ಧಾರವಾಡ: ನಗರದ ಆಲೂರು ಭವನದಲ್ಲಿ ಮಂಗಳವಾರ ಸಂಜೆ ಚಿತ್ರಕಲಾ ಶಿಲ್ಪಿ ಡಿ.ವ್ಹಿ.ಹಾಲಭಾವಿ ರಾಷ್ಟ್ರೀಯ ಸ್ಮಾರಕ (ರಿ)ಟ್ರಸ್ಟ್ ವತಿಯಿಂದ ಡಿ.ವ್ಹಿ. ಹಾಲಭಾವಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು.
2022ನೇ ಸಾಲಿಗೆ ಕಲಾ ಪ್ರಪಂಚದಲ್ಲಿ ಜೀವಮಾನ ಸಾಧನೆಗಾಗಿ 1ಲಕ್ಷ ನಗದು ಒಳಗೊಂಡ ಕುಂಚ ಕಲಾ ತಪಸ್ವಿ ರಾಷ್ಟ್ರೀಯ ಪ್ರಶಸ್ತಿಯನ್ನು ಬೆಂಗಳೂರಿನ ಹಿರಿಯ ಕಲಾವಿದ ಪಿ.ಸಂಪತ್‌ಕುಮಾರ, 50 ಸಾವಿರ ನಗದು ಒಳಗೊಂಡ ಕುಂಚ ಕಲಾಶ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು ಧಾರವಾಡದ ಎಫ್.ವಿ.ಚಿಕ್ಕಮಠ ಅವರಿಗೆ ಪ್ರದಾನ ಮಾಡಲಾಯಿತು. ಇದರ ಜತೆ ತಲಾ 25 ಸಾವಿರ ನಗದು ಒಳಗೊಂಡ ಯುವ ಕುಂಚ ಕಲಾಶ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು ಚಿಕ್ಕಮಗಳೂರಿನ ಲಕ್ಷ್ಮೀ ಮೈಸೂರು ಹಾಗೂ ಮುಂಬೈನ ಸತೀಶ ಪಾಟೀಲ ಅವರಿಗೆ ನೀಡಲಾಯಿತು.
ಪ್ರಶಸ್ತಿ ಸ್ವೀಕರಿಸಿದ ಹಿರಿಯ ಕಲಾವಿದ ಪಿ. ಸಂಪತ್‌ಕುಮಾರ ಮಾತನಾಡಿ, ಧಾರವಾಡದ ಮಣ್ಣು ಸಾಂಸ್ಕೃತಿಕವಾಗಿ ಗಟ್ಟಿಯಾದ ಮಣ್ಣು. ಇಂತಹ ಸ್ಥಳದಲ್ಲಿ ಹಾಲಭಾವಿ ಅವರ ಹೆಸರಿನ ಪ್ರಶಸ್ತಿ ನೀಡಿರುವುದು ಖುಷಿ ಕೊಟ್ಟಿದೆ ಎಂದರು.
ಈವರೆಗೂ ಚಿತ್ರಕಲೆಯಲ್ಲಿ ರಾಜ್ಯ ಸರಕಾರ ಕಲಾವಿದರನ್ನು ಗೌರವಿಸಿಲ್ಲ. ಕಳೆದ ಎರಡು ವರ್ಷಗಳಿಂದ ಇದರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಬಂದಿಲ್ಲ. ಈ ಬಗ್ಗೆ ಸರಕಾರ ಗಮನ ಹರಿಸಬೇಕು ಎಂದರು.
Related Articles
ಕುಂಚ ಕಲಾಶ್ರೀ ಪ್ರಶಸ್ತಿ ಪಡೆದ ಎಫ್.ವಿ.ಚಿಕ್ಕಮಠ ಮಾತನಾಡಿ, ಹಾಲಭಾವಿ ಅವರ ಹೆಸರಿನ ಪ್ರಶಸ್ತಿ ನೀಡುವ ಮೂಲಕ ನನ್ನ ಜವಾಬ್ದಾರಿ ಹೆಚ್ಚಿಸಲಾಗಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಬೆಳಗಾವಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಸವರಾಜ ಹೂಗಾರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪ್ರಶಸ್ತಿಗಳ ಹಾವಳಿ ಹೆಚಾÌಗಿದೆ. ಪ್ರಶಸ್ತಿ ಪಡೆಯುವುದು ಮುಖ್ಯವಲ್ಲ. ಅದರ ಮೌಲ್ಯ ಹೆಚ್ಚಿಸಬೇಕಿದೆ. ಯೋಗ್ಯರನ್ನು ಆಯ್ಕೆ ಮಾಡುವುದು ಪ್ರಮುಖ ಪಾತ್ರವಾಗಿರುತ್ತದೆ ಎಂದರು.
ಮಾಜಿ ಶಾಸಕ ಹಾಗೂ ಹಾಲಭಾವಿ ಟ್ರಸ್ಟ್ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಸುರೇಶ ಹಾಲಭಾವಿ, ಪಾರ್ವತಿ ಹಾಲಭಾವಿ, ಬಿ.ಮಾರುತಿ, ಬಿ.ಎಚ್. ಕುರಿಯವರ, ಬಿ.ಎಂ. ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸೇರಿದಂತೆ ಹಲವರು ಇದ್ದರು.