ಕಲಬುರಗಿ: ಕೆಪಿಸಿಸಿ ಹುದ್ದೆಗೆ ನಾನು ಅರ್ಜಿನೂ ಹಾಕಿಲ್ಲ. ಆಕಾಂಕ್ಷಿನೂ ಅಲ್ಲ ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅಚ್ಚರಿಯ ಹೇಳಿಕೆ ನೀಡಿದರು.
ಯಾದಗಿರಿಯ ಗೋನಾಳ ದೇವಿ ಜಾತ್ರೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಡಿಕೆಶಿ ಸುದ್ದಿಗಾರರೊಂದಿಗೆ ಮಾತನಾಡಿ, ಕೆಪಿಸಿಸಿ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರು ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆ ಅಂಗೀಕಾರವಾಗಿಲ್ಲ. ಹೀಗಾಗಿ ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ನಾನು ಅಧ್ಯಕ್ಷ ಸ್ಥಾನವನ್ನೇ ಕೇಳಿಲ್ಲ ಎಂದರು.
ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ದರಾಮಯ್ಯ ಒಂದೇ ಪಕ್ಷದವರು. ಒಟ್ಟಿಗೆ ಕುಳಿತು ಚಹಾ ಕುಡಿಯುವುದು, ತಿಂಡಿ ತಿನ್ನುವುದೇ ತಪ್ಪೇ ಎಂದ ಡಿಕೆಶಿ, ದಿನೇಶ್ ಗುಂಡೂರಾವ್, ಸಿದ್ದರಾಮಯ್ಯರನ್ನು ನಮ್ಮ ವರಿಷ್ಠರು ನೇಮಿಸಿದ್ದಾರೆ. ಅವರೇ ನಮ್ಮ ನಾಯಕರು, ಅವರ ಕೈ ಕೆಳಗೆ ನಾವು ಕೆಲಸ ಮಾಡುತ್ತೇವೆ ಎಂದರು.
ಭಕ್ತಿಯಿದ್ದಲ್ಲಿ ಭಗವಂತ: ಮನಸ್ಸಿದ್ದಲ್ಲಿ ಮಾರ್ಗವಿದೆ. ಹಾಗೆ ಭಕ್ತಿಯಿದ್ದಲ್ಲಿ ಭಗವಂತ ಇದ್ದಾನೆ. ಹೀಗಾಗಿ ಅನೇಕ ದೇವಸ್ಥಾನಗಳಿಗೆ ಭೇಟಿ ನೀಡಿ, ದರ್ಶನ ಪಡೆಯುತ್ತಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಗೋನಾಳ ಜಾತ್ರೆಗೆ ಬರುವುದಾಗಿ ಹರಕೆ ಹೊತ್ತುಕೊಂಡಿದ್ದೆ. ಕಳೆದ ವರ್ಷವೂ ಹೊರಕೆ ತೀರಿಸಬೇಕಿತ್ತು. ಆದರೆ ಬರಲಿಕ್ಕೆ ಆಗಿರಲಿಲ್ಲ. ಹೀಗಾಗಿ ಈ ಬಾರಿ ಬಂದು ಹರಕೆ ತೀರಿಸುತ್ತಿದ್ದೇನೆ. ನಾಳೆ ಗಾಣಗಾಪುರದ ದತ್ತಾತ್ರೇಯ ಕ್ಷೇತ್ರಕ್ಕೂ ಭೇಟಿ ನೀಡುತ್ತೇನೆ ಎಂದು ತಿಳಿಸಿದರು.