Advertisement

D.K. ಜಿಲ್ಲೆಯಲ್ಲಿ ಗುರಿ ಪೂರ್ಣತೆಗೆ ಅನೇಕ ಸವಾಲು

09:53 AM Mar 12, 2024 | Team Udayavani |

ಬೆಳ್ತಂಗಡಿ: ಗ್ರಾಮೀಣ ಪ್ರದೇಶದ ನರೇಗಾ ಉದ್ಯೋಗ ಚೀಟಿ ಹೊಂದಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರ ಮಕ್ಕಳಿಗೆ ಅನುಕೂಲ ಕಲ್ಪಿಸಲಿದೆಂದು ಪ್ರಾರಂಭವಾದ ಕೂಸಿನ ಮನೆಯತ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಷ್ಟೊಂದು ಆಸಕ್ತಿ ವ್ಯಕ್ತವಾಗಿಲ್ಲ.

Advertisement

ಅಂಗನವಾಡಿಯಲ್ಲಿ 3 ವರ್ಷ ಮೇಲ್ಪಟ್ಟು ಮಕ್ಕಳನ್ನು ದಾಖಲಿಸಿಕೊಳ್ಳಲಾಗುತ್ತಿದ್ದು ಅದಕ್ಕಿಂತ ಚಿಕ್ಕ ವಯಸ್ಸಿನ ಮಕ್ಕಳ ಪಾಲನೆ ಸವಾಲಾಗಿತ್ತು. ಈ ನೆಲೆಯಲ್ಲಿ ನರೇಗಾ ದಿನಗೂಲಿ ಮಹಿಳೆಯರಮಕ್ಕಳ ಪಾಲನೆಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರಾಜ್ಯದ ಗ್ರಾ.ಪಂ.ಗಳಲ್ಲಿ 4 ಸಾವಿರ ಶಿಶುಪಾಲನ ಕೇಂದ್ರಗಳಾದ “ಕೂಸಿನ ಮನೆ’ ಗಳನ್ನು ಪ್ರಾರಂಭಿಸಲು ಯೋಜಿಸಿದೆ.

ಇದರಡಿ ಇಂಥ ಮಹಿಳಾ ಕಾರ್ಮಿಕರ 7 ತಿಂಗಳಿಂದ 3 ವರ್ಷದೊಳಗಿನ ಕಂದಮ್ಮಗಳನ್ನು ಈ ಕೂಸಿನ ಮನೆಯಲ್ಲಿ ಆರೈಕೆ ಮಾಡಲಾಗುತ್ತದೆ. ಮೊದಲ ಹಂತದಲ್ಲಿ ದ.ಕ. ಜಿಲ್ಲೆಯಲ್ಲಿ 33 ಹಾಗೂ ಉಡುಪಿ ಜಿಲ್ಲೆಯಲ್ಲಿ 14 ಸೇರಿದಂತೆ ರಾಜ್ಯಾದ್ಯಂತ 2,209 ಕೂಸಿನ ಮನೆ ಪ್ರಾರಂಭಿಸಲಾಗಿದೆ.

ದ.ಕ. ಜಿಲ್ಲೆಯ ಬಂಟ್ವಾಳ-5, ಬೆಳ್ತಂಗಡಿ-6, ಪುತ್ತೂರು-4, ಮಂಗಳೂರು-4, ಸುಳ್ಯ-4, ಕಡಬ-5, ಉಳ್ಳಾಲ-2, ಮೂಡುಬಿದಿರೆ-2, ಮೂಲ್ಕಿ- 1 ಕೂಸಿನ ಮನೆಯಿದ್ದು ಒಟ್ಟು 78 ಮಕ್ಕಳು ದಾಖಲಾಗಿದ್ದಾರೆ.

ಮಕ್ಕಳ ಪಾಲನೆಗಾಗಿ ದಿಲ್ಲಿಯ ಮೊಬೈಲ್‌ ಕ್ರಷ್‌ ಸಂಸ್ಥೆಯಿಂದ ತರಬೇತಿ ಪಡೆದ ಮಾಸ್ಟರ್‌ ಟ್ರೈನರ್‌ಗಳ ಮೂಲಕ ಗ್ರಾಮೀಣ ಶ್ರೇಷ್ಠತಾ ಕೇಂದ್ರ ಲಾೖಲ, ಸಾಮರ್ಥ್ಯ ಸೌಧ ಮಂಗಳೂರು ಮತ್ತು ಪುತ್ತೂರು ತರಬೇತಿ ಪಡೆದ ನರೇಗಾ ಕ್ರಿಯಾಶೀಲ ಉದ್ಯೋಗ ಚೀಟಿ ಹೊಂದಿದ ಕೇರ್‌ ಟೇಕರ್ಸ್‌ಗಳು ವ್ಯವಸ್ಥಿತವಾದ ಟ್ರೈನಿಂಗ್‌ ಪಡೆದಿದ್ದಾರೆ.

Advertisement

ಬಯಲು ಸೀಮೆಯಲ್ಲಿ ಕೂಲಿಗಾಗಿ ಮಹಿಳೆಯರು ದೂರ ದೂರ ಸಂಚರಿಸುವುದರಿಂದ ಇದು ಪರಿಣಾಮಕಾರಿ. ಆದರೆ ಕರಾವಳಿಯಲ್ಲಿ ಸಾರ್ವಜನಿಕ ಕಾಮಗಾರಿಗಳು ಬಹಳ ಕಡಿಮೆ. ಇದ್ದರೂ ಮಹಿಳೆಯರು ದೂರ ಕೂಲಿಗೆ ಹೋಗಲಾರರು. ಪುಟ್ಟ ಮಕ್ಕಳಿರುವ ತಾಯಂದಿರು ಕೆಲಸಕ್ಕೆ ಹೋಗಲು ಮನೆಮಂದಿ ನಿರಾಕರಿಸುವುದೇ ಹೆಚ್ಚು. ಹೋದರೂ ಮಕ್ಕಳನ್ನು ಮನೆಯಲ್ಲಿರುವ ಹಿರಿಯರು ಪಾಲನೆ ಮಾಡುತ್ತಾರೆ. ಅಲ್ಲದೆ ಈ ಕೇಂದ್ರವನ್ನು ನರೇಗಾ ಕೂಲಿಕಾರರ ಮಕ್ಕಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಇತರ ಕೂಲಿ ಕಾರ್ಮಿಕರ ಮಕ್ಕಳಿಗೂ ಅವಕಾಶ ಸಿಕ್ಕಿದ್ದರೆ ಮಕ್ಕಳ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಸಾರ್ವಜನಿಕರು.

ಉತ್ತಮ ವ್ಯವಸ್ಥೆ

ದ.ಕ.ದಲ್ಲಿ ಕೂಸಿನ ಮನೆಗೆ ಉತ್ತಮ ಸ್ಪಂದನೆ ತೋರುತ್ತಿದ್ದಾರೆ. ಶಿಶುಪಾಲನೆ ಕೇಂದ್ರದಲ್ಲಿ ಪ್ರತೀ ಮಗುವಿಗೆ ದಿನಕ್ಕೆ 12 ರೂ. ನಿಗದಿಪಡಿಸಲಾಗಿದೆ. ಶಿಶುಪಾಲನೆ ಕೇಂದ್ರದ ನಿರ್ವಹಣೆಗೆ 1 ಲಕ್ಷ ರೂ. ಅನುದಾನ ನೀಡಲಾಗಿದೆ. ಮಕ್ಕಳಿಗೆ ಪೌಷ್ಟಿಕಾಂಶವುಳ್ಳ ಆಹಾರವನ್ನು ತಯಾರಿಸಿ ನೀಡಲಾಗುತ್ತಿದೆ. – ಡಾ| ಆನಂದ್‌ ಕೆ., ಸಿಇಒ, ದ.ಕ.ಜಿ.ಪಂ.

ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next