Advertisement

ಶಾಸಕ ತನ್ವೀರ್‌ ಸೇಠ್‍ಗೆ ಡ್ಯಾಗರ್‌ನಿಂದ ಇರಿತ

11:23 PM Nov 18, 2019 | Lakshmi GovindaRaj |

ಮೈಸೂರು: ಭಾನುವಾರ ರಾತ್ರಿ ಮೈಸೂರಿನ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ತಮ್ಮ ಆಪ್ತರಾದ ಯೂನೂಸ್‌ ಖಾನ್‌ ಪುತ್ರನ ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ, ಶಾಸಕ ತನ್ವೀರ್‌ ಸೇಠ್‍ಗೆ ಡ್ಯಾಗರ್‌ನಿಂದ ಇರಿಯಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ.

Advertisement

ನಗರದ ಕೋಲಂಬಿಯ ಏಷಿಯಾ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಶಾಸಕರಿಗೆ ಕಿಡ್ನಿ ಸಮಸ್ಯೆ ಇರುವುದರಿಂದ ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಕ್ಯಾನ್‌ ರಿಪೋರ್ಟ್‌ ಬಂದಿದ್ದು, ಎಲ್ಲವೂ ನಾರ್ಮಲ್‌ ಇದೆ. ತನ್ವೀರ್‌ ಸೇಠ್‍ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರಲಾಗಿದೆ. ಆದರೂ, ಅವರ ಸ್ಥಿತಿ ಗಂಭೀರವಾಗಿದ್ದು, ಇನ್ನೂ 48 ಗಂಟೆಗಳ ಕಾಲ ಐಸಿಯುನಲ್ಲಿ ಇರಿಸುವ ಮೂಲಕ ಚಿಕಿತ್ಸೆ ಮುಂದುವರಿಸಲಾಗುತ್ತಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸೇಠ್‍, ವೇದಿಕೆಯ ಮುಂದಿನ ಸಾಲಿನಲ್ಲಿ ಕವಾಲಿ ಹಾಡನ್ನು ಕೇಳುತ್ತಾ ಆಸೀನರಾಗಿದ್ದರು. ರಾತ್ರಿ ಸುಮಾರು 11.45ರ ವೇಳೆ ಗೌಸಿಯಾ ನಗರದ ಯುವಕ ಫ‌ರಾನ್‌ ಎಂಬಾತ ಶಾಸಕರನ್ನು ಮಾತನಾಡಿಸುವಂತೆ ಬಂದು, ಏಕಾಏಕಿ ಡ್ಯಾಗರ್‌ನಿಂದ ಕುತ್ತಿಗೆಯ ಎಡಭಾಗಕ್ಕೆ ಇರಿದ.

ಬಳಿಕ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ದುಷ್ಕರ್ಮಿಯನ್ನು ಅಲ್ಲೇ ಇದ್ದವರು ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ಫ‌ರಾನ್‌ ಪಾಷಾ (27) ಪೊಲೀಸ್‌ ವಶದಲ್ಲಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಕೆಲಸ ಕೊಡಿಸಲು ಸಹಾಯ ಮಾಡಲಿಲ್ಲ ಎಂಬ ಕಾರಣಕ್ಕೆ ಅವರನ್ನು ಹತ್ಯೆ ಮಾಡಲು ಯತ್ನಿಸಿರುವುದಾಗಿ ವಿಚಾರಣೆ ವೇಳೆ ಆತ ತಿಳಿಸಿದ್ದಾನೆಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಬಿಗಿ ಪೊಲೀಸ್‌ ಭದ್ರತೆ: ಆಸ್ಪತ್ರೆಗೆ ಬಿಗಿ ಪೊಲೀಸ್‌ ಭದ್ರತೆ ಒದಗಿಸಲಾಗಿದೆ. ಅಭಿಮಾನಿಗಳು ಮತ್ತು ಬೆಂಬಲಿಗರಿಗೆ ಒಳಗಡೆ ಪ್ರವೇಶ ನಿರಾಕರಿಸಲಾಗುತ್ತಿದೆ. ಈ ಮಧ್ಯೆ, ಮಾಜಿ ಸಚಿವರಾದ ಎಚ್‌.ಸಿ.ಮಹದೇವಪ್ಪ, ಜಿ.ಟಿ.ದೇವೇಗೌಡ, ಚಲುವರಾಯಸ್ವಾಮಿ ಹಾಗೂ ಇತರರು ಭೇಟಿ ನೀಡಿ ಸೇಠ್‍ ಅವರ ಆರೋಗ್ಯ ಸ್ಥಿತಿ ವಿಚಾರಿಸಿದರು.

Advertisement

ಆಸ್ಪತ್ರೆಗೆ ಭೇಟಿ ನೀಡಿದ ನಗರ ಪೊಲೀಸ್‌ ಆಯುಕ್ತ ಕೆ.ಟಿ.ಬಾಲಕೃಷ್ಣ ಮಾಧ್ಯಮದವರೊಂದಿಗೆ ಮಾತನಾಡಿ, ಘಟನೆ ಸಂಬಂಧ 5 ಮಂದಿ ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದಿದ್ದೇವೆ. ಹತ್ಯೆ ಯತ್ನದ ಹಿಂದೆ ಯಾವುದಾದರೂ ಸಂಘಟನೆಯ ಕೈವಾಡ ಇರಬಹುದೇ ಎಂಬುದನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಹತ್ಯೆ ಯತ್ನ: ಬಿಎಸ್‌ವೈ ದಿಗ್ಭ್ರಮೆ
ಬೆಂಗಳೂರು: ತನ್ವೀರ್‌ ಸೇಠ್‍ ಹತ್ಯೆ ಯತ್ನ ನಡೆದಿರುವುದಕ್ಕೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಸಿಎಂ ಬಿ.ಎಸ್‌.ಯಡಿಯೂರಪ್ಪ, ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದು, ಚಿಕಿತ್ಸಾ ವೆಚ್ಚವನ್ನು ಸರ್ಕಾರದಿಂದಲೇ ಭರಿಸುವುದಾಗಿ ಹೇಳಿದ್ದಾರೆ. ಘಟನೆ ಬಗ್ಗೆ ತಿಳಿದು ನೋವಾಯಿತು. ಮೈಸೂರು ಡೀಸಿ, ಪೊಲೀಸ್‌ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ತನ್ವೀರ್‌ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ. ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.

ತನ್ವೀರ್‌ ಸೇಠ್‍ ಮೇಲಿನ ಕೊಲೆ ಯತ್ನ ಪ್ರಕರಣದ ಆರೋಪಿ ಎಸ್‌ಡಿಪಿಐ ಸಂಘಟನೆ ಸದಸ್ಯನಾಗಿದ್ದು, ಕೃತ್ಯದ ಹಿಂದೆ ಆ ಸಂಘಟನೆಯ ಕೈವಾಡವಿದೆ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿ¨ªಾರೆ. ಇದು ಒಬ್ಬನೇ ನಡೆಸಿರುವ ಕೃತ್ಯವಂತೂ ಅಲ್ಲ. ಅತ್ಯಂತ ವ್ಯವಸ್ಥಿತವಾಗಿ ಪ್ಲಾನ್‌ ಮಾಡಿ ನಡೆಸಿರುವ ಕೃತ್ಯವಾಗಿದೆ.
-ಸಿದ್ದರಾಮಯ್ಯ, ವಿಧಾನಸಭೆ ಪ್ರತಿಪಕ್ಷ ನಾಯಕ

ಕೃತ್ಯದಲ್ಲಿ ಭಾಗಿಯಾಗಿರುವವರು ಎಂತಹ ದೊಡ್ಡ ವ್ಯಕ್ತಿಗಳಾದರೂ ಶಿಕ್ಷೆಗೆ ಗುರಿಪಡಿಸಲಾಗುವುದು. ಹೆಚ್ಚಿನ ಚಿಕಿತ್ಸೆ ಅಗತ್ಯವಾದರೆ ಏರ್‌ಲಿಫ್ಟ್ ಮೂಲಕ ಬೆಂಗಳೂರು ಅಥವಾ ದೆಹಲಿಗೆ ಸ್ಥಳಾಂತರಿಸಲಾಗುವುದು.
-ವಿ.ಸೋಮಣ್ಣ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next