ಯಾವಾಗಲೂ ಸೀಟು ಬದಲಾಗುವುದಿಲ್ಲ; ವ್ಯಕ್ತಿಗಳು ಬದಲಾಗು ತ್ತಾರೆ. ಇಲ್ಲೂ ಹಾಗೆಯೇ ಕುಟುಂಬ ಬದಲಾಗು ವುದಿಲ್ಲ. ವ್ಯಕ್ತಿಗಳು ಬದಲಾಗುತ್ತಾರೆ.
ಹಿಂದಿನ ಬಾರಿ ಚಿತ್ರಣ ನೆನಪಾಯಿತು ವೆಂಕಟ್ರಮಣಪ್ಪನವರಿಗೆ. ಊರಿನ ಎಂಎಲ್ಲೆ ತಮ್ಮ ಸಿಂಪ್ಲಿಸಿಟೀನಾ ಮನದಟ್ಟು ಮಾಡಿ ಮತ್ತೆ ಗೆಲ್ಲೋದಿಕ್ಕೆ ಎತ್ತುಗಳ ಕೊಂಬಿಗೆ ಸಿಂಗಾರ ಮಾಡಿಕೊಂಡು, ತಾವು ಒಂದು ಸುಗಂಧಿರಾಜ ಹೂವಿನ ಸರ ಹಾಕ್ಕೊಂಡು ಎತ್ತಿನ ಗಾಡೀಲಿ ಕೈಮುಗಿದು ಕೊಂಡು ಬಂದಿದ್ದರು.
ಊರಿನವರೆಲ್ಲ ಸೇರಿದರು. “ನೋಡ್ರಪ್ಪ, ನೀವು 6 ಚುನಾವಣೆಯಿಂದಲೂ ಗೆಲ್ಲಿಸಿದ್ದೀರಿ. ನಿಮ್ಮ ಋಣಾನಾ ತೀರಿಸೋಕೆ ಆಗೋಲ್ಲ. ಕಾಲ ಬದಲಾಗಿರಬಹುದು, ಎಲ್ಲರ ಮನೆ ಮುಂದೆ ಕಾರು, ಜೀಪು ಬಂದಿರಬಹುದು. ಆದರೆ ನಾನು ಅಂದು ಎತ್ತಿನ ಗಾಡಿಯಲ್ಲೇ ಬಂದಿದ್ದೆ. ಈಗಲೂ ಹಾಗೆಯೇ. ನಿಜ, ಸಣ್ಣ ಬದಲಾವಣೆ ಆಗಿದೆ. ಅವತ್ತು ಈ ಶರಟು ಇಷ್ಟು ಗರಿಮುರಿಯಾಗಿರಲಿಲ್ಲ. ಸೆಂಟು ಹಾಕ್ಕೊಂಡಿರಲಿಲ್ಲ, ನಾಲ್ಕು ಬೆರಳಲ್ಲಿ ಚಿನ್ನದ ಉಂಗುರಗಳಿರಲಿಲ್ಲ, ಈ ಸರನೂ ಇರಲಿಲ್ಲ (ಕತ್ತಿನ ಸರವನ್ನ ತೋರಿಸುತ್ತಾ). ಆ ಮನೆ, ಜಮೀನು..” ಎಂದು ಹೇಳುತ್ತಾ “ಇವೆಲ್ಲ ನಿಮ್ಮದೇ ಋಣ” ಎಂದು ಮತ್ತೆ ಕೈ ಮುಗಿದರು.
“ಪರವಾಗಿಲ್ಲ, ಸಾಹೇಬ್ರು ಮೈ ಮೇಲೆ ಇದ್ದ ಆಭರಣ ನಮ್ಮ ಋಣ ಅಂದ್ರಲ್ಲ. ಅಷ್ಟೇ ಸಾಕು” ಎನ್ನುತ್ತಾ ಜನ ಚಪ್ಪಾಳೆ ತಟ್ಟಿದರು. ಒಂದಿಷ್ಟು ಮಂದಿ ಜೈ ಕಾರ ಹಾಕಿದರು.
ಎತ್ತಿನ ಗಾಡಿ ಮೇಲಿದ್ದ ಸಾಹೇಬ್ರು ಒಂದ್ ನಿಮಿಷ ಎನ್ನುವಂತೆ ಸನ್ನೆ ಮಾಡಿದರು. ಮುಂದಿನ ಸಾಲಿನಲ್ಲಿದ್ದ ಹಿಂಬಾಲಕರು ಹಿಂದಕ್ಕೆ ತಿರುಗಿ ಸುಮ್ಮನಿರುವಂತೆ ಕೈ ಸನ್ನೆ ರವಾನಿಸಿದರು.
“ನೋಡಿ ಮಹಾಜನಗಳೇ, ಇದು ನನ್ನ ಕೊನೆಯ ಚುನಾವಣೆ’ ಎಂದರು. ಜನರಿಂದ ಮತ್ತೆ ಚಪ್ಪಾಳೆ. ಸಾಹೇಬ್ರು ಮಾತು ಮುಂದುವರಿಸಿ, “ಮುಂದಿನ ಬಾರಿ ನನ್ನ ಮಗ ಇದೇ ಎತ್ತಿನಗಾಡಿಯಲ್ಲಿ ಬರ್ತಾನೆ. ಆರ್ಶೀರ್ವಾದ ಮಾಡಿ” ಎಂದು ಮುಗುಳ್ನಕ್ಕರು. ಜನರಿಗೆ ಈಗ ನಿಜವಾಗಲೂ ಗೊಂದಲ. ಜೈಕಾರವೋ, ವಿರೋಧವೋ? ಹಿಂಬಾಲಕರು ಬಿಡಬೇಕಲ್ಲ “ಜೈ’ ಎಂದರು. “ಮೊಹರು’ ಒತ್ತೇ ಬಿಟ್ಟರು !
ಬದಿಯಲ್ಲಿದ್ದ ವೆಂಕಟರಮಣಪ್ಪ, “25 ವರ್ಷದ ಹಿಂದೆ ಇವ್ರಪ್ಪನೂ ಹೀಗೇ ಮಾಡಿದ್ದು” ಎನ್ನುತ್ತಾ ಹೊರಟರು.