Advertisement

ಹೈನುಗಾರಿಕೆಗೆ ನಿರಂತರ ಪ್ರೋತ್ಸಾಹ ಅಗತ್ಯ: ಡಾ|ಹೆಗ್ಗಡೆ

11:16 PM Nov 19, 2019 | mahesh |

ಮಂಗಳೂರು: ಹೈನುಗಾರಿಕೆಯು ರೈತರಿಗೆ ದಿನವೂ ಆದಾಯ ತಂದುಕೊಡುವ ಕ್ಷೇತ್ರವಾಗಿದೆ. ಇದಕ್ಕೆ ಪ್ರೋತ್ಸಾಹ ಅಗತ್ಯ, ಈ ನಿಟ್ಟಿನಲ್ಲಿ ಸರಕಾರ ಹೈನುಗಾರರಿಗೆ ನೀಡುತ್ತಿರುವ ಪ್ರೋತ್ಸಾಹಧನ ಉಪಯುಕ್ತವಾಗಿದೆ. ಇದು ನಿರಂತರವಾಗಿರಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ
ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದರು.

Advertisement

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಮತ್ತು ಜಿಲ್ಲಾ ಸಹಕಾರಿ ಯೂನಿಯನ್‌ ಆಶ್ರಯದಲ್ಲಿ 66ನೇ ಅಖೀಲ ಭಾರತ ಸಹಕಾರಿ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ “ಸಹಕಾರ ಸಂಸ್ಥೆಗಳ ಮೂಲಕ ಆರ್ಥಿಕ ಸೇರ್ಪಡೆ, ತಂತ್ರಜ್ಞಾನ ಅಳವಡಿಕೆ ಮತ್ತು ಗಣಕೀಕರಣ ದಿನಾಚರಣೆ’ಯನ್ನು ಮಂಗಳವಾರ ಉದ್ಘಾಟಿಸಿ, ನಂದಿನಿ ಕಷಾಯ ಹಾಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ ಅವರು ಮಾತನಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ. ಹೈನುಗಾರಿಕೆಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ 17.5 ಕೋ.ರೂ. ನೆರವು ನೀಡಿದೆ ಎಂದರು.

ಹೊಸದಾಗಿ ಬಿಡುಗಡೆಯಾಗಿರುವ ನಂದಿನಿ ಕೋಲ್ಡ್‌ ಕಾಫಿ ಮತ್ತು ನಂದಿನಿ ಕಷಾಯ ಹಾಲು ಹಿಂದಿನ ಉತ್ಪನ್ನಗಳ ಮಾದರಿಯಲ್ಲೇ ಯಶಸ್ಸು ಗಳಿಸಲಿ ಎಂದು ಹಾರೈಸಿದರು. ಕೋಲ್ಡ್‌ ಕಾಫಿ ಬಿಡುಗಡೆಗೊಳಿಸಿದ ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌
ಮಾತನಾಡಿ, ಕಾಲದ ಅಗತ್ಯಗಳಿಗೆ ತಕ್ಕಂತೆ ಉತ್ಪನ್ನ ಗಳಲ್ಲೂ ಪರಿವರ್ತನೆಯ ಅಗತ್ಯವಿದೆ. ಈ ನಿಟ್ಟಿನಲ್ಲಿ ದ.ಕ. ಹಾಲು ಒಕ್ಕೂಟ ಸಾಗುತ್ತಿದೆ ಎಂದರು.

ಕ್ಯಾಂಪ್ಕೋ ಅಧ್ಯಕ್ಷ ಸತೀಶ್ಚಂದ್ರ ಎಸ್‌.ಆರ್‌. ಅವರು ನಂದಿನಿ ಬಿಡಿ ಪೇಡಾ 25 ಗ್ರಾಂ ಪ್ಯಾಕ್‌ ಬಿಡುಗಡೆ ಮಾಡಿದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ವೇದವ್ಯಾಸ ಕಾಮತ್‌ ಅವರು “ನನ್ನಾಸೆಯ ನಂದಿನಿ’ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿದರು. ನಂದಿನಿ ಪನೀರ್‌ 500 ಗ್ರಾಂ ಪ್ಯಾಕ್‌ ಬಿಡುಗಡೆ ಮಾಡಲಾಯಿತು.

ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಪ್ರಸ್ತಾವನೆಗೈದು, ಒಕ್ಕೂಟವು ವರ್ತಮಾನದ ಆವಶ್ಯಕತೆಗಳನ್ನು ದೃಷ್ಟಿಯಲ್ಲಿರಿಸಿ ಹೊಸ ಉತ್ಪನ್ನಗಳೊಂದಿಗೆ ನಿರಂತರವಾಗಿ ಪ್ರಗತಿಪಥದಲ್ಲಿ ಮುನ್ನಡೆಯುತ್ತಾ ಬಂದಿದೆ ಎಂದರು.

Advertisement

ವ್ಯವಸ್ಥಾಪಕ ನಿರ್ದೇಶಕ ಡಾ| ಜಿ.ವಿ. ಹೆಗ್ಡೆ ಸ್ವಾಗತಿಸಿದರು. ಉಪಾಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ವಂದಿಸಿದರು. ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಪ್ರಸಾದ್‌ ಕೌಶಲ್‌ ಶೆಟ್ಟಿ, ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್‌ ನಾಯಕ್‌, ಪಶುಸಂಗೋಪನ ಇಲಾಖೆಯ ಉಪನಿರ್ದೇಶಕ ಡಾ| ಎಸ್‌. ಜಯರಾಜ್‌, ಒಕ್ಕೂಟದ ನಿರ್ದೇಶಕರು ಉಪಸ್ಥಿತರಿದ್ದರು.

ಒಕ್ಕೂಟದ ಸಾಧನೆ
ದ.ಕ. ಹಾಲು ಒಕ್ಕೂಟ ಗುಣ ಮಟ್ಟದ ಹಾಲು, ಹಾಲಿನ ಉತ್ಪನ್ನಗ ಳನ್ನು ನೀಡುತ್ತಿದ್ದು, ಗ್ರಾಹಕರ ಪ್ರೀತಿ, ನಂಬಿಕೆಗೆ ಪಾತ್ರವಾಗಿದೆ. ದಿನಕ್ಕೆ 4.85 ಲಕ್ಷ ಲೀ. ಹಾಲು ಸಂಗ್ರಹ ಮಾಡುತ್ತಿದ್ದು, ದಾಖಲೆಯತ್ತ ಮುನ್ನಡೆಯುತ್ತಿದೆ. 30 ಸಾವಿರ ಲೀ. ಹಾಲಿನೊಂದಿಗೆ ಮುಂಬಯಿ ಮಾರುಕಟ್ಟೆಯನ್ನು ಪ್ರವೇಶಿಸಿದ ಒಕ್ಕೂಟ ಇಂದು 1.80 ಲಕ್ಷ ಲೀ. ಹಾಲು ಮಾರಾಟ ಮಾಡುತ್ತಿದೆ. ರಾಜ್ಯದ 14 ಒಕ್ಕೂಟಗಳಲ್ಲೇ ಪ್ರಥಮ ಬಾರಿಗೆ ನಂದಿನಿ ಕೋಲ್ಡ್‌ ಕಾಫಿ ಮತ್ತು ನಂದಿನಿ ಕಷಾಯ ಹಾಲು ಬಿಡುಗಡೆ ಮಾಡಿದೆ ಎಂದು ಅಧ್ಯಕ್ಷ ರವಿರಾಜ ಹೆಗ್ಡೆ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next