Advertisement

ಬೆಳಗಿನ ದಿನಚರಿಯೇ ಹಲವು ರೋಗಗಳಿಗೆ ರಾಮಬಾಣ

02:15 AM Jan 22, 2021 | Team Udayavani |

ನಿತ್ಯ ಜೀವನದಲ್ಲಿ ಬರುವ ಅನೇಕ ರೋಗಗಳನ್ನು ತಡೆಯಲು ಹಾಗೂ ಗುಣಪಡಿಸಲು ನಮ್ಮ ಬೆಳಗಿನ ದಿನಚರಿಯೇ ಸಾಕಾಗುತ್ತದೆ. ಜನರನ್ನು ಸಾಮಾನ್ಯವಾಗಿ ಕಾಡುವ ರಕ್ತದ ಒತ್ತಡ, ಸಿಹಿ ಮೂತ್ರ ರೋಗ, ಅಭುìದ ರೋಗ, ಅನೇಕ ಪ್ರಕಾರದ ಜೀರ್ಣಾಂಗದ ಸಮಸ್ಯೆ, ಶೀತದಿಂದ ಬರುವ ಸಮಸ್ಯೆಗಳು, ಇತ್ತೀಚೆಗೆ ಜನರ ಜೀವನ ಹಾಗೂ ಜೀವಕ್ಕೂ ಮುಳುವಾಗಿರುವ ಕೋವಿಡ್‌ ವೈರಾಣುಗಳು -ಹೀಗೆ ಹತ್ತು ಹಲವು ಪಿಡುಗುಗಳಿಗೆ ಬೆಳಗಿನ ಒಂದೆರಡು ಗಂಟೆಗಳ ಕಾಲದ ಪ್ರಯತ್ನ ಸಂಪೂರ್ಣ ಫ‌ಲ ನೀಡುತ್ತದೆ ಮತ್ತು ಪೂರ್ಣ ಪ್ರಮಾಣದಲ್ಲಿ ರೋಗ ನಿಯಂತ್ರಣದಲ್ಲಿ ಸಹಕಾರಿಯಾಗಬಲ್ಲದು.

Advertisement

ಬೆಳಗ್ಗೆ ನಿದ್ದೆಯಿಂದ ಎದ್ದೇಳುವುದರಿಂದಲೇ ನಮ್ಮ ಶಕ್ತಿ ಸಂಪಾದನೆ ಆರಂಭವಾಗುತ್ತದೆ. ತಡವಾಗಿ ಎದ್ದು ಮನಸ್ಸನ್ನು ಒತ್ತಡಕ್ಕೆ ಒಳಪಡಿಸುವುದಕ್ಕಿಂತ ಬೇಗ ಎದ್ದು ದಿನನಿತ್ಯದ ಕಾರ್ಯ ಚಟುವಟಿಕೆಗಳನ್ನು ನಮ್ಮ ನಿಯಂತ್ರಣದಲ್ಲಿ ಇರಿಸಿಕೊಂಡು ಶಾಂತವಾಗಿ ಎಲ್ಲ ಕೆಲಸ ಕಾರ್ಯಗಳನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂಬುದು ಒಂದು ಪ್ರಯೋಜನ. ಸೂರ್ಯನ ಕಾಲ ಕಾಲದ ವಿವಿಧ ವಿಕಿರಣಗಳು ನಮ್ಮ ದೇಹ ವನ್ನು ಪ್ರವೇಶಿಸಿ, ಬೇಕಾದ ವಿಟಮಿನ್‌ ಇತ್ಯಾದಿ ಅಂಶಗಳನ್ನು ಸಂಪಾದಿಸಿಕೊಡುವುದು ಇನ್ನೊಂದು ಪ್ರಯೋಜನ. ಮೊದಲಿಗೆ ದೇಹದ ಒತ್ತಡಗಳಾದ ಮಲಮೂತ್ರಗಳನ್ನು ನಿವಾರಿಸಿಕೊಂಡು ದಿನಚರಿಯನ್ನು ಆರಂಭಿಸುವುದು.

ಹಲ್ಲು, ಬಾಯಿ, ನಾಲಗೆ ಸ್ವತ್ಛಗೊಳಿಸುವುದು: ಹಲ್ಲುಜ್ಜಲು ಅನೇಕ ವಿಧವಾದ ಪೇಸ್ಟ್‌ಗಳು ಮಾರು ಕಟ್ಟೆಯಲ್ಲಿ ಲಭ್ಯವಿವೆ. ಇದಲ್ಲದೆ ಋಷಿ ಮುನಿ ಗಳು ಉಪಯೋಗಿಸಿ ಸಿದ್ಧಾಂತ ರೂಪದಲ್ಲಿ ಪ್ರಸ್ತುತ ಪಡಿಸಿದ ಬಬ್ಬೂಲ(ಮುಳ್ಳಿನ ಮರ-ಬಯಲು ಸೀಮೆಯಲ್ಲಿ), ಕಾಚು (ಖದಿರ) ಬೇವು, ಪಲಾಷ, ಉದುಂಬರ, ಕರಂಜ(ಹೊಂಗೆ,) ಮಧೂಕ (ಇಪ್ಪೆ) ಮುಂತಾದವುಗಳ ಸದೃಢ ಟೊಂಗೆಗಳ ಕಿರಿ ಬೆರಳು ಗಾತ್ರದ ಕಡ್ಡಿಗಳ ತುದಿಯನ್ನು ಜಜ್ಜಿ ಬ್ರಶ್‌ನಂತೆ ಮಾಡಿಟ್ಟುಕೊಂಡು ದಿನನಿತ್ಯ ಉಪಯೋಗಿಸಲೂಬಹುದು. ಇದರಲ್ಲಿರುವ ಒಗರು, ಕಹಿ ಒಸಡು ಮತ್ತು ಹಲ್ಲನ್ನು ಸದೃಢಗೊಳಿಸುವುದು.

ನಾಲಗೆಯನ್ನು ಸ್ವತ್ಛಗೊಳಿಸಲು ಬೆಳ್ಳಿ, ಬಂಗಾರ, ತಾಮ್ರ, ಹಿತ್ತಾಳೆ ಇವುಗಳಲ್ಲಿ ಯಾವುದಾದರೊಂದರ ತೆಳು ಶಲಾಕೆಗಳನ್ನು ಬಗ್ಗಿಸಿ ದಿನಂಪ್ರತಿ ಉಪಯೋಗಿ ಸಿದರೆ ಆರೋಗ್ಯ ದೃಷ್ಟಿಯಿಂದ ತುಂಬ ಒಳ್ಳೆಯದು. ಹಿಂದೆ ಇವುಗಳನ್ನೇ ಉಪಯೋಗಿಸುತ್ತಿದ್ದರು.

ಬಾಯಿಯನ್ನು ಹಾಗೂ ಆ ಮೂಲಕ ಮುಖ್ಯ ವಾಗಿ ಕುತ್ತಿಗೆಯ ಮೇಲ್ಭಾಗದ ಕಫ‌ ಹಾಗೂ ಮಲ ರೂಪದಲ್ಲಿರುವ ಅನ್ಯ ದ್ರವವನ್ನು ಹೊರ ಹಾಕಲು ಬಾಯಿಯಲ್ಲಿ ಇಟ್ಟುಕೊಳ್ಳಬಹುದಾದ ಗಂಡೂಷ ಹಾಗೂ ಕವಲ ಎಂಬ ಎರಡು ಕ್ರಮಗಳಿವೆ. ಗಂಡೂಷದಲ್ಲಿ ಬಾಯಿಯನ್ನು ಅಲ್ಲಾಡಿಸಲು ಆಗದಷ್ಟು ದ್ರವವನ್ನು ತುಂಬಿಕೊಳ್ಳುವುದು, ಇನ್ನು ಕವಲದಲ್ಲಿ ಬಾಯಿಯಲ್ಲಿ ಇರುವ ಮುಖ್ಯವಾಗಿ ಸುಗಂಧ ದ್ರವ್ಯಗಳ ಕಷಾಯ ಅಥವಾ ಲವಂಗ, ಏಲಕ್ಕಿ, ಬಾಲಮೆಣಸು, ದಾಲಚೀನಿ ಮುಂತಾದ ಪದಾರ್ಥಗಳನ್ನು ಮುಕ್ಕಳಿಸುವಷ್ಟು ಅಥವಾ ಜಗಿಯುವಷ್ಟು ತುಂಬಿಕೊಳ್ಳುವುದು (ಕವಲಃ ಚರಃ). ಇವುಗಳಲ್ಲಿ ತಿಲ ತೈಲ, ಇವೇ ವನಸ್ಪತಿಗಳ ಕಷಾಯ, ಮಜ್ಜಿಗೆ, ತೆಂಗಿನೆಣ್ಣೆ-ಮುಂತಾದವನ್ನು ಉಪಯೋಗಿಸಬೇಕು. ಇದರಿಂದ ಬಾಯಿ ವಾಸನೆ, ಹಲ್ಲುಗಳ ಆರೋಗ್ಯ,ಬಾಯಿ ಒಡೆಯುತ್ತಿರುವುದು, ನರ, ಮಾಂಸ, ಪೇಷಿಗಳಲ್ಲಿ ಬರುವ ವಾತ ರೋಗ ಗಳು, ಬಾಯಿ ರುಚಿ ಇಲ್ಲದಿರುವುದು- ಹೀಗೆ ಅನೇಕ ರೋಗಗಳನ್ನು ಗುಣಪಡಿಸಬಹುದು ಅಥವಾ ತಡೆಯಬಹುದು. ಒಂದರ್ಧ ಗಂಟೆ ಅಥವಾ ದ್ರವ ಪದಾರ್ಥಗಳು ಮೂಗು, ಕಣ್ಣುಗಳಲ್ಲಿ ಸ್ರಾವವಾಗುವಷ್ಟು ಹೊತ್ತು ಇಟ್ಟುಕೊಳ್ಳಬೇಕು. ಸುಗಂಧಿತ ದ್ರವ್ಯಗಳಾದ ಏಲಾ, ಜಾಯಿಕಾಯಿ, ಲವಂಗ, ವೀಳ್ಯದೆಲೆ ಮುಂತಾದವನ್ನು ಬಾಯಲ್ಲಿ ಜಗಿಯುವುದು ಸಹ ಕವಲವೇ.

Advertisement

ನಸ್ಯ ಕ್ರಿಯೆ: ಇದೂ ಸಹ ಶರೀರದ ದೋಷಗಳನ್ನು ಹೊರ ಹಾಕುವ, ಶಿರಸ್ಸಿನ ನಾಡಿಗಳನ್ನು ಉತ್ತೇಜಿಸಿ, ರಕ್ತ ಸಂಚಾರವನ್ನು ಮುಕ್ತಗೊಳಿಸುವ, ಮೂಗಿನ ತೊಂದರೆಯನ್ನು ಸರಿಪಡಿಸುವ ಒಂದು ಮುಖ್ಯ ಪ್ರಕ್ರಿಯೆ. ಈ ಕ್ರಿಯೆಯಲ್ಲಿ ಕುತ್ತಿಗೆಯ ಮೇಲ್ಭಾಗದ ಅವಯವಗಳ ದೋಷಗಳನ್ನು ಹೊರಹಾಕಲಾಗುತ್ತದೆ. ಈ ಪ್ರಕ್ರಿಯೆಯನ್ನು ಆಹಾರದ ಅನಂತರವೂ ಮಾಡ ಬಹುದು. ಮೂಗಿನ ಎರಡೂ ಹೊಳ್ಳೆಗೆ ಒಂದರಿಂದ ಎರಡು ಹನಿಗಳಷ್ಟು ಅಣುತೈಲ ಮುಂತಾದ ತೈಲ ಬಿಂದುವನ್ನು ಬಿಡುವುದು. ದಿನನಿತ್ಯ ಅಥವಾ ಅವರವರ ಪ್ರಕೃತಿಗೆ ಅನುಗುಣವಾಗಿ 2-3 ದಿನಗಳಿಗೊಮ್ಮೆಯೂ ಬಿಡಬಹುದು.

ಕಣ್ಣಿಗೆ ಅಂಜನ: ನಿರ್ಮಲ ಆಕಾಶದಲ್ಲಿ ನಕ್ಷತ್ರಗಳನ್ನು ನೋಡಲು ಸಾಧ್ಯವಾಗುವಂತೆ ಕಣ್ಣಿನ ದೋಷಗಳು ಪರಿಹಾರವಾದರೆ ಕಣ್ಣು ಚೆನ್ನಾಗಿ ಕಾಣುತ್ತದೆ. ವನ ಮೂಲಿಕೆಗಳಲ್ಲದೆ ಕೆಲವು ಮೂಲ ಖನಿಜದ ಮೂಲ ಸ್ವರೂಪ ಧಾತು ಪದಾರ್ಥಗಳಿಂದಲೂ ಅಂಜನವನ್ನು ತಯಾರಿಸುತ್ತಾರೆ. ಕುರಿಯ ಹಾಲು, ಮರದರಿಸಿನ ಕಷಾಯದಿಂದ ತಯಾರಿಸಿದ ರಸಾಂಜನ ದಿನನಿತ್ಯ ಉಪಯೋಗಿಸಲೂ ಯೋಗ್ಯ. ಇದಲ್ಲದೆ ತ್ರಿಫ‌ಲ ಕಷಾಯ, ಔಷಧೀಯ ತುಪ್ಪ ಮುಂತಾದವುಗಳಿಂದ ಕಣ್ಣನ್ನು ತೊಳೆಯುವುದು, ಕಣ್ಣಿನ ಭಾಗದಲ್ಲಿ ನಿಲ್ಲಿಸುವುದು ಮುಂತಾದ ಆಶೊàತ್ತನ, ಪುಟಪಾಕ ಮೊದಲಾದ ಕ್ರಮಗಳಿಂದಲೂ ಕಣ್ಣಿನ ಆರೋಗ್ಯ ಕಾಪಾಡಲು ಸಾಧ್ಯ. ಕಾಡಿಗೆಯೂ ಅಂಜನದ ವಿಸ್ತೃತ ಸುಧಾರಿತ ರೂಪ. ನಂದಿ ಬಟ್ಟಲ ಹೂ ಮುಂತಾದವನ್ನು ಉಪಯೋಗಿಸಿ ತಯಾರಿಸಿದ ಕಾಡಿಗೆ.

ಅಭ್ಯಂಗ: ದೇಹದ ಅಂಗಾಂಗಗಳಿಗೆ ಶುದ್ಧ ಎಳ್ಳೆಣ್ಣೆ ಅಥವಾ ಯಾವುದೇ ಸೂಕ್ತ ಅಭ್ಯಂಗದ ಎಣ್ಣೆ ಯನ್ನು ಹಚ್ಚಿ ಮೈಯನ್ನು ಮೃದುವಾಗಿ ತಿಕ್ಕಿ ನೇವರಿಸುವುದು. ದಿನನಿತ್ಯ ಹೀಗೆ ಆಚರಿಸುವುದ ರಿಂದ ರಕ್ತ ಚಲನೆ ಸರಿಯಾಗುವುದು, ಮಾಂಸ ಪೇಶಿಗಳು, ನರಗಳು, ಸಂಧಿಗಳು ಬಲಗೊಳ್ಳುವುವು. ಚರ್ಮ ಮೃದು, ಹೊಳಪುಳ್ಳದ್ದಾಗುತ್ತದೆ.ಆದ್ದ ರಿಂದಲೇ ಜರಾ (ಮುಪ್ಪು), ಶ್ರಮ (ಆಯಾಸ), ವಾತ ರೋಗಗಳನ್ನು ನಾಶ ಮಾಡು ತ್ತದೆಂದು ಋಷಿ ಮುನಿಗಳ ಉಲ್ಲೇಖ. ಅನಂತರದ ಸ್ನಾನವೂ ದೇಹಾರೋಗ್ಯವನ್ನು ರಕ್ಷಿಸುವುದು.

ಹೊಗೆಯನ್ನು ತೆಗೆದುಕೊಳ್ಳುವುದು: ಚಂದನ, ಗುಗ್ಗುಳು, ನಾಗಕೇಶರ, ಸುಗಂಧವಾಳ, ಜಟಾಮಾಂಸಿ, ಜೇಷ್ಠಮಧು ಮುಂತಾದ ಮೂಲಿಕೆಗಳನ್ನು ಸುಡು ವಾಗ ಬರುವ ಧೂಮವನ್ನು ಮೂಗು, ಬಾಯಿಯ ಮೂಲಕ ಶ್ವಾಸದಲ್ಲಿ ತೆಗೆದುಕೊಳ್ಳುವುದು. ಇದಕ್ಕೆ ನಳಿಕೆಯ ಉಲ್ಲೆಖವಿದ್ದರೂ ಸರಳವಾಗಿಯೂ ತೆಗೆದುಕೊಳ್ಳಬಹುದು. ಇದರ ಸತತ ಅಭ್ಯಾಸದಿಂದ ಕಫ‌ ಮತ್ತು ವಾತ ರೋಗಗಳು ದೂರವಾಗುವುದು. ಮೂಗಿನ ಸಮಸ್ಯೆ, ತಲೆನೋವು ಮುಂತಾದ ಅನೇಕ ಕಫ‌ ಹಾಗೂ ವಾತ ರೋಗಗಳೂ ದೂರವಾಗುವುದು. ಹೊಗೆ ತೆಗದುಕೊಳ್ಳುವುದನ್ನು ಆಹಾರದ ಅನಂತರವು ಮಾಡಬಹುದು.

ಋಷಿಮುನಿಗಳು ಪರಿಚಯಿಸಿದ ಯೋಗಾಸನ ಗಳನ್ನು ಅದರಲ್ಲೂ ಮುಖ್ಯವಾಗಿ ಪ್ರಾಣಾಯಾಮ ಸಹಿತ ಇತರ ಕೆಲವು ಅಸನಗಳನ್ನು ದಿನನಿತ್ಯ ಅಳವ ಡಿಸಿಕೊಂಡರೆ ಶ್ವಾಸಕ್ಕೆ, ಜೀರ್ಣಕ್ಕೆ, ರಕ್ತಪರಿಚಲನೆ, ಮನಸ್ಸಿಗೆ ಸಂಬಂಧಿಸಿದಂತೆ ಇವು ಸಹಕಾರಿ.ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ಧೃಢ ದೇಹಾರೋಗ್ಯ ಮತ್ತು ಮನಸ್ಸು ಆರೋಗ್ಯಕರ ವಾಗಿದ್ದರೇ ಸಾಧನೆಯ ಒಂದು ಮೆಟ್ಟಿrಲು ಏರಿದಂತೆ.

– ಡಾ| ದೊಡ್ಡೇರಿ ಕೃಷ್ಣಮೂರ್ತಿ
ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next