Advertisement

D.K.,Udupi; ಪರೀಕ್ಷೆಗೆ ಅಣಿಯಾದ ಎಸೆಸೆಲ್ಸಿ ವಿದ್ಯಾರ್ಥಿಗಳು

12:59 AM Mar 25, 2024 | Team Udayavani |

ಮಂಗಳೂರು/ ಉಡುಪಿ: ವಿದ್ಯಾರ್ಥಿಗಳ ಪಾಲಿನ ಬಹು ಮಹತ್ವದ ಎಸೆಸೆಲ್ಸಿ ಪರೀಕ್ಷೆ ಸೋಮವಾರ ಆರಂಭಗೊಳ್ಳಲಿದ್ದು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಾದ್ಯಂತ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅಣಿಯಾಗಿದ್ದಾರೆ. ಪೂರಕವಾಗಿ ಎರಡೂ ಜಿಲ್ಲಾಡಳಿತಗಳು ಸರ್ವ ಸಿದ್ಧತೆಗಳನ್ನು ಈಗಾಗಲೇ ಪೂರ್ಣಗೊಳಿಸಿವೆ.
ದ.ಕ. ಜಿಲ್ಲೆಯಲ್ಲಿ 27,663 ಶಾಲಾ ವಿದ್ಯಾರ್ಥಿಗಳು, 1,053 ಖಾಸಗಿ ಅಭ್ಯರ್ಥಿಗಳು, 1,632 ಪುನರಾವರ್ತಿತ ಅಭ್ಯರ್ಥಿಗಳು ಸೇರಿದಂತೆ ಒಟ್ಟು 30,348 ವಿದ್ಯಾರ್ಥಿಗಳು ಈ ಬಾರಿ ಎಸೆಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ.

Advertisement

ಬಂಟ್ವಾಳ ವಲಯ ವ್ಯಾಪ್ತಿಯಲ್ಲಿ 6,123 ವಿದ್ಯಾರ್ಥಿಗಳು, ಬೆಳ್ತಂಗಡಿ 4,035, ಮಂಗಳೂರು ಉತ್ತರ 5,810, ಮಂಗಳೂರು ದಕ್ಷಿಣ 5452, ಮೂಡುಬಿದ್ರೆ 1,948, ಪುತ್ತೂರು 4995 ಹಾಗೂ ಸುಳ್ಯ 1,985 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಬಂಟ್ವಾಳದಲ್ಲಿ 17, ಬೆಳ್ತಂಗಡಿಯಲ್ಲಿ 13, ಮಂಗಳೂರು ಉತ್ತರ ವ್ಯಾಪ್ತಿಯಲ್ಲಿ 18, ಮಂಗಳೂರು ದಕ್ಷಿಣ ಭಾಗದಲ್ಲಿ 16, ಮೂಡುಬಿದಿರೆಯಲ್ಲಿ 5, ಪುತ್ತೂರು 13 ಹಾಗೂ ಸುಳ್ಯ ವಲಯದಲ್ಲಿ 6 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 88 ಪರೀಕ್ಷಾ ಕೇಂದ್ರಗಳಿವೆ.

ಉಡುಪಿ ಜಿಲ್ಲೆಯಲ್ಲಿ ಬೈಂದೂರಿನಲ್ಲಿ 2,140, ಕುಂದಾಪುರದಲ್ಲಿ 2,778, ಕಾರ್ಕಳದಲ್ಲಿ 2,783, ಉಡುಪಿ ಉತ್ತರ 2,887, ಉಡುಪಿ ದಕ್ಷಿಣದಲ್ಲಿ 3,743, ಒಟ್ಟು 14,331 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಉಡುಪಿಯಲ್ಲಿ 15, ಬ್ರಹ್ಮಾವರದಲ್ಲಿ 11, ಕುಂದಾಪುರ ಹಾಗೂ ಬೈಂದೂರು ವಲಯಗಳ ತಲಾ 8, ಕಾರ್ಕಳದಲ್ಲಿ 9 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ದ.ಕ., ಉಡುಪಿ ಜಿಲ್ಲೆಯ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದ್ದು, ಅಭ್ಯರ್ಥಿಗಳ ಅನುಕೂಲಕ್ಕಾಗಿ ಸೂಕ್ತ ಸೂಚನಾ ಫಲಕಗಳ ವ್ಯವಸ್ಥೆ ಮಾಡಲಾಗಿದೆ. ಅಭ್ಯರ್ಥಿಗಳಿಗೆ ಅಗತ್ಯ ಅಸನದ ವ್ಯವಸ್ಥೆ ಮಾಡಲಾಗಿದ್ದು, ಕುಡಿಯುವ ನೀರು, ಶೌಚಾಲಯ ಹಾಗೂ ಇತರ ಮೂಲಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಬಸ್‌ ವ್ಯವಸ್ಥೆ ಕಲ್ಪಿಸುವಂತೆಯೂ ಜಿಲ್ಲಾಡಳಿತ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next