ಪಣಜಿ: “ನನಗೆ ಚಿತ್ರರಂಗದ ಅತ್ಯುತ್ಕೃಷ್ಟ ಪುರಸ್ಕಾರ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿರುವುದು ನನ್ನ ಭಾಗ್ಯ. ಇದು ನಿಜಕ್ಕೂ ದೇವರು ನೀಡಿದ ಅಚ್ಚರಿಯ ಕೊಡುಗೆ’ ಎಂದು ಹಿಂದಿ ಚಿತ್ರರಂಗದ ಹಿರಿಯ ನಟಿ ಆಶಾ ಪರೇಖ್ ಭಾವುಕರಾಗಿ ಹೇಳಿದ್ದಾರೆ.
ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಇಫಿ) ದಲ್ಲಿ ರವಿವಾರ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
‘ಬಹಳ ವರ್ಷಗಳ ಬಳಿಕ ಮಹಿಳೆಗೆ ಈ ಗೌರವ ಸಂದಿರುವುದು ಮತ್ತೂ ಹರ್ಷದ ಸಂಗತಿ. ಅಲ್ಲದೇ ಈ ಪ್ರಶಸ್ತಿಗೆ ಭಾಜನರಾಗುತ್ತಿರುವ ಮೊದಲ ಗುಜರಾತಿನವಳು ಎಂಬುದು ಹೆಮ್ಮೆ ತಂದಿದೆ’ ಎಂದ ಅವರು, ನಾನು ಇದನ್ನು ಎಣಿಸಿಯೂ ಇರಲಿಲ್ಲ. ಆದ್ದರಿಂದ ಇದು ದೇವರ ನೀಡಿದ ಅಚ್ಚರಿಯ ಗಳಿಗೆಯೆಂದೇ ನಂಬಿದ್ದೇನೆ’ ಎಂದರು.
ಆಶಾ ಪರೇಖ್ ಅವರು ಬೆಳ್ಳಿ ತೆರೆಯ ಮೇಲಿನ ತಮ್ಮ ಅನುಭವಗಳನ್ನು ಅನುಭವವನ್ನು ಹಂಚಿಕೊಂಡರಲ್ಲದೇ, ಕಿರುತೆರೆಯಲ್ಲೂ ಅವಕಾಶಗಳನ್ನು ಸೃಷ್ಟಿಸಿಕೊಂಡ ಬಗೆಯನ್ನು ವಿವರಿಸಿದರು.
‘ನಾನು ನಿರ್ದೇಶಿಸಿ ನಿರ್ಮಿಸಿದ ಗುಜರಾತಿ ಭಾಷೆಯಲ್ಲಿನ ಧಾರಾವಾಹಿಯಲ್ಲಿ ಸಿಕ್ಕ ಯಶಸ್ಸು ನನ್ನಲ್ಲಿ ಮತ್ತಷ್ಟು ಆತ್ಮವಿಶ್ವಾಸ ತುಂಬಿತು. ಇದರಿಂದ ಮತ್ತಷ್ಟು ಮಂದಿ ಧಾರಾವಾಹಿಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಯಿತು ಎಂದು ಹೇಳಿದರು.
ಈ ಬಾರಿಯ ಚಿತ್ರೋತ್ಸವದಲ್ಲಿ ಆಶಾ ಪರೇಖ್ ರನ್ನು ಅಭಿನಂದಿಸುವ ಸಲುವಾಗಿ ಕಟಿ ಪತಂಗ್ ಸೇರಿದಂತೆ ಕೆಲವು ಚಿತ್ರಗಳನ್ನು ಪ್ರದರ್ಶಿಸಲಾಗಿತ್ತು. ಕಟಿಪತಂಗ್ ಚಿತ್ರ ಪ್ರದರ್ಶನದ ಬಳಿಕ ಮಾತನಾಡಿದ ಆಶಾ ಪರೇಖ್, ನನಗೆ ನನ್ನ ಚಿತ್ರರಂಗ ಬಹಳ ಇಷ್ಟ. ಚಿತ್ರ ಪ್ರೇಮಿಗಳಿಗೆ ಇಫಿ ಒಂದು ಒಳ್ಳೆಯ ವೇದಿಕೆ. ಇಲ್ಲಿ ಎಲ್ಲ ದೇಶಗಳ ಸಿನಿಮಾಗಳೂ ವೀಕ್ಷಣೆಗೆ ಲಭ್ಯವಾಗುತ್ತಿವೆ’ ಎಂದು ಇಫಿಯನ್ನು ಅಭಿನಂದಿಸಿದರು.
Related Articles
ಆಶಾ ಪರೇಖ್ ಹಿಂದಿ ಚಿತ್ರರಂಗದ ಹಿರಿಯ ನಟಿಯಾಗಿದ್ದು, ನಿರ್ದೇಶನ ಮತ್ತು ಚಿತ್ರ ನಿರ್ಮಾಣದಲ್ಲೂ ತೊಡಗಿದ್ದರು. ಶಾಸ್ತ್ರೀಯ ನೃತ್ಯಗಾರ್ತಿಯೂ ಆಗಿದ್ದರು. ದಿಲ್ ದೇಖೇ ದೇಖೋ ಸಿನಿಮಾದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿ 95 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಕಟಿ ಪತಂಗ್, ತೀಸ್ರಿ ಮಂಜಿಲ್, ಮೇ ತುಳಸಿ ತೇರೆ ಆಂಗನ್ ಕೀ, ಬಹಾರೋಂ ಕೇ ಸಪ್ನೆ, ಲವ್ ಇನ್ ಟೋಕಿಯೊ, ಆಯಾ ಸಾವನ್ ಝೂಮ್ ಕೆ, ಮೆರಾ ಗಾಂವ್ ಮೆರಾ ದೇಶ್ ಮತ್ತಿತರ ಚಿತ್ರಗಳಲ್ಲಿ ಅಭಿನಯಿಸಿದ್ದರು. ಕೇಂದ್ರ ಸರಕಾರ 2020 ನೇ ಸಾಲಿನ ಫಾಲ್ಕೆ ಪುರಸ್ಕಾರವನ್ನು ನಟಿ ಆಶಾ ಪರೇಖ್ ಅವರಿಗೆ ನೀಡಿ ಗೌರವಿಸಿದೆ.