬಂದವರೆಷ್ಟು?
ದಕ್ಷಿಣ ಕನ್ನಡ ಜಿಲ್ಲೆಗೆ ರಸ್ತೆ, ವಿಮಾನ, ರೈಲು, ಹಡಗು ಸಂಪರ್ಕ ಇರುವ ಕಾರಣ ವಿದೇಶದಿಂದಲೂ ಹಲವಾರು ಮಂದಿ ಇಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾರೆ. ಮೂರು ತಿಂಗಳಲ್ಲಿ 3,347 ಮಂದಿ ವಿದೇಶಿಗರು ಆಗಮಿಸಿದ್ದಾರೆ. ಮುಖ್ಯವಾಗಿ ಪಿಲಿಕುಳ
ನಿಸರ್ಗಧಾಮ 705 ಮಂದಿ, ಧರ್ಮಸ್ಥಳ 435, ಮೂಡುಬಿದಿರೆ 650, ಪಣಂಬೂರು 465, ಸುರತ್ಕಲ್‌ 275, ಕಟೀಲು 175,
ಸೋಮೇಶ್ವರ 126, ತಣ್ಣೀರುಬಾವಿ 139 ಮಂದಿ ಭೇಟಿ ನೀಡಿದ್ದಾರೆ.

ಎಲ್ಲೆಲ್ಲಿಗೆ ಬಂದವರು?
ದಕ್ಷಿಣ ಕನ್ನಡ ಜಿಲ್ಲೆಯ ಪಣಂಬೂರು, ಸುರತ್ಕಲ್‌, ಉಳ್ಳಾಲ, ಸೋಮೇಶ್ವರ, ಕಟೀಲು, ಮೂಡಬಿದಿರೆ, ತಣ್ಣೀರುಬಾವಿ, ಪಿಲಕುಳ ನಿಸರ್ಗಧಾಮ, ಸಸಿಹಿತ್ಲು ಬೀಚ್‌, ತಲಪಾಡಿ ಬೀಚ್‌, ನೆಲ್ಲಿತೀರ್ಥ ಗುಹಾಲಯ, ಗುರುಪುರ ನದಿ, ನೇತ್ರಾವತಿ ನದಿ, ಸೀಮಂತಿಬಾಯಿ ಮ್ಯೂಸಿಯಂ, ಸುಲ್ತಾನ್‌ಬತ್ತೇರಿ, ಪಾಂಡೇಶ್ವರ ಅಂಚೆ ಕಚೇರಿ, ಧರ್ಮಸ್ಥಳ, ವೇಣೂರು, ಜಮಲಾಬಾದ್‌ ಕೋಟೆ, ಎರ್ಮಾಯಿ ಜಲಪಾತ, ದಿಡುಪ್ಪೆ ಜಲಪಾತ, ಕಡಮಗುಂಡಿ ಜಲಪಾತ, ಪಶ್ಚಿಮಘಟ್ಟ, ತೋಡಿಕಾನ ಜಲಪಾತ, ಮತ್ಸ್ಯದಾಮ, ಎಣ್ಮೂರು ಬಂಟಮಲೆ ಮತ್ತು ಪೂಮಲೆ, ಬೆಂದ್ರ್ತೀರ್ಥ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ, ಶಿರಾಡಿ,
ಬಿರುಮಲೆ ಬೆಟ್ಟ, ಪಡುಮಲೆ ಬೆಟ್ಟ, ಶಿವರಾಮ ಕಾರಂತ ಬಾಲವನ, ಅನಂತವಾಡಿ ಪಾಂಡವರ ಗುಹೆ, ಕೊಡ್ಯಡ್ಕ, ಬೆಳುವಾಯಿ ಚಿಟ್ಟೆ ಪಾರ್ಕ್‌, ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ, ಶ್ರೀ ಬಪ್ಪನಾಡು ಕ್ಷೇತ್ರ, ಶ್ರೀ ಮರೋಳಿ ಕ್ಷೇತ್ರ ಸಹಿತ ಒಟ್ಟು 38 ಸ್ಥಳಗಳಿಗೆ 1.23 ಕೋಟಿಗೂ ಮಿಕ್ಕಿ ಪ್ರವಾಸಿಗರು ದೌಡಾಯಿಸಿದ್ದಾರೆ.

Advertisement

ಕಳೆದ ವರ್ಷ ಮೂರು ಕೋಟಿ ಪ್ರವಾಸಿಗರು
ದಕ್ಷಿಣ ಕನ್ನಡ ಜಿಲ್ಲೆಗೆ ಕಳೆದ ವರ್ಷ (2023) 3.28 ಕೋಟಿ ಮಂದಿ ದೇಶೀಯರು ಮತ್ತು 3,818 ಮಂದಿ ವಿದೇಶಿ ಪ್ರವಾಸಿಗರು ಆಗಮಿಸಿದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಪ್ರವಾಸಿಗರ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ. 2022ರಲ್ಲಿ ಕೋವಿಡ್‌ ಆತಂಕ ಕಾರಣಕ್ಕೆ ಪ್ರವಾಸಿಗರ ಸಂಖ್ಯೆಯಲ್ಲೂ ಇಳಿಕೆ ಕಂಡಿತ್ತು. 1.28 ಕೋಟಿ ಮಂದಿ ದೇಶೀಯರು, 1,261 ಮಂದಿ ವಿದೇಶಿ ಪ್ರವಾಸಿಗರ ಆಗಮನವಾಗಿತ್ತು.

ಪ್ರವಾಸೋದ್ಯಮ ಚೇತರಿಕೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರ ಚಿಗುರೊಡೆಯುತ್ತಿದೆ. ಜನವರಿಯಿಂದ ಮಾರ್ಚ್‌ ತಿಂಗಳಾಂತ್ಯದವರೆಗೆ ಜಿಲ್ಲೆಯ 39 ಪ್ರವಾಸಿ ತಾಣಗಳಿಗೆ 1.23 ಕೋಟಿಗೂ ಅಧಿಕ ಮಂದಿ ಪ್ರವಾಸಿಗರು ಆಗಮಿಸಿದ್ದಾರೆ. ಈಗಾಗಲೇ ಮಕ್ಕಳಿಗೆ ರಜಾ ಆರಂಭಗೊಂಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇದೆ.
* ಮಾಣಿಕ್ಯ, ದ.ಕ. ಜಿಲ್ಲೆ
ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ

*ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next