ಬೆಂಗಳೂರು : ರಾಜ್ಯದಲ್ಲಿನ ಕಾಂಗ್ರೆಸ್ – ಜೆಡಿಸ್ ಮೈತ್ರಿ ಸರಕಾರದ ಅಳಿವು ಉಳಿವು ಕುರಿತ ವಿದ್ಯಮಾನಗಳು ಕ್ಷಣಕ್ಷಣಕ್ಕೆ ಹೊಸ ಹೊಸ ತಿರುವನ್ನು ಪಡೆಯುತ್ತಿದ್ದು ಅಪಾರ ರೋಚಕತೆಯೊಂದಿಗೆ ಮುನ್ನಡೆಯುತ್ತಿದೆ.
ಇಂದು ಬುಧವಾರ ಸಂಜೆ ಆರು ಗಂಟೆಗೆ ದಾಖಲಾಗಿರುವ ವಿದ್ಯಮಾನದ ಪ್ರಕಾರ ಹಿರಿಯ ಕಾಂಗ್ರೆಸ್ ನಾಯಕ ಮಿಲಿಂದ್ ದೇವರಾ ಅವರನ್ನು ವಶಕ್ಕೆ ತೆಗೆದುಕೊಂಡಿದ್ದ ಮುಂಬಯಿ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಆದರೆ ಸಚಿವ ಡಿ ಕೆ ಶಿವಕುಮಾರ್ ಅವರನ್ನು ಪೊಲೀಸರು ಬಲವಂತವಾಗಿ ವಿಮಾನ ನಿಲ್ದಾಣಕ್ಕೆ ಕರೆದೊಯ್ದು ಅಲ್ಲಿಂದ ಬೆಂಗಳೂರಿಗೆ ಅವರನ್ನು ಮರಳಿ ಕಳಿಸುತ್ತಿದ್ದಾರೆ. ದೇವರಾ ತಂಡ ಈ ವಿದ್ಯಮಾನವನ್ನು ತನ್ನ ಸಂದೇಶದಲ್ಲಿ ತಿಳಿಸಿದೆ.
ಈ ನಡುವೆ ಇಬ್ಬರು ಕಾಂಗ್ರೆಸ್ ಶಾಸಕರಾದ, ವಸತಿ ಖಾತೆ ಸಚಿವ ಎಂ ಟಿ ಬಿ ನಾಗರಾಜ್ ಮತ್ತು ಕೆ. ಸುಧಾಕರ್ ಅವರು ರಾಜೀನಾಮೆ ನೀಡುವ ಮೂಲಕ ಮೈತ್ರಿ ಸರಕಾರಕ್ಕೆ ಹೊಸ ಶಾಕ್ ನೀಡಿದ್ದಾರೆ.
ಆದರೆ ತಾನು ಯಾವುದೇ ರಾಜೀನಾಮೆಯನ್ನು ಸ್ವೀಕರಿಸಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿರುವುದು ಅಚ್ಚರಿ ಉಂಟುಮಾಡಿದೆ.
ಅತೃಪ್ತ ಶಾಸಕರನ್ನು ಬೆಂಗಳೂರಿಗೆ ಕರೆತಂದೇ ಸಿದ್ಧ ಎಂದು ಮುಂಬಯಿಗೆ ಹೋಗಿದ್ದ ಡಿ ಕೆ ಶಿವಕುಮಾರ್, ತನ್ನ ಕಾರ್ಯಾಚರಣೆಯಲ್ಲಿ ತಾನು ಯಶಸ್ವಿಯಾಗುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಆದರೆ ಇದೀಗ ಮುಂಬಯಿ ಪೊಲೀಸರಿಂದ ಬಲವಂತವಾಗಿ ವಿಮಾನ ಮೂಲಕ ಬೆಂಗಳೂರಿಗೆ ಕಳುಹಿಸಲ್ಪಡುತ್ತಿರುವ ಡಿಕೆಶಿ ಅವರ ಅಭಿಯಾನ ಎಷ್ಟು ಯಶಸ್ವಿಯಾಗಿದೆ ಎಂಬ ಪ್ರಶ್ನೆಗೆ ಉತ್ತರವಿಲ್ಲವಾಗಿದೆ.
ಬಂಡುಕೋರ ಶಾಸಕರನ್ನು ತಾನು 40 ವರ್ಷದಿಂದ ಬಲ್ಲೆ; ಬಿಜೆಪಿಗೆ ಅವರು ಗೊತ್ತಿರುವುದು ಈಗ ಕೆಲವು ದಿನಗಳಿಂದ ಎಂದು ಶಿವಕುಮಾರ್ ವ್ಯಂಗ್ಯವಾಡಿದ್ದರು.