Advertisement

ವಿದೇಶದ ಉದ್ಯೋಗ ಬಿಟ್ಟು ಕೃಷಿ,ಹೈನುಗಾರಿಕೆ !

10:13 AM Sep 20, 2019 | Sriram |

ಬೆಳ್ಮಣ್‌: ವಿದೇಶದಲ್ಲಿದ್ದು ಕೈ ತುಂಬಾ ಸಂಪಾದನೆಯಿದ್ದರೂ ಕೃಷಿಯೊಂದಿಗೆೆ ಹಳ್ಳಿ ಬದುಕಿಗೆ ಮಾರು ಹೋಗಿ ಹುಟ್ಟೂರಿನಲ್ಲಿ ಆಡು ಸಾಕಣೆ, ದನ ಸಾಕಣೆಯ ಹಾಗೂ ವಿವಿಧ ಕೃಷಿ ಚಟುವಟಿಕೆಗಳನ್ನು ಮಾಡಿ ಲಾಭ ಪಡೆಯತ್ತಿರುವ ನಂದಳಿಕೆ ಗೋಳಿಕಟ್ಟೆಯ ಡೊಮಿನಿಕ್‌ ಎಡ್ವರ್ಡ್‌ ಹಾಗೂ ಮರಿಯಾ ಗ್ರೆಟ್ಟಾ ದಂಪತಿ ಮಾದರಿಯೆನಿಸಿದ್ದಾರೆ.

Advertisement

ಆಡು ಸಾಕಣೆ
ಇವರು ವಿವಿಧ ಆಡುಗಳನ್ನು ಸಾಕುತ್ತಿದ್ದು ಅವುಗಳನ್ನು ಮಾಂಸ ಮಾರಾಟಕ್ಕಾಗಿ ಬಳಸದೇ ಬಗೆ ಬಗೆಯ ಹೈಬ್ರಿಡ್‌ ತಳಿಗಳ ಉತ್ಪಾದನೆಗಳಲ್ಲಿ ತೊಡಗಿಸಿಕೊಂಡು ಉತ್ತಮ ಲಾಭ ಗಳಿಸುತ್ತಿದ್ದಾರೆ. ಪಂಜಾಬಿ ಬೆತೆಲ್‌, ಜಮುನಾ ಪಾರಿ, ಶಿರೋಯಿ ರಾಜಸ್ತಾನ್‌, ಉಸ್ಮಾನಾ ಬಾರಿ ಸಹಿತ ವಿವಿಧ ತಳಿಗಳ ಆಡುಗಳಿದ್ದು ಅವುಗಳನ್ನು ಕ್ರಾಸಿಂಗ್‌ ನಡೆಸಿ ಬಣ್ಣ ಬಣ್ಣಗಳ ತಳಿಗಳನ್ನು ಪಡೆಯುತ್ತಾರೆ. ಪ್ರಸ್ತುತ ಇವರ ಬಳಿ 36 ಬಗೆಯ ವರ್ಣ ರಂಜಿತ ಆಡುಗಳಿವೆ.

ಆಡುಗಳ ಹಿಕ್ಕೆಗೂ ಇದೆ ಬೇಡಿಕೆ
ಈ ಆಡುಗಳ ಹಿಕ್ಕೆ (ತ್ಯಾಜ್ಯ)ಗಳನ್ನು ಕಲೆ ಹಾಕಿ ಗೋಣಿ ಚೀಲಗಳಲ್ಲಿ ತಲಾ 50 ಕೆ.ಜಿಯ ಗೋಣಿಗಳಾಗಿ ವಿಂಗಡಿಸಿ ಮಾರಾಟ ಮಾಡಲಾಗುತ್ತಿದೆ. ಗೋಣಿಯೊಂದಕ್ಕೆ 300 ರೂ. ಬೆಲೆ ಮಾರುಕಟ್ಟೆಯಲ್ಲಿದೆ ಎನ್ನುತ್ತಾರೆ ಈ ದಂಪತಿ.

ಆಡು ಸಾಕಣೆಯ ಜತೆ ಸುಮಾರು ಎರಡು ಎಕ್ರೆ ಜಮೀನಿನಲ್ಲಿ ಈ ದಂಪತಿ ಅಪ್ಪಟ ಸಾವಯವ ಗೊಬ್ಬರ ಬಳಸಿ ಭತ್ತದ ಕೃಷಿ ಹೊರತು ಪಡಿಸಿ ಹೆಚ್ಚಿನ ವ್ಯವಸಾಯ ನಡೆಸುತ್ತಿದ್ದಾರೆ. ಇವರ ಬಳಿ 5 ಮೇರು ದರ್ಜೆಯ ದನಗಳೂ ಇವೆ. ಮಲ್ಲಿಗೆ ಕೃಷಿ, ಜೇನು ಸಾಕಣೆ, ಅಡಿಕೆ, ತೆಂಗು, ಬಾಳೆ ಗಿಡ, ಪಪ್ಪಾಯಿ, ತೊಂಡೆ, ಬೆಂಡೆ ಸಹಿತ ವಿವಿಧ ತರಕಾರಿಗಳ ಜತೆ ಹಣ್ಣು ಹಂಪಲುಗಳ ಗಿಡಗಳನ್ನೂ ಇವರು ಬೆಳೆಸಿದ್ದಾರೆ.

ನೆಮ್ಮದಿ ಮುಖ್ಯ
ಬದುಕಲು ಹಣ ಮುಖ್ಯವಲ್ಲ, ನೆಮ್ಮದಿ ಮುಖ್ಯ. ಆಡು ಸಾಕಣೆಯ ಜತೆ ವಿಶೇಷ ತಳಿಗಳ ನಿರ್ಮಾಣ, ಕೃಷಿ ಚಟುವಟಿಕೆಗಳಲ್ಲಿ ಸಂತೃಪ್ತಿ ಕಾಣುತ್ತಿದ್ದೇವೆ. ನಮ್ಮ ಕೃಷಿ ಭೂಮಿಯ ಹಸಿರು ನಮ್ಮ ಉಸಿರಾಗಿದೆ. ವಿದೇಶದ ಲಕ್ಷಗಟ್ಟಲೆ ಹಣಕ್ಕಿಂತಲೂ ಹುಟ್ಟೂರಿನ ಈ ಕೃಷಿ ಬದುಕಿನ ಶ್ರಮಭರಿತ ಆದಾಯ ಅಮೂಲ್ಯವಾದುದು.
-ಡೊಮಿನಿಕ್‌ ಎಡ್ವರ್ಡ್‌ ನೊರೊನ್ಹಾ

Advertisement

ಶರತ್‌ ಶೆಟ್ಟಿ ಮುಂಡ್ಕೂರು

Advertisement

Udayavani is now on Telegram. Click here to join our channel and stay updated with the latest news.

Next