Advertisement

ಅಪ್ಪಾ, ನನ್ನನ್ನು ಕ್ಷಮಿಸಿಬಿಡು..!

11:10 PM Nov 16, 2019 | mahesh |

ಅಪ್ಪ ತೀರಿಕೊಂಡ ಸುದ್ದಿ ಕೇಳಿ ನಾನು ಊರಿಗೆ ದೌಡಾಯಿಸಿದೆ. ನನಗಿನ್ನೂ ನೆನಪಿದೆ, ಅಪ್ಪನ ಪಾರ್ಥಿವ ಶರೀರವನ್ನು ನೋಡಿ ಕುಸಿದು ಹೋಗುವಂತಾಯಿತು. ನೇರವಾಗಿ ಹೋಗಿ ಅಪ್ಪನ ಪಾದದ ಮೇಲೆ ಹಣೆ ಹಚ್ಚಿದೆ. ನನ್ನಲ್ಲಿ ಅದೆಲ್ಲಿ ಅಡಗಿತ್ತೋ ಆ ನೋವು. ನೋವೆಲ್ಲ ಕಣ್ಣೀರಿನ ರೂಪದಲ್ಲಿ ಅಪ್ಪನ ಪಾದ ತೋಯಿಸಲಾರಂಭಿಸಿತು.

Advertisement

ಅದು 2009ನೇ ಇಸವಿ. ಆಗಷ್ಟೇ ಬೆಳಕು ಹರಿದಿತ್ತು. ನನ್ನ ಫೋನ್‌ ರಿಂಗಣಿಸಲಾರಂಭಿಸಿತು. ಇಷ್ಟು ಬೆಳಗ್ಗೆ ಯಾರಿರಬಹುದು ಎಂದು ನೋಡಿದರೆ ಅಮ್ಮನ ಕರೆ. ಫೋನ್‌ ರಿಸೀವ್‌ ಮಾಡಿದೆ. “”ಅಪ್ಪ ಇನ್ನಿಲ್ಲ” ಎಂಬ ಶಾಕಿಂಗ್‌ ಸುದ್ದಿ ನೀಡಿದಳು ಅಮ್ಮ! ಅಪ್ಪ, ಹೀಗೆ ಹಠಾತ್ತಾಗಿ ನಮ್ಮನ್ನೆಲ್ಲ ಬಿಟ್ಟು ಹೋಗಿಬಿಡುತ್ತಾರೆ ಎಂದು ನಾನು ಕನುಮನಸಲ್ಲೂ ಯೋಚಿಸಿರಲಿಲ್ಲ.

ನನಗಿನ್ನೂ ನೆನಪಿದೆ, ನಾನು ವಿಶ್ವವಿದ್ಯಾಲಯದಲ್ಲಿ ಇದ್ದಾಗ ಸುಮಾರು ಎರಡು ವರ್ಷಗಳವರೆಗೆ ಒಮ್ಮೆಯೂ ಅಪ್ಪನೊಂದಿಗೆ ಮಾತನಾಡಿರಲಿಲ್ಲ! ನಮ್ಮಿಬ್ಬರ ನಡುವೆ ಕೆಲವು ಭಿನ್ನಾಭಿಪ್ರಾಯಗಳು ಇದ್ದದ್ದೇ ನನ್ನ ಮುನಿಸಿಗೆ ಕಾರಣವಾಗಿತ್ತು. ಕಾಲೇಜು ಮುಗಿಸಿದ ಮೇಲೆ ನಾನು ಹರೇ ಕೃಷ್ಣ ಪಂಥಕ್ಕೆ ಬಂದು, ಆಶ್ರಮ ಸೇರುವುದಕ್ಕಿಂತ ಕೆಲ ತಿಂಗಳ ಹಿಂದೆ ಅಪ್ಪ ನನ್ನ ಬಳಿ ಬಂದವರೇ ಜೋರಾಗಿ ಅಳಲಾರಂಭಿಸಿದರು. ಏನಾಗುತ್ತಿದೆ ಎಂದು ನನಗೆ ಅರ್ಥವಾಗುವ ಮುನ್ನವೇ ಅವರು ನನ್ನ ಕಾಲಿಗೆರಗಿ ಗೋಗರೆಯಲಾರಂಭಿಸಿದರು- “”ಅಪ್ಪಿ, ದಯವಿಟ್ಟೂ ನನ್ನ ಜತೆ ಮಾತಾಡು!” ಆದರೆ ನನ್ನ ತಂದೆ ಅಂಗಲಾಚುತ್ತಿದ್ದರೂ ನಾನು ಮಾತನಾಡಲಿಲ್ಲ. ಮುಖತಿರುಗಿಸಿಕೊಂಡೇ ನಿಂತಿದ್ದೆ! ಆಗ ಅಮ್ಮ ಅಂದಳು-“”ಅವರು ನಿನ್ನ ಅಪ್ಪ ಕಣೋ…ಪಾಪ ತುಂಬಾ ನೋವನುಭವಿಸ್ತಾ ಇದಾರೆ, ಹಾಗೆಲ್ಲ ಮಾಡಬೇಡ. ಮಾತಾಡು”. ಅಮ್ಮ ಹೇಳಿದಳು ಅನ್ನುವ ಒಂದೇ ಕಾರಣಕ್ಕಾಗಿ ನಾನು ಅಪ್ಪನೊಂದಿಗೆ ಮಾತನಾಡಲಾರಂಭಿಸಿದೆ. ಈ ಘಟನೆ ನಡೆದ ಕೆಲವೇ ವಾರಗಳಲ್ಲಿ ನಾನು ಸನ್ಯಾಸಿಯಾದೆ.

ಇದು ನಡೆದದ್ದು 1996ರಲ್ಲಿ. ಅಂದಿನಿಂದ ವರ್ಷಕ್ಕೊಮ್ಮೆ ಮನೆಗೆ ಹೋಗಿ ಅಮ್ಮ-ಅಪ್ಪನೊಂದಿಗೆ ಸಮಯ ಕಳೆದುಬರುತ್ತಿದ್ದೆ. ಪ್ರತಿ ಬಾರಿ ಮನೆಗೆ ಹೋದಾಗಲೂ ಅಪ್ಪನ ಬಳಿ ಕ್ಷಮಾಪಣೆ ಕೇಳಬೇಕು ಎಂದೆನಿಸುತ್ತಿತ್ತು. ಆದರೆ ಕೇಳಲು ಆಗುತ್ತಿರಲಿಲ್ಲ. ಏಕೆಂದರೆ “ಅಹಂ’ ಎನ್ನುವ ಎರಡಕ್ಷರ ನನ್ನನ್ನು ತಡೆದು ನಿಲ್ಲಿಸುತ್ತಿತ್ತು. “ಕ್ಷಮೆ ಯಾಕೆ ಕೇಳಬೇಕು?’ಎಂದು ನನಗೆ ನಾನೇ ಹೇಳಿಕೊಂಡು ಸುಮ್ಮನಾಗುತ್ತಿದ್ದೆ. 2009ರಲ್ಲಿ ಅಪ್ಪ ನಿಧನರಾದರು ಎಂಬ ಕರೆಬಂದಿತಲ್ಲ, ಅದಕ್ಕಿಂತ ಕೆಲ ದಿನಗಳ ಹಿಂದೆಯೂ ಅವರನ್ನು ಭೇಟಿಯಾಗಿದ್ದೆ. ಆಗಲೂ ಕ್ಷಮೆ ಕೇಳಲು ಮನಸ್ಸಾಗಿತ್ತು, ಆದರೆ, ಅಂದೂ ಕೂಡ ನನ್ನ ಅಹಂ ಮೇಲುಗೈ ಸಾಧಿಸಿತ್ತು! ಅಪ್ಪ ತೀರಿಕೊಂಡ ಸುದ್ದಿ ಕೇಳಿ ನಾನು ಊರಿಗೆ ದೌಡಾಯಿಸಿದೆ. ನನಗಿನ್ನೂ ನೆನಪಿದೆ, ಅಪ್ಪನ ಪಾರ್ಥಿವ ಶರೀರವನ್ನು ನೋಡಿ ಕುಸಿದು ಹೋಗುವಂತಾಯಿತು. ನೇರವಾಗಿ ಹೋಗಿ ಅಪ್ಪನ ಪಾದದ ಮೇಲೆ ಹಣೆ ಹಚ್ಚಿದೆ. ನನ್ನಲ್ಲಿ ಅದೆಲ್ಲಿ ಅಡಗಿತ್ತೋ ಆ ನೋವು. ನೋವೆಲ್ಲ ಕಣ್ಣೀರಿನ ರೂಪದಲ್ಲಿ ಅಪ್ಪನ ಪಾದ ತೋಯಿಸಲಾರಂಭಿಸಿತು. ಆ ಕಣ್ಣಿರ ಹನಿಗಳು ಅಪ್ಪನಿಗೆ ಕೇಳುತ್ತಿದ್ದವು- “ಅಪ್ಪಾ, ನನ್ನ ಕ್ಷಮಿಸಿಬಿಡಪ್ಪ! ನಾನು ಹಾಗೆ ಮಾಡಬಾರದಿತ್ತು. ನಿನ್ನೊಂದಿಗೆ ಮಾತು ಬಿಟ್ಟು ನೋವು ಕೊಟ್ಟೆ…’

ಸ್ನೇಹಿತರೇ, ನಮ್ಮ ಪ್ರೀತಿಪಾತ್ರರು ನಮ್ಮೊಂದಿಗೆ ಎಷ್ಟು ದಿನ ಇರುತ್ತಾರೋ ನಮಗೆ ತಿಳಿಯದು. ಜೀವನ ಅತ್ಯಂತ ಚಿಕ್ಕದು. ಪ್ರೀತಿಪಾತ್ರರಿಗೆ ನೋವು ಕೊಡಬೇಡಿ. ಅಹಂಗೆ ಅಡಿಯಾಳಾಗಿ ಸಂಬಂಧಗಳನ್ನು ಹಾಳು ಮಾಡಿಕೊಳ್ಳಬೇಡಿ. ಅರ್ಥಪೂರ್ಣ ಸಂಬಂಧಗಳಿಗೆ ಅತಿದೊಡ್ಡ ಅಡ್ಡಿಯೆಂದರೆ ಅಹಂ. ನಾನು ಹೇಳುವುದು ಕೇಳಿ- ನೀವು ಇನ್ನೊಬ್ಬರ ಬಳಿ ಕ್ಷಮೆಯಾಚಿಸುತ್ತೀರಿ ಎಂದರೆ ತಪ್ಪೆಲ್ಲ ನಿಮ್ಮದೇ ಎಂದೇನೂ ಅರ್ಥವಲ್ಲ. ನೀವು ಸಂಬಂಧಕ್ಕೆ ಹೆಚ್ಚು ಮೌಲ್ಯ ಕೊಡು ತ್ತೀರಿ ಎಂದಷ್ಟೇ ಅದರರ್ಥ.

Advertisement

ನಾನೊಮ್ಮೆ ಒಬ್ಬ ವ್ಯಕ್ತಿಯನ್ನು ಕೇಳಿದೆ. “”ಕಾಗದದಲ್ಲಿ ಬೆಂಕಿ ಇರುತ್ತಾ?” ಆ ವ್ಯಕ್ತಿ ಕೂಡಲೇ ಅಂದ, “”ಇದೂ ಒಂದು ಪ್ರಶ್ನೆಯೇ ಗುರುಗಳೇ? ಖಂಡಿತ ಇಲ್ಲ, ಕಾಗದದಲ್ಲಿ ಬೆಂಕಿ ಇರಲ್ಲ.”
ನಾನಂದೆ, “”ಕಾಗದದಲ್ಲಿ ಬೆಂಕಿ ಇಲ್ಲ ಅಂದರೆ, ಬೆಂಕಿ ಕಡ್ಡಿಯ ಚಿಕ್ಕ ಸ್ಪರ್ಷದಿಂದ ಕಾಗದದೊಳಗಿಂದ ಇಷ್ಟು ದೊಡ್ಡ ಪ್ರಮಾಣದ ಬೆಂಕಿ ಹೇಗೆ ಹೊರಗೆ ಬರುತ್ತೆ?”. ಸತ್ಯವೇನೆಂದರೆ, ಪ್ರತಿ ವಸ್ತುವಿನಲ್ಲೂ ಅಗ್ನಿ ಅಡಗಿರುತ್ತದೆ. ಅಗ್ನಿ ಎಂದರೆ ಅಗ್ನಿಯಲ್ಲ, ಅದನ್ನು “ಶಕ್ತಿ’-“ಸಾಮರ್ಥ್ಯ’ ಎಂದು ನಾವು ಅರ್ಥಮಾಡಿಕೊಳ್ಳಬೇಕು.

ಒಮ್ಮೆ ಒಬ್ಬ ವಿದ್ಯಾರ್ಥಿ ಶಾಲೆಯಿಂದ ಮನೆಗೆ ವಾಪಸ್‌ ಬಂದು ತನ್ನ ಟೀಚರ್‌ ಲಕೋಟೆಯೊಂದರಲ್ಲಿ ಮುಚ್ಚಿಟ್ಟುಕೊಟ್ಟ ಪತ್ರವನ್ನು ಅಮ್ಮನಿಗೆ ಕೊಟ್ಟ. ಅವನ ತಾಯಿ ಇಡೀ ಪತ್ರವನ್ನು ಓದಿ, ಜೋರಾಗಿ ನಿಟ್ಟುಸಿರುಬಿಟ್ಟು ಮೌನಕ್ಕೆ ಶರಣುಹೋದಳು. ಅಚ್ಚರಿಯಿಂದ ಆ ಹುಡುಗ ಕೇಳಿದ- “”ಅಮ್ಮ ಟೀಚರ್‌ ಏನು ಬರೆದಿದಾರೆ?”  ಅಮ್ಮ ಅಂದಳು- “”ನಿನ್ನ ಟೀಚರ್‌ ಬರೆದಿದಾರೆ-ನಿಮ್ಮ  ಮಗನಂಥ ಬುದ್ಧಿವಂತ ಹುಡುಗ ನಮ್ಮ ತರಗತಿಯಲ್ಲಿ ಮತ್ತೂಬ್ಬರಿಲ್ಲ. ಇಂಥ ಪ್ರತಿಭಾವಂತ ವಿದ್ಯಾರ್ಥಿಗೆ ಪಾಠ ಹೇಳುವಂಥ ಕ್ಷಮತೆ ಖಂಡಿತ ನಮ್ಮ ಶಾಲೆಯಲ್ಲಿ ಯಾವ ಶಿಕ್ಷಕರಿಗೂ ಇಲ್ಲ. ಅದಕ್ಕೇ, ನಿಮ್ಮ ಮಗನ ಶಿಕ್ಷಣ ವ್ಯವಸ್ಥೆಯನ್ನು ಬೇರೆಲ್ಲಾದರೂ ಮಾಡಿದರೆ ಒಳ್ಳೆಯದು ಅಂತ ಬರೆದಿದಾರೆ ಪುಟ್ಟ” .

ವರ್ಷಗಳ ನಂತರ ಈ ಹುಡುಗ ದೊಡ್ಡ ವಿಜ್ಞಾನಿಯಾಗಿ ಬೆಳೆದ. ಒಂದು ದಿನ ಅವನ ತಾಯಿ ತೀರಿಕೊಂಡಳು. ಅಮ್ಮನ ಅಂತಿಮ ವಿಧಿವಿಧಾನ ಮುಗಿಸಲು ಎಲ್ಲಾ ಕೆಲಸಗಳನ್ನು ಅರ್ಧಕ್ಕೇ ನಿಲ್ಲಿಸಿ ಊರಿಗೆ ಬಂದ ವಿಜ್ಞಾನಿ. ಅಂತ್ಯಸಂಸ್ಕಾರವಾದ ಮೇಲೆ ಈ ವಿಜ್ಞಾನಿಯು ಮನೆಗೆ ಹಿಂದಿರುಗಿ, ಅಮ್ಮನ ಟೇಬಲ್‌ನ ಡ್ರಾ ತೆರೆದು ನೋಡಿದ. ಅಲ್ಲಿ ವರ್ಷಗಳ ಹಿಂದೆ ಟೀಚರ್‌ ತನ್ನ ಅಮ್ಮನಿಗೆ ಬರೆದ ಪತ್ರವಿತ್ತು. ಆ ಪತ್ರ ಕೈಗೆತ್ತಿಕೊಂಡ. ಅದನ್ನು ಓದುತ್ತಾ ಹೋದಂತೆ ಅವನ ಕಣ್ಣಿಂದ ನೀರು ಹರಿಯಲಾರಂಭಿಸಿತು, ಪತ್ರ ಹಿಡಿದುಕೊಂಡೇ ಕುಸಿದು ಕುಳಿತ. ಆ ಪತ್ರದಲ್ಲಿ ಬರೆದಿತ್ತು- “”ಮೇಡಂ, ನಿಮ್ಮ ಮಗ ಅತ್ಯಂತ ಪೆದ್ದ. ಅವನಿಗೆ ಯಾವ ವಿಷಯವೂ ತಲೆಗೆ ಹತ್ತುವುದಿಲ್ಲ. ಅವನಿಗೆ ಪಾಠ ಹೇಳುವುದರಲ್ಲಿ ನಮಗೆ ಸಾಕುಸಾಕಾಗಿದೆ. ಇವನನ್ನು ಶಾಲೆಯಿಂದ ಹೊರಹಾಕಲು ನಿರ್ಧರಿಸಿದ್ದೇವೆ. ಈ ಹುಡುಗನಿಗೆ ಮನೆಯಲ್ಲೇ ಪಾಠ ಮಾಡಿ..”

ಪತ್ರ ಓದಿ ಮುಗಿಸಿದ ವೈಜ್ಞಾನಿಕ ಮಹೋದಯ, ಅದರ ಕೆಳಗೆ ಬರೆದ: “”ಹೌದು, ನಾನೊಬ್ಬ ಪೆದ್ದ ಹುಡುಗನಾಗಿದ್ದೆ. ಆದರೆ ನನ್ನ ಅಮ್ಮನ ಪ್ರೋತ್ಸಾಹದ ನುಡಿಗಳು ಮತ್ತು ಆಕೆ ನನ್ನ ಮೇಲಿಟ್ಟ ನಂಬಿಕೆ ನನ್ನನ್ನು ಇಂದು ಇಂಥ ದೊಡ್ಡ ವಿಜ್ಞಾನಿಯಾಗಿ ಬೆಳೆಸಿತು”.

ಆ ವಿಜ್ಞಾನಿ ಬೇರೆ ಯಾರೂ ಅಲ್ಲ, ವಿಜ್ಞಾನಲೋಕದ ಮಾಣಿಕ್ಯ ಎನಿಸಿಕೊಂಡ “ಥಾಮಸ್‌ ಆಲ್ವಾ ಎಡಿಸನ್‌’! ಗೆಳೆಯರೇ, ಪ್ರತಿಯೊಬ್ಬ ವ್ಯಕ್ತಿಯಲ್ಲೂ ವಿಶೇಷ ಯೋಗ್ಯತೆ(ಅಗ್ನಿ) ಅಡಗಿರುತ್ತದೆ. ನಮ್ಮ ಮೇಲೆ ವಿಶ್ವಾಸವಿಡುವ ಒಬ್ಬೇ ಒಬ್ಬ ವ್ಯಕ್ತಿಯೂ ಚಿಕ್ಕ ಬೆಂಕಿಕಡ್ಡಿಯಾದರೆ (ಪ್ರೋತ್ಸಾಹ) ನೀಡಿದರೆ, ನಮ್ಮೊಳಗಿನ ಅಗ್ನಿ (ಶಕ್ತಿ-ಸಾಮರ್ಥ್ಯ) ಹೊರಗೆ ಬಂದು ನಾವು ವಿಶ್ವ ಕಲ್ಯಾಣವಾಗುವ ರೀತಿಯಲ್ಲಿ ಬೆಳೆಯಬಲ್ಲೆವು-ಬೆಳಗಬಲ್ಲೆವು. ಇಂಥ ವ್ಯಕ್ತಿಯನ್ನು ನಿಮ್ಮ ಜೀವನದಲ್ಲಿ ಹುಡುಕಿಕೊಳ್ಳಿ. ನೀವೂ ಕೂಡ ಇನ್ನೊಬ್ಬರೊಳಗಿನ ಶಕ್ತಿಯನ್ನು ನೂರ್ಮಡಿಗೊಳಿಸುವಂಥ ವ್ಯಕ್ತಿಗಳಾಗಿ.

ಗೌರ್‌ ಗೋಪಾಲದಾಸ್‌

Advertisement

Udayavani is now on Telegram. Click here to join our channel and stay updated with the latest news.

Next