Advertisement
ಈ ಹಿನ್ನೆಲೆಯಲ್ಲಿ ಉದಯವಾಣಿ ಸುದಿನ ಮೂರೂ ಕಡೆ ಭೇಟಿ ನೀಡಿ ಗಮನಿಸಿತು. ಸುರತ್ಕಲ್ ಹಾಗೂ ಬ್ರಹ್ಮರಕೂಟ್ಲು ಟೋಲ್‌ಗಳು ಸರಕಾರದ ಅಧೀನದಲ್ಲಿದ್ದು, ಖಾಸಗಿ ಸಂಸ್ಥೆಗಳಿಗೆ ಶುಲ್ಕ ಸಂಗ್ರಹಕ್ಕೆ ಅವಕಾಶ ನೀಡಲಾಗಿದೆ. ಇವುಗಳ ರದ್ದತಿ ಭರವಸೆ ಇನ್ನೂ ಈಡೇರಿಲ್ಲ. ತಲಪಾಡಿ ಟೋಲ್ ಅನ್ನು ನವಯುಗ ಸಂಸ್ಥೆಯೇ ನಿರ್ವಹಿಸುತ್ತಿದೆ.
ಬಿ.ಸಿ. ರೋಡ್‌ನಿಂದ ಸುರತ್ಕಲ್ ವರೆಗಿನ ಹೆದ್ದಾರಿಯನ್ನು ಇರ್ಕಾನ್ ಸಂಸ್ಥೆ ನಿರ್ಮಿಸಿದ್ದರಿಂದ ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಎನ್‌ಐಟಿಕೆ ಬಳಿಯ ಟೋಲ್‌ನಲ್ಲಿ ಹಣ ಕಟ್ಟಬೇಕು. ಆದರೆ, ಸುರತ್ಕಲ್ ಟೋಲ್‌ನ ಶುಲ್ಕ ಸಂಗ್ರಹದ ಗುತ್ತಿಗೆಯನ್ನು ನವೀಕರಿಸದೇ ಹೆಜಮಾಡಿ ಟೋಲ್ ಗೆ ವಿಲೀನಗೊಳಿಸುವ ಮಾತಿತ್ತು. ಆದರೆ, ಸದ್ದಿಲ್ಲದೆ ಸುರತ್ಕಲ್ ಟೋಲ್‌ನ ಗುತ್ತಿಗೆಯನ್ನು ಮುಂಬಯಿ ಮೂಲದ ಕಂಪೆನಿಗೆ ನೀಡಲಾಗಿದೆ. ವಿಶೇಷವೆಂದರೆ, ಮುಚ್ಚಬೇಕಾದ ಈ ಟೋಲ್‌ನ ನವೀಕರಣ ಕಾಮಗಾರಿ ಆರಂಭವಾಗಿದೆ. ಟೋಲ್‌ನಲ್ಲಿ ವಾಹನಗಳು ಪಾವತಿಸುವ ಪ್ರದೇಶದಲ್ಲಿ ಇಂಟರ್‌ಲಾಕ್ ಕಾರ್ಯ ನಡೆಯುತ್ತಿದೆ. ಬುಲ್ಡೋಜರ್, 5-6 ಕಾರ್ಮಿಕರು ಕಾಮಗಾರಿಗಳಲ್ಲಿ ತೊಡಗಿದ್ದಾರೆ.
Related Articles
Advertisement
ಸರ್ವಿಸ್ ರಸ್ತೆಯ ಪ್ರಯಾಣಕ್ಕೂ ಟೋಲ್!ಬ್ರಹ್ಮರಕೂಟ್ಲು ಟೋಲ್‌ನವರು ಸರ್ವಿಸ್ ರಸ್ತೆಯಲ್ಲಿ ಹೋಗುವ ಸ್ಥಳೀಯ ವಾಹನಗಳಿಂದಲೂ ಒಂದೆರಡು ದಿನಗಳಿಂದ ಶುಲ್ಕ ವಿಧಿಸಿ ಸುದ್ದಿಯಲ್ಲಿದ್ದಾರೆ. ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಕಳೆದ ಡಿಸೆಂಬರ್‌ನಲ್ಲೂ ಟೋಲ್ ನವರು ಶುಲ್ಕ ಸಂಗ್ರಹಿಸಿದ್ದರು. ಈ ಬಗ್ಗೆ ಟೋಲ್ ಸಿಬಂದಿಯನ್ನು ಪ್ರಶ್ನಿಸಿದರೆ, ದೊಡ್ಡ ಗಾತ್ರದ ವಾಹನಗಳು ಶುಲ್ಕದಿಂದ ತಪ್ಪಿಸಿಕೊಳ್ಳಲು ಟೋಲ್ ಸಮೀಪಕ್ಕಾಗುವಾಗ ಸರ್ವಿಸ್ ರಸ್ತೆಯಲ್ಲಿ ಸಂಚರಿಸುತ್ತವೆ. ಇದರಿಂದ ನಷ್ಟವುಂಟಾಗುತ್ತಿದ್ದು, ಬ್ಯಾರಿಕೇಡ್ ಅಳವಡಿಸಲಾಗಿದೆ ಎನ್ನುತ್ತಾರೆ. ಈ ಬಗ್ಗೆ ಪರಿಶೀಲಿಸುವ ಭರವಸೆ ಜಿಲ್ಲಾಧಿಕಾರಿಗಳಿಂದ ದೊರೆತಿದೆ. ಕೆಎ 19 ಸುರತ್ಕಲ್ ಫ್ರೀ; ತಲಪಾಡಿಯಲ್ಲಿಲ್ಲ!
ಎಂಟು ವರ್ಷಗಳಿಂದ ಕುಂಟುತ್ತಾ ಸಾಗಿರುವ ಪಂಪ್‌ವೆಲ್ ಹಾಗೂ ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿ ಮುಗಿಯುವವರೆಗೆ ತಲಪಾಡಿ ಟೋಲ್‌ನಲ್ಲಿ ಮಂಗಳೂರಿನ ಕೆಎ19 ನಂಬರ್ ಪ್ಲೇಟಿನ ಖಾಸಗಿ ವಾಹನಗಳಿಗೆ ಟೋಲ್ ಪಡೆಯದಂತೆ ಸಂಸದ ನಳಿನ್ ಕುಮಾರ್ ಕಟೀಲು ಮೌಖೀಕವಾಗಿ ಸಂಬಂಧಪಟ್ಟವರಿಗೆ ಸೂಚಿಸಿದ್ದರು. ಆದರೆ ಅದಾವುದೂ ಪಾಲನೆಯಾಗುತ್ತಿಲ್ಲ. ಸಂಸದರು ಸೂಚನೆ ಬೆಂಬಲಿಸಲು ಹೆದ್ದಾರಿ ಸಚಿವಾಲಯದಿಂದ ಯಾವುದೇ ಸೂಚನೆ ಬಂದಿಲ್ಲ. ಆದರೂ 5 ಕಿ.ಮೀ. ವ್ಯಾಪ್ತಿಯ ವಾಣಿಜ್ಯೇತರ ಬಿಳಿಬಣ್ಣದ ಕೆಲವು ಚಾಲಕರು ಶುಲ್ಕ ಪಾವತಿಸದೆ ತೆರಳುತ್ತಿದ್ದಾರೆ. ಇನ್ನು ಅಗತ್ಯ ಇದ್ದವರು ಮಾಸಿಕ ಪಾಸ್ ಪಡೆದು ಸಂಚರಿಸುತ್ತಾರೆ. ಹಾಗೆಂದು ಎಲ್ಲರಿಗೂ ವಿನಾಯಿತಿ ನೀಡಲು ಸಾಧ್ಯವಿಲ್ಲ ಎನ್ನುತ್ತದೆ ನವಯುಗ ಸಂಸ್ಥೆಯ ಮೂಲಗಳು. ಆದರೆ, ಮಂಗಳೂರು ಸರಹದ್ದಿನಲ್ಲೇ ಇರುವ ಸುರತ್ಕಲ್‌ನ ಎನ್‌ಐಟಿಕೆ ಟೋಲ್‌ನಲ್ಲಿ ಕೆಎ19 ನಂಬರ್‌ನ ವಾಹನಗಳಿಗೆ ಶುಲ್ಕ ವಿಧಿಸುವುದಿಲ್ಲ. ಇದೇ ನಿಯಮ ತಲಪಾಡಿ ಟೋಲ್‌ನಲ್ಲಿ ಯಾಕೆ ಅನ್ವಯವಾ ಗುವುದಿಲ್ಲ ಎಂಬುದು ಸ್ಥಳೀಯರ ಪ್ರಶ್ನೆ. ತೊಕ್ಕೊಟ್ಟು, ಪಂಪ್ ವೆಲ್‌ನಲ್ಲಿ ಅರ್ಧಂಬರ್ಧ ಕಾಮಗಾರಿ ಆಗಿರುವುದರಿಂದ ರಿಯಾಯಿತಿ ನೀಡಲೇಬೇಕು ಎಂಬುದು ಅವರ ಆಗ್ರಹ. ಜಿಲ್ಲೆಗೆ ಇನ್ನೊಂದು ಟೋಲ್!
ಬೆಂಗಳೂರು-ಮಂಗಳೂರು ನಡುವಿನ ಗುಂಡ್ಯ ಅಡ್ಡಹೊಳೆಯಿಂದ ಬಿ.ಸಿ.ರೋಡ್‌ಗೆ ಸಂಪರ್ಕಿಸುವ ರಾ.ಹೆ. 75ನ್ನು (ಹಳೆಯ 48) ವಿಸ್ತರಣೆಗೊಳಿಸಿ ಚತುಷ್ಪಥ ಕಾಂಕ್ರೀಟ್ ರಸ್ತೆ ನಿರ್ಮಿಸಿದ ಬಳಿಕ ಹೊಸ ಟೋಲ್ ಪುತ್ತೂರು ತಾಲೂಕಿನ ಬಜತ್ತೂರು ಅಥವಾ ನೀರಕಟ್ಟೆ ವ್ಯಾಪ್ತಿಯಲ್ಲಿ ಆರಂಭವಾಗಬಹುದು. ಮೆಲ್ಕಾರ್‌ನಲ್ಲಿ ನಿರ್ಮಿಸಲು ಮೊದಲು ಯೋಚಿಸಲಾಗಿತ್ತು. ನೆಲಮಂಗಲದಿಂದ ಹಾಸನದವರೆಗೆ ಇರುವ ಚತುಷ್ಪಥ ರಸ್ತೆಯನ್ನು ಮಂಗಳೂರುವರೆಗೂ ವಿಸ್ತರಿಸುವ ಗುರಿ ಇದ್ದು, ಹಾಸನದಿಂದ ಶಿರಾಡಿಯ ಮಾರ್ನಹಳ್ಳಿಯವರೆಗೆ ಒಟ್ಟು 45 ಕಿ.ಮೀ., ಅಡ್ಡಹೊಳೆಯಿಂದ ಬಿ.ಸಿ.ರೋಡ್‌ವರೆಗಿನ 63 ಕಿ.ಮೀ. ರಸ್ತೆಯು ಕೇಂದ್ರ ಹೆದ್ದಾರಿ ಪ್ರಾಧಿಕಾರದಿಂದ ಚತುಷ್ಪಥಗೊಳ್ಳಲಿದೆ. ಇದಕ್ಕಾಗಿ ಹೊಸ ಟೋಲ್ ದ.ಕ. ಜಿಲ್ಲೆಗೆ ಬರಲಿದೆ. ಇದು ಬಂದರೆ, ಬ್ರಹ್ಮರಕೂಟ್ಲು ಟೋಲ್ ರದ್ದುಗೊಳ್ಳಲಿದೆ ಎನ್ನುತ್ತವೆ ಹೆದ್ದಾರಿ ಇಲಾಖೆ ಮೂಲಗಳು. ಕಿರಿದಾದ ರಸ್ತೆ; ಸಾಲುಗಟ್ಟಿ ನಿಲ್ಲುವ ವಾಹನಗಳು!
ಬ್ರಹ್ಮರಕೂಟ್ಲು, ಸುರತ್ಕಲ್ ಟೋಲ್‌ನಲ್ಲಿ ಮೂಲ ಸೌಕರ್ಯ ಕೊರತೆ ಬೆಟ್ಟದಷ್ಟಿದೆ. ಟೋಲ್ ವ್ಯಾಪ್ತಿಯಲ್ಲಿ ರಸ್ತೆ ಸುಸಜ್ಜಿತವಾಗಿರಬೇಕೆಂಬ ಸಾಮಾನ್ಯ ನಿಯಮವನ್ನೂ ಪಾಲಿಸಿಲ್ಲ. ದೇಶದ ವಿವಿಧೆಡೆಯ ಟೋಲ್‌ಗಳ ಶೈಲಿ, ವಿಧಾನಗಳನ್ನು ಇವುಗಳಿಗೆ ಹೋಲಿಸುವಂತೆಯೇ ಇಲ್ಲ. ಬ್ರಹ್ಮರಕೂಟ್ಲು , ಸುರತ್ಕಲ್ ಟೋಲ್ ಇನ್ನಷ್ಟು ಸುಸಜ್ಜಿತಗೊಳ್ಳಬೇಕೆಂಬುದನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿನ ಟೋಲ್ ಕೇಂದ್ರಗಳ ಚಿತ್ರಗಳೇ ಸಾರುತ್ತವೆ. ಈ ಮಧ್ಯೆ ಟೋಲ್‌ನ ಕೆಲವು ಸಿಬಂದಿ ಪ್ರಯಾಣಿಕರ ಜತೆಗೆ ಒರಟಾಗಿ ಮಾತನಾಡುತ್ತಾರೆ ಎಂಬ ಆರೋಪ, ಕೆಲವು ಬಾರಿ ಗಲಾಟೆಯೂ ನಡೆದಿತ್ತು. ತಲಪಾಡಿ ಟೋಲ್‌ನಲ್ಲಿ ಒಂದಿಷ್ಟು ಸೌಕರ್ಯಗಳಿವೆ ಎಂಬುದೇ ಸಮಾಧಾನ. ಶೀಘ್ರದಲ್ಲಿ ಪರಿಶೀಲನೆ
ಸುರತ್ಕಲ್ ಟೋಲ್ ಹೆಜಮಾಡಿ ಟೋಲ್ ನೊಂದಿಗೆ ವಿಲೀನವಾಗುವ ಸಂಬಂಧ ಈಗಾಗಲೇ ಪ್ರಕ್ರಿಯೆ ನಡೆದಿದೆ. ಈ ಬಗ್ಗೆ ಹೆದ್ದಾರಿ ಇಲಾಖೆ ಶೀಘ್ರವೇ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಬ್ರಹ್ಮರಕೂಟ್ಲು ಟೋಲ್‌ನಲ್ಲಿ ಸರ್ವಿಸ್ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಟೋಲ್ ಸಂಗ್ರಹಿಸುವ ಬಗ್ಗೆ ದೂರುಗಳು ಬಂದಿವೆ. ಈ ರೀತಿ ಸಂಗ್ರಹಿಸುವಂತಿಲ್ಲ. ಈ ಬಗ್ಗೆ ಪರಿಶೀಲಿಸಿ ವರದಿ ನೀಡಲು ಹೆದ್ದಾರಿ ಇಲಾಖೆಗೆ ಸೂಚಿಸಲಾಗಿದೆ. ಈ ಟೋಲ್‌ಗಳಲ್ಲಿನ ಕೆಲವು ಸಿಬಂದಿ ಸೂಕ್ತ ನಿಯಮ ಪಾಲಿಸುತ್ತಿಲ್ಲ ಎಂಬ ಆಪಾದನೆಯೂ ಇದೆ. ಈ ಬಗ್ಗೆ ಶೀಘ್ರವೇ ಸಭೆ ನಡೆಸಿ ಚರ್ಚಿಸಲಾಗುವುದು.
– ಶಶಿಕಾಂತ್ ಸೆಂಥಿಲ್,
ದ.ಕ. ಜಿಲ್ಲಾಧಿಕಾರಿ ದಿನೇಶ್ ಇರಾ