ಕಮಿಲೈ(ತಿರುವನಂತಪುರಂ): ವಿದ್ಯಾಭ್ಯಾಸ ಮೊಟಕುಗೊಳಿಸಿ, ಮದುವೆಯಾಗುವಂತೆ ಎಷ್ಟೇ ಒತ್ತಾಯಿಸಿದರು ಸೆಲ್ವಮಾರಿ ಕೊನೆಗೂ ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಲು ಒಪ್ಪಲೇ ಇಲ್ಲ. ಜೀವನದಲ್ಲಿ ಬಹಳಷ್ಟು ಕಷ್ಟ ಕಡ ಸೆಲ್ವಮಾರಿ ರಜೆಯ ದಿನಗಳಲ್ಲಿ ಏಲಕ್ಕೆ ತೋಟದಲ್ಲಿ ದುಡಿಯುತ್ತಿದ್ದಳು. ರಾತ್ರಿಯೆಲ್ಲಾ ಓದುತ್ತಿದ್ದಳು. ಈ ಕಠಿಣ ಪರಿಶ್ರಮದ ಪರಿಣಾಮ 28ವರ್ಷದ ಸೆಲ್ವಮಾರಿ ಈಗ ಇಡುಕ್ಕಿ ಜಿಲ್ಲೆಯ ವಾಂಚಿವಾಯಲ್ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ನೇಮಕಗೊಂಡಿದ್ದಾಳೆ.
ಛಲಬಿಡದ ಸಾಧನೆ:
ಸೆಲ್ವಮಾರಿ ಚಿಕ್ಕವಳಿರುವಾಗಲೇ ಆಕೆಯ ತಂದೆ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ತ್ಯಜಿಸಿ ನಾಪತ್ತೆಯಾಗಿದ್ದರು. ಇದರಿಂದ ಪುಟ್ಟ ಎರಡು ಕೋಣೆಯಲ್ಲಿ ವಾಸವಾಗಿದ್ದ ಈ ಕುಟುಂಬಕ್ಕೆ ಜೀವನ ನಿರ್ವಹಣೆಗಾಗಿ ಹೋರಾಟ ನಡೆಸುವುದು ಅನಿವಾರ್ಯವಾಗಿತ್ತು. ಈಕೆಯ ತಾಯಿ ಸೆಲ್ವಂ ಮಕ್ಕಳಿಗಾಗಿ ಏಲಕ್ಕಿ ತೋಟಗಳಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದರು. ತನ್ನ ತಾಯಿಯೊಬ್ಬರೇ ಕುಟುಂಬ ನಿರ್ವಹಣೆಗಾಗಿ ದುಡಿಯುತ್ತಿರುವುದನ್ನು ಕಂಡು, ನಂತರ ತಾನೂ ಕೂಡಾ ರಜಾ ದಿನಗಳಲ್ಲಿ ಏಲಕ್ಕಿ ತೋಟದಲ್ಲಿ ದುಡಿಯತೊಡಗಿದ್ದಳು. ತಾನು ವಿದ್ಯಾಭ್ಯಾಸ ಪೂರ್ಣಗೊಳಿಸಬೇಕೆಂಬ ಛಲ ಸೆಲ್ವಮಾರಿಯದ್ದಾಗಿತ್ತು.
ಮುರಿಕ್ಕಾಡಿ ಮತ್ತು ಚೊಟ್ಟುಪಾರಾದಲ್ಲಿ ಪ್ರಾಥಮಿಕ ಮತ್ತು ಪ್ರೌಶಶಾಲೆ ಶಿಕ್ಷಣ ಪಡೆದ ಬಳಿಕ ಸೆಲ್ವಮಾರಿ ತಮಿಳುನಾಡಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಪಡೆದಿದ್ದಳು. ಆ ನಂತರ ಪದವಿಗಾಗಿ ತಿರುವನಂತಪುರಂನ ಸರ್ಕಾರಿ ಮಹಿಳಾ ಕಾಲೇಜಿಗೆ ಸೇರ್ಪಡಿಗೊಂಡಿದ್ದಳು. ಗಣಿತ ಈಕೆಯ ಮುಖ್ಯ ವಿಷಯಗಳಲ್ಲಿ ಒಂದಾಗಿತ್ತು. ಆಕೆಯ ಕಾಲೇಜು ದಿನಗಳಲ್ಲಿ ಮಲಯಾಳಂ ಭಾಷೆಯಿಂದ ಕಷ್ಟ ಎದುರಿಸುವಂತಾಗಿತ್ತು. ಈ ಸಂದರ್ಭದಲ್ಲಿ ನಾನು ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸುವ ಯೋಚನೆ ಮಾಡಿದ್ದೆ. ಆದರೆ ನನ್ನ ತಾಯಿ ಒಬ್ಬಂಟಿಯಾಗಿ ದುಡಿಯುತ್ತಿರುವ ದೃಶ್ಯ ನನ್ನ ಕಣ್ಣ ಮುಂದೆ ಬಂದಾಗ..ಏನೇ ಕಷ್ಟವಾಗಲಿ ವಿದ್ಯಾಭ್ಯಾಸ ಮುಂದುವರಿಸುವ ಗಟ್ಟಿ ನಿರ್ಧಾರ ಮಾಡಿದ್ದೆ ಎಂಬುದು ಸೆಲ್ವಮಾರಿಯ ನುಡಿಯಾಗಿದೆ.
ಹೀಗೆ ಪದವಿ ಪಡೆದ ನಂತರ ಎಂಎಸ್ಸಿ ಪೂರ್ಣಗೊಳಿಸಿದ್ದಳು. ನಂತರ ಕುಮಿಲೈನ ಎಂಜಿ ಯೂನಿರ್ವಸಿಟಿಯಲ್ಲಿ ಬಿಎಡ್ ಪದವಿ ಪಡೆದಿದ್ದಳು. ಬಳಿಕ ಎಂಎಡ್..ಥೈಕಾಡ್ ನಲ್ಲಿ ಎಂ ಫಿಲ್ ನಲ್ಲಿ ಮೊದಲ ರಾಂಕ್ ಗಳಿಸಿದ ಕೀರ್ತಿ ಸೆಲ್ವಮಾರಿಯದ್ದಾಗಿದೆ. ಪ್ರಸ್ತುತ ಗಣಿತದಲ್ಲಿ ಪಿಎಚ್ ಡಿ ಮಾಡುತ್ತಿದ್ದಾಳೆ. ಯುಜಿಸಿ ನೆಟ್ ಪರೀಕ್ಷೆಯಲ್ಲಿಯೂ ತೇರ್ಗಡೆ ಹೊಂದಿರುವ ಸೆಲ್ವಮಾರಿ ಪ್ರೌಢಶಾಲಾ ಶಿಕ್ಷಕಿಯಾಗಿದ್ದಾರೆ. ಕೇರಳ ಪೊಲೀಸ್ ಅಧಿಕಾರಿ ಪರೀಕ್ಷೆಯಲ್ಲಿ ಪಾಸಾಗಿದ್ದರೂ ಆಕೆ ಆ ಬಗ್ಗೆ ಹೆಚ್ಚು ಒಲವು ತೋರಿಸಿರಿಲಿಲ್ಲ. ಶಿಕ್ಷಕಿಯಾದರೂ ಕೂಡಾ ತಾನು ನಾಗರಿಕ ಸೇವೆಯಲ್ಲಿ (ಸಿವಿಲ್ ಸರ್ವೀಸ್) ತೊಡಗಿಸಿಕೊಳ್ಳಬೇಕೆಂಬ ಕನಸು ಸೆಲ್ವಮಾರಿಯದ್ದಾಗಿದೆ.