ಬೆಂಗಳೂರು : ಸಿದ್ದರಾಮಯ್ಯ ಕಾಲದಲ್ಲಿ ಪಠ್ಯ ಪರಿಷ್ಕರಣೆಯಲ್ಲಿ ಲೋಪವಾಗಿತ್ತು ಎಂದು ಸಚಿವ ಆರ್.ಅಶೋಕ್ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದು,ಸಿದ್ದರಾಮಯ್ಯ ಕಾಲದಲ್ಲಿ ತಪ್ಪಾಗಿದ್ರೆ ಆಗ ಅವರು ಏನು ಮಾಡುತ್ತಿದ್ದರು? ಆಗ ಬಾಯಿ ಹೊಲಿದುಕೊಂಡು ಕೂತಿದ್ದರಾ ? ಎಂದು ಪ್ರಶ್ನಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಆಗ ಯಾಕೆ ಮಾತನಾಡಲಿಲ್ಲ ?ಪಠ್ಯ ಪರಿಷ್ಕರಣೆ ಬಗ್ಗೆ ಈಗ ಕಾಂಗ್ರೆಸ್ ಮಾತಾಡುತ್ತಿಲ್ಲ.ಜನರೇ ದಂಗೆ ಏಳುತ್ತಿದ್ದಾರೆ ಎಂದು ಕಿಡಿಕಾರಿದರು. ಕಳಪೆ ರಸ್ತೆ ಡಾಂಬರೀಕರಣ ಪ್ರಕರಣ ತನಿಖೆಗೆ ಪ್ರಧಾನಿ ಕಚೇರಿ ಸೂಚನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಗುಂಡಿಗಳ ಬಗ್ಗೆ ದೊಡ್ಡ ದೊಡ್ಡ ಮಾಧ್ಯಮದವರು ಅಭಿಯಾನ ಮಾಡಿದ್ದಾರೆ.ಜನಕ್ಕೆ ತೊಂದರೆಯಾಗುತ್ತಿದೆ ಎಂದಾಗ ಗುಂಡಿ ಮುಚ್ಚಿಲ್ಲ .ನಾಯಕರು ಬರ್ತಾರೆ ಎಂದಾಗ ಗುಂಡಿ ಮುಚ್ಚಿದರು.ಅವರಿಗೆ ಜನ ಮುಖ್ಯ ಅಲ್ಲ.ಅವರ ನಾಯಕರು ಅಲ್ಲಾಡಬಾರದು.ಕಾಂಗ್ರೆಸ್ ಕಚೇರಿಯಲ್ಲಿ ಬೋರ್ಡ್ ಹಾಕಿದ್ದಕ್ಕೆ ನೊಟೀಸ್ ಕೊಟ್ಟರು .ಆದರೆ, ಅವರು ಎಲ್ಲಾ ಕಡೆ ಫ್ಲೆಕ್ಸ್ ಹಾಕಿದರೂ ನೊಟೀಸ್ ಕೊಡುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಎಂ.ಆರ್.ಸೀತಾರಾಂ ಸಭೆಗೂ ಕಾಂಗ್ರೆಸ್ ಗೂ ಸಂಬಂಧ ಇಲ್ಲ.ಅವರ ಸಭೆ ಬಗ್ಗೆ ನನಗೆ ಗೊತ್ತಿಲ್ಲ. ಬಿಜೆಪಿಯಲ್ಲೂ ಅಸಮಾಧಾನವಿದೆ. ಆದರೆ ನೀವು ಯಾಕೆ ಆ ಬಗ್ಗೆ ಕೇಳುವುದಿಲ್ಲ ? ಎಂದು ಬೇಸರ ವ್ಯಕ್ತಪಡಿಸಿದರು.
ನಮ್ಮ ರಾಷ್ಟ್ರೀಯ ನಾಯಕರಿಗೆ ಇಡಿ ವಿಚಾರಣೆ ನಡೆಸುತ್ತಿದ್ದಾರೆ.ಸೋನಿಯಾಗಾಂಧಿ ಅವರು ಸಮಯಾವಕಾಶ ಕೇಳಿದ್ದಾರೆ.ರಾಹುಲ್ ಗಾಂಧಿ ಅವರಿಗೆ ೫ ದಿನ ವಿಚಾರಣೆ ಮಾಡಿದ್ದಾರೆ.ಅಷ್ಟು ದಿನ ಮಾಡುವಂತದ್ದು ಇರಲಿಲ್ಲ. ನನಗೂ ಇಡಿ ನೋಟಿಸ್ ಕೊಟ್ಟಿದೆ.ಈಗಾಗಲೇ ಸಮನ್ಸ್ ಕೊಟ್ಟಿದ್ದಾರೆ.ವಿಚಾರಣೆಗೆ ಹೋಗುತ್ತೇನೆ.ಐದು ಜನರಿಗೆ ಸಮನ್ಸ್ ಕೊಟ್ಟಿದ್ದಾರೆ.ಚಾರ್ಜ್ ಶೀಟ್ ಆರು ತಿಂಗಳಲ್ಲೇ ಹಾಕಬೇಕಿತ್ತು.ಆದರೆ ತಡ ಮಾಡಿ ಈಗ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.