Advertisement

ಆಟೋ ಓಡಿಸುವ ಅಪ್ಪ, ಬೀಡಿ ಕಟ್ಟುವ ಅಮ್ಮ, ಮಗ ವೈದ್ಯ!

11:06 AM May 03, 2018 | |

ಕಡಬ: ಜೀವನ ನಿರ್ವಹಣೆಗೆಂದು ಚಾಲಕ ವೃತ್ತಿಯನ್ನು ಆರಿಸಿಕೊಂಡು ಗುಜರಾತ್‌, ಆಸ್ಸಾಂ ವರೆಗೂ ದೇಶ ಸುತ್ತಿ ಲೋಕ ಜ್ಞಾನ ಹೊಂದಿದ ಅಪ್ಪ. ಬಡತನವನ್ನು ಹೋಗಲಾಡಿಸಲು ಶಿಕ್ಷಣವೇ ಅಸ್ತ್ರವೆಂದು ನಂಬಿದ್ದ ಅಮ್ಮ. ಇವರ ಕನಸನ್ನು ನನಸಾಗಿಸಲು ಹಗಲಿರುಳು ಕಷ್ಟಪಟ್ಟು ಓದಿ ಮಗ ಕೊನೆಗೂ ಸ್ಟೆತಾಸ್ಕೋಪ್‌ ಹಿಡಿದಿದ್ದಾನೆ!

Advertisement

ಕಡಬ ತಾ| ನ ಎಡಮಂಗಲ ಗ್ರಾಮದ ದೋಣಿಮನೆ ನಿವಾಸಿ ದುಷ್ಯಂತ್‌ ಹಾಗೂ ಬೀಡಿ ಕಟ್ಟುವ ಪ್ರೇಮಾ ದಂಪತಿಯ ಹಿರಿಯ ಪುತ್ರ ಡಾ| ಅವಿನ್‌ ಡಿ.ಪಿ. ಎಂಬ ಹಳ್ಳಿ ಹುಡುಗನ ಸಾಹಸಗಾಥೆ ಇದು.

ಎಸೆಸೆಲ್ಸಿ ತನಕ ಕಡಬದ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದಿದ ಅವಿನ್‌ ಎಸೆಸೆಲ್ಸಿಯಲ್ಲಿ ಶೇ. 95 ಅಂಕ ಗಳಿಸಿದ. ಮೂಡಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಯಲ್ಲಿ ದತ್ತು ಸ್ವೀಕಾರ ಯೋಜನೆಯಡಿ ಉಚಿತ ಸೀಟು ಗಳಿಸಿದ. ಇದೇ ಆತನ ಬದುಕಿನ ದಿಕ್ಕನ್ನು ಬದಲಿಸಿತು. ನಿತ್ಯ ಬೆಳಗ್ಗೆ 4:45ಕ್ಕೆ ಎದ್ದು ದಿನಚರಿ ಆರಂಭಿಸಿದ. ಸತತ 12ರಿಂದ 14 ಗಂಟೆಗಳ ಕಾಲ ಓದಿನಲ್ಲಿ ತೊಡಗಿಸಿಕೊಳ್ಳುತ್ತಿದ್ದ. ಈ ಹುಡುಗ ವೈದ್ಯನಾಗುವ ಕನಸು ಕಂಡವನಲ್ಲ. ಅದು ತನಗೆ ನಿಲುಕದ ವಿಚಾರ ಎಂದುಕೊಂಡಿದ್ದ. ಆದರೆ, ಆಳ್ವಾಸ್‌ ಸಂಸ್ಥೆಯ ಉಚಿತ ಶಿಕ್ಷಣ, ಹೆತ್ತವರ ಛಲ ಹಾಗೂ ಕಷ್ಟಪಟ್ಟರೆ ವೈದ್ಯನಾಗುವುದು ಸಾಧ್ಯ ಎಂಬ ಮನೋಭಾವ ಆತನನ್ನು ವೈದ್ಯನನ್ನಾಗಿಸಿತು.

ಸತತ ಪರಿಶ್ರಮದಿಂದ ಸಿಇಟಿಯಲ್ಲಿ 685ನೇ ರ್‍ಯಾಂಕ್‌ ಗಳಿಸಿದ ಅವರು, ಸರಕಾರದ ಪ್ರತಿಷ್ಠಿತ ಮೈಸೂರು ಮೆಡಿಕಲ್‌ ಕಾಲೇಜಿನ ಸೀಟು ಪಡೆದರು. ಎಂಬಿಬಿಎಸ್‌ ಪದವಿ ಪೂರೈಸಿ, ಒಂದು ವರ್ಷ ಗೃಹವೈದ್ಯರಾಗಿಯೂ ಸೇವೆ ಸಲ್ಲಿಸಿದರು. 2018ರ ಮಾರ್ಚ್‌ 22ರಂದು ನಿಮ್ಹಾನ್ಸ್‌ ಆಸ್ಪತ್ರೆಯ ನಿರ್ದೇಶಕ ಡಾ| ಬಿ.ಎನ್‌. ಗಂಗಾಧರ್‌ ಅವರಿಂದ ವೈದ್ಯ ಪದವಿಯನ್ನು ಸ್ವೀಕರಿಸಿದಾಗ ತಂದೆ – ತಾಯಿಯ ಕನಸನ್ನು ನನಸಾಗಿಸಿದ ಸಂತೃಪ್ತಿಯಿಂದ ಆನಂದಭಾಷ್ಪ ಹೊರಹೊಮ್ಮಿತು. ಈಗ ಎಂ.ಡಿ. ಪ್ರವೇಶ ಪರೀಕ್ಷೆಗೆ ಅವಿನ್‌ ಸಜ್ಜಾಗಿದ್ದಾರೆ. ಅವರ ತಮ್ಮನೂ ಸರಕಾರಿ ಕೋಟಾದಲ್ಲಿ ದಂತ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದು, ಮೂರು ವರ್ಷಗಳಲ್ಲಿ ಅವರೂ ವೈದ್ಯರಾಗಲಿದ್ದಾರೆ.

ತ್ಯಾಗಮಯಿ ತಾಯಿ
ಹೊಟ್ಟೆ ತುಂಬ ಊಟ ಮಾಡುವುದಕ್ಕೂ ಲೆಕ್ಕಾಚಾರ ಹಾಕುವ ಸ್ಥಿತಿಯಲ್ಲೂ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದಿಸಿ, ಉನ್ನತ ಶಿಕ್ಷಣ ಕೊಡಿಸಬೇಕೆಂಬ ಮಹದಾಸೆ ಹೆತ್ತವರದಾಗಿತ್ತು. ಇದನ್ನು ಈಡೇರಿಸಲು ತಾಯಿ ಕೊರಳಲ್ಲಿದ್ದ ಚಿನ್ನದ ಓಲೆಯನ್ನೂ ಅಡವಿಟ್ಟರು. ರಾತ್ರಿ 12ರ ತನಕ ಸೀಮೆಎಣ್ಣೆ ದೀಪದಲ್ಲಿ ಓದಿದ ಅವಿನ್‌ಗೆ ಬೀಡಿ ಕಟ್ಟುತ್ತ ಅಮ್ಮ ಜತೆಯಾಗುತ್ತಿದ್ದರು. ರಿಕ್ಷಾ ಓಡಿಸುತ್ತಿದ್ದ ತಂದೆ ದುಷ್ಯಂತ, ಆ ಆದಾಯ ಸಾಲದು ಎಂದರಿತಾಗ ಬೇಸಗೆಯಲ್ಲಿ ಅಡಗೆ ಕೊಯ್ಯುವ, ಅಡಕೆ ತೋಟಗಳಿಗೆ ಮದ್ದು ಬಿಡು ವ ಕಾಯಕ ಮಾಡಿದರು. ಮರಳು ಸಾಗಾಟದ ಗುತ್ತಿಗೆದಾರರ ಜತೆಗೂ ಕೆಲಸ ಮಾಡಿದರು.

Advertisement

ಹೆತ್ತವರ ಕನಸು
ಮನೆಯಲ್ಲಿ ಬಡತನವಿದ್ದರೂ ಹೆತ್ತವರು ನಮಗಾಗಿ ಹಲವು ತ್ಯಾಗಗಳನ್ನು ಮಾಡಿ ನೀಡಿದ ನಿರಂತರ ಪ್ರೋತ್ಸಾಹದಿಂದಾಗಿ ಉನ್ನತ ವ್ಯಾಸಂಗ ಮಾಡುವುದಕ್ಕೆ ಸಾಧ್ಯವಾಗಿದೆ. ತಂದೆ ತಾಯಿಯ ಕನಸನ್ನು ನನಸು ಮಾಡಿದ ಬಗ್ಗೆ ಅಭಿಮಾನವಿದೆ.
– ಡಾ| ಅವಿನ್‌

 ನಾಗರಾಜ್‌ ಎನ್‌.ಕೆ 

Advertisement

Udayavani is now on Telegram. Click here to join our channel and stay updated with the latest news.

Next