Advertisement

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

01:54 AM Nov 29, 2024 | Team Udayavani |

ಬೆಂಗಳೂರು: ಕೇಂದ್ರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದಲೇ ಬೆಂಗಳೂರು ಸೇರಿ ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯವೆಸಗಲು ಸಂಚು ಹಾಗೂ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಲಷ್ಕರ್‌-ಎ-ತೊಯ್ಬಾ ಸಂಘಟನೆಯ ಸಂಚುಕೋರ ಹಾಗೂ ದಕ್ಷಿಣ ಭಾರತದ ಎಲ್‌ಇಟಿ ಮುಖ್ಯಸ್ಥ ಟಿ. ನಾಸೀರ್‌ನ ಆಪ್ತ ಸಹಚರ ಸಲ್ಮಾನ್‌ ಖಾನ್‌ ಅಲಿಯಾಸ್‌ ಸಲ್ಮಾನ್‌ ರೆಹಮಾನ್‌ ಖಾನ್‌ನನ್ನು ಪೂರ್ವ ಆಫ್ರಿಕಾದ ರವಾಂಡ ದೇಶದಲ್ಲಿ ಬಂಧಿಸಲಾಗಿದೆ.

Advertisement

ಎನ್‌ಐಎ, ಸಿಬಿಐ ಹಾಗೂ ಇಂಟರ್‌ಪೋಲ್‌ ಅಧಿಕಾರಿಗಳು ಶಂಕಿತನನ್ನು ಭಾರತಕ್ಕೆ ಕರೆತಂದಿದ್ದಾರೆ. ಸದ್ಯ ಆರೋಪಿಯನ್ನು ಬೆಂಗಳೂರು ಎನ್‌ಐಎ ವಿಶೇಷ ಕೋರ್ಟ್‌ಗೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನು ಆರೋಪಿ ಬಳಿ ಇರುವ ಡಿಜಿಟಲ್‌ ದಾಖಲೆಗಳನ್ನು ಎನ್‌ಐಎ ವಶಕ್ಕೆ ಪಡೆದುಕೊಂಡಿದೆ. ಜತೆಗೆ ರವಾಂಡ ದೇಶದಿಂದ ಮುಚ್ಚಿದ ಲಕೋಟೆಯಲ್ಲಿ ನೀಡಿದ್ದ ಮಹತ್ವದ ದಾಖಲೆಗಳನ್ನು ತೆರೆದು ತನಿಖೆ ಮುಂದುವರಿಸಲು ಎನ್‌ಐಎ ಕೋರ್ಟ್‌ ತನಿಖಾಧಿಕಾರಿ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಪರಪ್ಪನ ಅಗ್ರಹಾರದಲ್ಲೇ ಸಂಚು
ಕಳೆದ ಕೆಲವು ವರ್ಷಗಳಲ್ಲಿ ಬೆಂಗಳೂರು ಸೇರಿ ರಾಜ್ಯದಲ್ಲಿ ನಡೆದ ಉಗ್ರ ಚಟುವಟಿಕೆ ಹಾಗೂ ಮುಸ್ಲಿಂ ಸಮುದಾಯದ ಯುವಕರನ್ನು ಉಗ್ರ ಸಂಘಟನೆಗೆ ಸೆಳೆಯಲು ಕೇಂದ್ರ ಪರಪ್ಪನ ಅಗ್ರಹಾರ ಕಾರಾಗೃಹದಿಂದಲೇ ಸಂಚು ರೂಪಿಸಲಾಗಿತ್ತು. ಅದಕ್ಕೆ ಜೀವಾವಧಿ ಶಿಕ್ಷೆಗೊಳಗಾಗಿರುವ ಎಲ್‌ಇಟಿ ಮುಖಂಡ ಟಿ. ನಾಸೀರ್‌ ಕಾರ್ಯತಂತ್ರ ರೂಪಿಸಿದ್ದ ಎಂಬುದು ಖಾತ್ರಿಯಾಗಿತ್ತು. ಹೀಗಾಗಿ ಈತನ ಆಪ್ತ ಸಹಚರರ ಬಗ್ಗೆ ಮಾಹಿತಿ ಸಂಗ್ರಹಿಸಿದಾಗ ರೆಹಮಾನ್‌ ಖಾನ್‌ ಎಂಬ ಹೆಸರು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಸಿಬಿಐ ಹಾಗೂ ಇಂಟರ್‌ಪೋಲ್‌ ಮೂಲಕ ಶಂಕಿತನ ಪತ್ತೆಗಾಗಿ ರೆಡ್‌ಕಾರ್ನರ್‌ ನೋಟಿಸ್‌ ಹೊರಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರವಾಂಡ ತನಿಖಾ ಸಂಸ್ಥೆ (ಆರ್‌ಐಬಿ) ತನಿಖೆ ಕೈಗೊಂಡು ಶಂಕಿತನನ್ನು ರವಾಂಡದಲ್ಲಿ ಬಂಧಿಸಿದ್ದು, ಭಾರತದ ತನಿಖಾ ಸಂಸ್ಥೆಗಳಿಗೆ ಹಸ್ತಾಂತರಿಸಿದೆ.

ಪೋಕ್ಸೋ ಆರೋಪಿಯಾಗಿದ್ದ
ಸಲ್ಮಾನ್‌ ಖಾನ್‌ ವಿರುದ್ಧ 2018ರಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು, 2022ರ ವರೆಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ. ಆಗ ದಕ್ಷಿಣ ಭಾರತದ ಎಲ್‌ಐಟಿ ಮುಖ್ಯಸ್ಥ ಟಿ. ನಾಸೀರ್‌ ಪರಿಚಯವಾಗಿದೆ. ಈ ವೇಳೆಯೇ ಸಲ್ಮಾನ್‌ ಖಾನ್‌ ಮತ್ತು ತಲೆಮರೆಸಿಕೊಂಡಿರುವ ಜುನೈದ್‌ ಸೇರಿ ಕೆಲ ವ್ಯಕ್ತಿಗಳಿಗೆ ನಾಸೀರ್‌ ಉಗ್ರ ಸಂಘಟನೆ ಸೇರ್ಪಡೆ ಬಗ್ಗೆ ಪ್ರಚೋದನೆ ನೀಡಿದ್ದ. ಅಲ್ಲದೆ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳ ಸಾಗಾಟ ಮತ್ತು ಸಂಗ್ರಹ ಬಗ್ಗೆಯೂ ಸೂಚಿಸಿದ್ದ. ಜತೆಗೆ ಪ್ರಕರಣದಿಂದ ಹೇಗೆ ಬಚಾವ್‌ ಆಗಬೇಕು ಎಂದು ಸಲಹೆ ನೀಡಿದ್ದ ಎಂಬುದು ಗೊತ್ತಾಗಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.

ಶಸ್ತ್ರಾಸ್ತ್ರ ಪೂರೈಸಿದ್ದ ಸಲ್ಮಾನ್‌
2023ರ ಜುಲೈಯಲ್ಲಿ ಹೆಬ್ಟಾಳ ಠಾಣೆ ವ್ಯಾಪ್ತಿಯಲ್ಲಿ ಐವರು ಶಂಕಿತ ಉಗ್ರರನ್ನು ಬಂಧಿಸಲಾಗಿತ್ತು. ಈ ವೇಳೆ ಶಂಕಿತ ಜಾಹೀದ್‌ ತಬ್ರೇಜ್‌ ಮನೆಯ ಬೀರುವಿನಲ್ಲಿ 6 ಗ್ರೇನೇಡ್‌ ಪತ್ತೆಯಾಗಿತ್ತು. ನೆಲಮಂಗಲ ಟೋಲ್‌ಗೇಟ್‌ ಬಳಿ ಅಪರಿಚಿತನೊಬ್ಬ ಗ್ರೇನೇಡ್‌ ತಂದು ಕೊಟ್ಟಿದ್ದು, ಅದೇ ವೇಳೆ ಕಾರಿನಲ್ಲಿ ಹೋಗಿದ್ದ ಜಾಹೀದ್‌, ಅವುಗಳನ್ನು ತಂದು ತನ್ನ ಮನೆಯಲ್ಲಿ ಇರಿಸಿದ್ದ. ಆದರೆ ಈ ಗ್ರೇನೇಡ್‌ಗಳನ್ನು ಸಲ್ಮಾನ್‌ ಖಾನ್‌ ಅಲಿಯಾಸ್‌ ಸಲ್ಮಾನ್‌ ರೆಹಮಾನ್‌ ಖಾನ್‌ ವಿದೇಶದಲ್ಲಿ ಕುಳಿತುಕೊಂಡೇ ತನ್ನ ಸಹಚರರ ಮೂಲಕ ಬೆಂಗಳೂರಿಗೆ ಕಳುಹಿಸಿದ್ದ ಎಂಬುದು ಗೊತ್ತಾಗಿದೆ. ಆದರೆ ಆಗ ಸಿಸಿಬಿಗೆ ಜುನೈದ್‌ ಎಂಬಾತ ಕಳುಹಿಸಿದ್ದಾನೆ ಎಂಬುದು ಖಾತ್ರಿಯಾಗಿತ್ತು. ಆ ನಂತರ ಎನ್‌ಐಎ ಅಧಿಕಾರಿಗಳು ತನಿಖೆ ಕೈಗೊಂಡಾಗ ಜುನೈದ್‌ ಮಾತ್ರವಲ್ಲ ರೆಹಮಾನ್‌ ಖಾನ್‌ ಅಲಿಯಾಸ್‌ ಸಲ್ಮಾನ್‌ ರೆಹಮಾನ್‌ ಖಾನ್‌ ಪೂರೈಕೆ ಮಾಡಿರುವುದು ಪತ್ತೆಯಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next