ಕೆ.ಆರ್.ನಗರ: ಆರ್ಥಿಕ ಸಬಲತೆಗೆ ಹೈನುಗಾರಿಕೆ ನಿರಂತರವಾಗಿ ಆದಾಯ ತಂದು ಕೊಡುವುದರಿಂದ ಗ್ರಾಮೀಣ ಭಾಗದ ಜನತೆ ಹೆಚ್ಚಾಗಿ ಹೈನುಗಾರಿಕೆಯಲ್ಲಿ ತೊಡಗಿಸಿ ಕೊಳ್ಳಬೇಕೆಂದು ಹೊಸೂರು ಹಾರಂಗಿ ಉಪವಿಭಾಗದ ಎಇಇ ಕೆ.ಬಿ.ಪ್ರಕಾಶ್ ಹೇಳಿದರು. ಕೆ.ಆರ್.ನಗರ ತಾಲೂಕಿನ ಕಂಚುಗಾರಕೊಪ್ಪಲು ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೊಸಕೋಟೆ ವಲಯದ ವತಿಯಿಂದ ಆಯೋಜಿದ್ದ ಕೃಷಿ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಇತ್ತಿಚಿನ ದಿನಗಳಲ್ಲಿ ಹೈನುಗಾರಿಕೆ ದೊಡ್ಡ ಉದ್ಯಮವಾಗಿ ಬೆಳೆಯುತ್ತಿದೆ. ರೈತರು ಗುಣಮಟ್ಟದ ಹಾಲು ಉತ್ಪಾದನೆ ಮಾಡುವ ಮೂಲಕ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಗಳಿಸಬಹುದು ಎಂದರು. ಕೆ.ಆರ್.ನಗರ ತಾಲೂಕಿನ ಕೃಷಿ ಸಹಾಯಕ ನಿರ್ದೇಶಕ ರಂಗರಾಜನ್ ಮಾತನಾಡಿ, ಕೃಷಿಯಲ್ಲಿ ಯಾಂತ್ರೀಕರಣ ಮಾಡಿಕೊಂಡಾಗ ಖರ್ಚು ಕಡಿಮೆ, ಕೂಲಿ ಆಳುಗಳ ಸಮಸ್ಯೆ ಕಡಿಮೆಯಾಗುತ್ತದೆ ಮತ್ತು ನಿಗದಿತ ಸಮಯಕ್ಕೆ ಕೃಷಿ ಕೆಲಸ ಮುಗಿಸಲು ಸಾಧ್ಯ.
ಇದರಿಂದ ಹೆಚ್ಚಿನ ಲಾಭವನ್ನು ಕಡಿಮೆ ಸಮಯದಲ್ಲಿ ಗಳಿಸಬಹುದು ಎಂದರು. ಯಾವುದೇ ಬೆಳೆ ಬೆಳೆಯುವಾಗ ಕೃಷಿ ಅಧಿಕಾರಿಗಳ ಮಾರ್ಗದರ್ಶನ ಪಡೆಯುವುದು ಅವಶ್ಯಕ. ಇದರಿಂದ ಬೆಳೆಗೆ ರೋಗ ಬಾಧೆ ತಡೆಗಟ್ಟಬಹುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿ ಬಿ.ಅಶೋಕ್ ಮತ್ತು ಕೆಎಂಎಫ್ ಉಪನ್ಯಾಸಕ ಎಚ್.ಎಂ.ಮಹದೇವಸ್ವಾಮಿ, ಕೃಷಿ ಮತ್ತು ಹೈನುಗಾರಿಕೆಯ ಚಟುವಟಿಕೆಗಳ ಕುರಿತು ಸಮಗ್ರ ವಿವರಣೆ ನೀಡಿ ಮಾತನಾಡಿದರು.
ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷ ಹರಿಚಿದಂಬರಂ, ಮೇಲ್ವಿಚಾರಕರಾದ ಉಮೇಶ್, ಕಿಶೋರ್‌ಕುಮಾರ್, ಗ್ರಾಪಂ ಸದಸ್ಯರಾದ ಕೆ.ಮಹೇಶ್, ಹಾಲು ಒಕ್ಕೂಟದ ಕೆ.ಎಸ್.ಜಯಣ್ಣ, ಗ್ರಾಮದ ಮುಖಂಡರಾದ ಕೆ.ಸಿ.ಕುಬೇರ, ಕೆ.ಪಿ.ಜೀವಂಧರ್, ಧನಪಾಲ್, ಶ್ರೀಶೈಲ, ಒಕ್ಕೂಟದ ಆಧ್ಯಕ್ಷೆ ಸಾವಿತ್ರಮ್ಮ ಮತ್ತು ಪದಾಧಿಕಾರಿಗಳು, ಸೇವಾಪ್ರತಿನಿಧಿಗಳು ಸೇರಿದಂತೆ ಇನ್ನಿತರರು ಹಾಜರಿದ್ದರು.