Advertisement

ಡೈಲಿ ಡೋಸ್‌: ಬಾಣ ಬಿಟ್ಟವನ ಬುಡವ ಸುಡದಿದ್ದರೆ ಕ್ಷೇಮ

08:27 PM Mar 09, 2023 | Team Udayavani |

ಚುನಾವಣೆ ಹತ್ತಿರ ಬಂದಾಗ ಎಲ್ಲ ಪಕ್ಷಗಳಲ್ಲಿನ ಕೆಲವು ಮುಖಂಡರು ವಿವಾದಿತ ಹೇಳಿಕೆಗಳನ್ನು ನೀಡುವುದು ಅಥವಾ ನೀಡಿದ ಹೇಳಿಕೆಗಳನ್ನು ವಿವಾದಾತ್ಮಕಗೊಳಿಸುವುದು ಸಾಮಾನ್ಯ. ಆ ಮೂಲಕ ಮತ ಧ್ರುವೀಕರಣಗೊಳಿಸುವುದು ಚುನಾವಣ ತಂತ್ರದ ಒಂದು ಭಾಗ. ಆದರೆ ಇನ್ನೂ ಹಲವು ಬಾರಿ ಕೆಲವು ಮುಖಂಡರು (ಇದಕ್ಕೆ ಹಿರಿಯರು -ಕಿರಿಯರೆಂಬ ಬೇಧವಿಲ್ಲ) ತಮ್ಮ ಮಾತಿನ ಪ್ರತಾಪ ತೋರಿಸುವ ತಂತ್ರ ಪ್ರಯೋಗಿಸಲು ಹೋಗಿ ಅತಂತ್ರ ವಾದ ಉದಾಹರಣೆಗಳೂ ಸಾಕಷ್ಟಿವೆ.

Advertisement

ಇನ್ನೂ ಹಲವು ಬಾರಿ ಬಿಟ್ಟ ಹೇಳಿಕೆ ದೊಡ್ಡ ಸದ್ದು ಮಾಡಿ ದೊಡ್ಡ “ಗಳಿಕೆ” (ಆರ್‌ಒಐ-ರಿಟರ್ನ್ ಆಫ್ ಇನ್ವೆಸ್ಟ್‌ಮೆಂಟ್‌) ತಂದುಕೊಡುವುದುಂಟು. ಮತ್ತೆ ಕೆಲವು ಬಾರಿ ಬಿಟ್ಟ ಬಾಣವು ಊರೆಲ್ಲಾ ತಿರುಗಿ ಎಲ್ಲೂ ನೆಲೆ ಕಾಣದೇ ಬಿಟ್ಟವನ ಬಳಿಗೇ ವಾಪಸು ಬಂದು ಅವನ ಕೋಟೆಯನ್ನೇ ಸುಟ್ಟದ್ದೂ ಉಂಟು.
ಅದಕ್ಕೇ ಏನೋ? ಎಲ್ಲ ಪಕ್ಷಗಳಲ್ಲೂ ಟ್ರಬಲ್‌ ಮೇಕರ್‌ ಗಳನ್ನೂ ಇಟ್ಟುಕೊಂಡಿರುತ್ತಾರೆ, ಅವರ ಬಗಲಿಗೇ ಟ್ರಬಲ್‌ ಶೂಟರ್‌ಗಳನ್ನೂ ನಿಲ್ಲಿಸಿರುತ್ತಾರೆ. ವಿಶೇಷವಾಗಿ ಚುನಾವಣೆ ಸಮಯದಲ್ಲಿ ಟ್ರಬಲ್‌ ಮೇಕರ್‌ಗಳು ಬಿಟ್ಟ ಬಾಣದ ಬೆಂಕಿ ಹೆಚ್ಚಾಗುತ್ತಿದೆ, ತಮ್ಮ ಬುಡವನ್ನೇ ಸುಟ್ಟೀತೆಂದು ಎಣಿಸಿದಕೂಡಲೇ ಟ್ರಬಲ್‌ ಶೂಟರ್‌ಗಳು ಅಗ್ನಿಶಾಮಕ ಸಾಧನಗಳನ್ನು ಹೊತ್ತು ಧಾವಿಸಿ ಬೆಂಕಿಯನ್ನು ಆರಿಸುವುದೂ ಉಂಟು. ಹೆಚ್ಚು ಸಂದರ್ಭಗಳಲ್ಲಿ ಕಾವು ಆರಿದ ಮೇಲೂ ತಾಪ ಆರದು.

ಕೊನೆಯ ಡೋಸ್‌ ಎಂದರೆ, ಬಾಣ ಬಿಡುವ ಮೊದಲು ಗುರಿಯೂ ಸ್ಪಷ್ಟವಾಗಿರಿಸಿಕೊಳ್ಳಬೇಕು, ಜತೆಗೆ ತಮ್ಮ ಹಿತ್ತಲನ್ನೂ ಸುರಕ್ಷೆಯಾಗಿಟ್ಟುಕೊಳ್ಳುವುದೇ ಕ್ಷೇಮ.

~ಡಾಕ್ಟ್ರು ಗಂಪತಿ

Advertisement

Udayavani is now on Telegram. Click here to join our channel and stay updated with the latest news.

Next