ಬೆಂಗಳೂರು : ಕೇಂದ್ರ ಸರ್ಕಾರವು ಬೇರೆ ಬೇರೆ ರಾಜ್ಯಗಳಿಗೆ ಮೇ 17ರಿಂದ ಮೇ 23ರವರೆಗಿನ ಬಳಕೆಗಾಗಿ 23 ಲಕ್ಷ ವಯಲ್ಸ್ (ಸೀಸೆ) ರೆಮಿಡಿಸಿವರ್ ಚುಚ್ಚುಮದ್ದನ್ನು ಹಂಚಿಕೆ ಮಾಡಿದ್ದು ಕರ್ನಾಟಕಕ್ಕೆ ಈ ಸಲ ಉಳಿದ ರಾಜ್ಯಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಅಂದರೆ 4.25 ಲಕ್ಷ ವಯಲ್ಸ್ ರೆಮಿಡಿಸಿವರ್ ಚುಚ್ಚುಮದ್ದನ್ನು ಒದಗಿಸಲಾಗಿದೆ ಎಂದು ಕೇಂದ್ರ ಸಚಿವ ಡಿ ವಿ ಸದಾನಂದಗೌಡ ಹೇಳಿದರು.
ಈ ಕುರಿತು ಮಾತನಾಡಿದ ಸಚಿವರು ಕರ್ನಾಟಕದಲ್ಲಿರುವ ಅತಿಹೆಚ್ಚು ಸಕ್ರೀಯ ಪ್ರಕರಣವನ್ನು ಆಧರಿಸಿ ರಾಜ್ಯಕ್ಕೆ ಈ ವಾರ ಅತಿಹೆಚ್ಚು ರೆಮ್ಡೆಸಿವಿರ್ ಚುಚ್ಚುಮದ್ದು ಒದಗಿಸಲಾಗಿದೆ. ಏಪ್ರಿಲ್ 21ರಿಂದ ಇದುವರೆಗೆ ಕೇಂದ್ರವು ಒಟ್ಟು 76 ಲಕ್ಷ ವಯಲ್ಸ್ ಹಂಚಿಕೆ ಮಾಡಿದ್ದು ರಾಜ್ಯಕ್ಕೆ 10 ವಯಲ್ಸ್ ಲಭ್ಯವಾಗಿದೆ ಎಂದರು.
ಉಳಿದಂತೆ, ಈ ವಾರದ ಬಳಕೆಗಾಗಿ ಮಹಾರಾಷ್ಟ್ರಕ್ಕೆ 3.35 ಲಕ್ಷ, ತಮಿಳುನಾಡಿಗೆ 1.45 ಲಕ್ಷ, ಆಂಧ್ರ ಪ್ರದೇಶಕ್ಕೆ 1.4 ಲಕ್ಷ, ಉತ್ತರಪ್ರದೇಶಕ್ಕೆ 1.3 ಲಕ್ಷ, ರಾಜಸ್ಥಾನಕ್ಕೆ 1.28 ಲಕ್ಷ ಹಾಗೂ ಗುಜರಾತಿಗೆ 91 ಸಾವಿರ ರೆಮ್ಡೆಸಿವಿರ್ ವಯಲ್ಸ್ ಹಂಚಲಾಗಿದೆ. ಉಳಿದ ರಾಜ್ಯಗಳಿಗೂ ಸಕ್ರಿಯ ಕೋವಿಡ್ ಪ್ರಕರಣಗಳನ್ನು ಆಧರಿಸಿಯೇ ಈ ಔಷಧದ ಪ್ರಮಾಣವನ್ನು ನಿಗದಿಪಡಿಸಲಾಗಿದೆ ಎಂದು ಫಾರ್ಮಾ ಸಚಿವರೂ ಆಗಿರುವ ಸದಾನಂದ ಗೌಡ ತಿಳಿಸಿದರು.
ಇದನ್ನೂ ಓದಿ :ಕೋವಿಡ್ ಸೋಂಕಿಗೆ ಒಂದೇ ಕುಟುಂಬದ ನಾಲ್ವರು ಬಲಿ : ಅನಾಥವಾದ 9 ವರ್ಷದ ಬಾಲಕ
ವಿದೇಶಗಳಿಂದಲೂ ನೆರವಿನ ರೂಪದಲ್ಲಿ ಔಷಧ, ಆಮ್ಲಜನಕ ಸಿಲಿಂಡರ್, ವಂಟಿಲೇಟರ್ ಮುಂತಾದ ವಸ್ತುಗಳು ಭಾರತಕ್ಕೆ ಹರಿದುಬರುತ್ತಿದ್ದು ಈ ಪೈಕಿ ಹೊಸದಾಗಿ 40,000 ವಯಲ್ಸ್ ರೆಮ್ಡೆಸಿವಿರ್ ಬಂದಿದೆ. ರೆಮ್ಟೆಸಿವಿರ್ ಚುಚ್ಚುಮದ್ದೇ ಇರಲಿ ಅಥವಾ ಪ್ರಾಣವಾಯು ಆಮ್ಲಜನಕವೇ ಇರಲಿ ಮೋದಿ ನೇತೃತ್ವದ ನಮ್ಮ ಕೇಂದ್ರ ಸರ್ಕಾರವು ಲಭ್ಯವಿರುವ ಕೋವಿಡ್ ಸಂಪನ್ಮೂಲವನ್ನು ಎಲ್ಲ ರಾಜ್ಯಗಳಿಗೂ ಅತ್ಯಂತ ನ್ಯಾಯಯುತವಾಗಿ ಮತ್ತು ನಿಷ್ಪಕ್ಷಪಾತವಾಗಿ ವಿತರಿಸುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದರು.