ಕಲಬುರಗಿ: ಧರ್ಮ, ದೇವರು, ಹಿಂದುತ್ವ ಯಾರ ಆಸ್ತಿಯಲ್ಲ. ಆದರೆ ಅದನ್ನು ಕೆಲವರು ತಮ್ಮ ಆಸ್ತಿ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.
ಗಾಣಗಾಪುರ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಂಗ್ರೆಸ್ ನಾಯಕ ಎಂ.ಬಿ.ಪಾಟೀಲರ ಮಾರ್ಮಿಕ ಟ್ವೀಟ್ ಕುರಿತಾಗಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿ, ಅದು ಹಾದಿ ಬೀದಿಯಲ್ಲಿ ಮಾತನಾಡುವ ಪೋಸ್ಟ್ ಅಲ್ಲ ಎಂದು ಹೇಳಿದರು. ಯಾರಾದರೂ ಅಸಮಾಧಾನ ಪಟ್ಟಿದ್ದರೆ, ಅವರನ್ನೇ ಕೇಳಿ ಎಂದರು,
ತಮ್ಮ ಪರವಾಗಿ ಪ್ರತಿಭಟನೆ ಸಂದರ್ಭದಲ್ಲಿ ಹಾನಿ ವಿಚಾರವಾಗಿ ಮಾತನಾಡಿದ ಡಿಕೆಶಿ, ಯಾರು ಕೋರ್ಟ್ ಗೆ ಪಿಐಎಲ್ ಹಾಕಿಸಿದ್ದಾರೆ, ಯಾವ ಪಾರ್ಟಿ, ಯಾವ ವ್ಯಕ್ತಿ ಅದರ ಹಿಂದೆ ಇದ್ದಾರೆ ಅಂತ ಗೊತ್ತು. ಬೆಂಗಳೂರಿಗೆ ಹೋದ ಮೇಲೆ ಅದನ್ನು ನೋಡುತ್ತೇನೆ ಎಂದರು.
ಪ್ರತಿಭಟನೆ ಸಂದರ್ಭದಲ್ಲಿ ನಾನು ಕೋರ್ಟ್ ಕಸ್ಟಡಿಯಲ್ಲಿದ್ದೆ. ಪಿಐಎಲ್ ಹಾಕಿಸಿ, ಹಾನಿ ಬಗ್ಗೆ ಇಷ್ಟೊಂದು ಬೇಗ ವರದಿ ಕೊಟ್ಟಿದ್ದಾರೆ. ಇದರಲ್ಲಿ ರಾಜಕಾರಣವಾಗುತ್ತಿದೆ. ನನಗೆ ಯಾವ ಸಂಕಷ್ಟವಿಲ್ಲ. ಆದರೆ ನನಗೆ ತೊಂದರೆ ಕೊಡುವದೇ ಕೆಲವರಿಗೆ ಖುಷಿ. ಹೀಗಾಗಿ ತೊಂದರೆ ಕೊಡುತ್ತಾ ಇರುತ್ತಾರೆ ಎಂದು ಕುಟುಕಿದರು.