Advertisement

ದ.ಕ.: ಮೌಲಾನಾ ಆಜಾದ್‌ ಶಾಲೆಗಳಿಗೆ ಸ್ವಂತ ಕಟ್ಟಡ 

10:57 PM Sep 29, 2022 | Team Udayavani |

ಬಂಟ್ವಾಳ: ಅಲ್ಪಸಂಖ್ಯಾಕ ವಿದ್ಯಾರ್ಥಿಗಳ ಶಿಕ್ಷಣವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಲ್ಪಸಂಖ್ಯಾಕರ ಕಲ್ಯಾಣ ಇಲಾಖೆಯ ಮೂಲಕ ಮೌಲಾನಾ ಆಜಾದ್‌ ಮಾದರಿ ಶಾಲೆಗಳನ್ನು ಆರಂಭಿಸಲಾಗಿದ್ದು, ದ.ಕ. ಜಿಲ್ಲೆಯ ಎಲ್ಲ 8 ಶಾಲೆಗಳು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಹೊಸ ಕಟ್ಟಡದಲ್ಲಿ ಕಾರ್ಯಾಚರಿಸಲಿವೆ. ಉಡುಪಿ ಜಿಲ್ಲೆಯಲ್ಲಿರುವ ಎರಡೂ ಶಾಲೆಗಳ ಕಟ್ಟಡದ ಕಾಮಗಾರಿ ಇನ್ನಷ್ಟೇ ಆರಂಭಗೊಳ್ಳಬೇಕಿದೆ.

Advertisement

ಈ ಶಾಲೆಗಳಲ್ಲಿ 6ರಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ದೊರೆಯಲಿದ್ದು, ಪ್ರಧಾನಮಂತ್ರಿಗಳ ಜನವಿಕಾಸ ಕಾರ್ಯಕ್ರಮದಡಿ ಶಾಲೆಗಳು ಕಾರ್ಯಾಚರಿಸಲಿವೆ. ದ.ಕ. ನಿರ್ಮಿತಿ ಕೇಂದ್ರ ಕಾಮಗಾರಿ ನಡೆಸುತ್ತಿದೆ.

ದ.ಕ.: ಎಲ್ಲೆಲ್ಲಿ ಶಾಲೆಗಳು:

ಪುತ್ತೂರಿನ ಸಾಲ್ಮರ, ಬಂಟ್ವಾಳದ ಪುದುವಿನ ಸುಜೀರು, ಮೂಲರಪಟ್ಣ, ಮಂಗಳೂರಿನ ಕುದ್ರೋಳಿ, ಗುರುಕಂಬಳ, ಉಳಾçಬೆಟ್ಟು, ಉಳ್ಳಾಲದ ಬೋಳಿಯಾರು, ಮಂಜನಾಡಿ ಹೀಗೆ 8 ಕಡೆ ಶಾಲೆಗಳಿದ್ದು, ಪುತ್ತೂರು ಮತ್ತು ಕುದ್ರೋಳಿಯ ಶಾಲೆಗಳ ಸ್ವಂತ ಕಟ್ಟಡದ ಕಾಮಗಾರಿ ಪೂರ್ಣಗೊಂಡು ಕಾರ್ಯಾಚರಿಸುತ್ತಿವೆ. ಕುದ್ರೋಳಿ, ಪುತ್ತೂರು, ಮಂಜನಾಡಿ ಹಾಗೂ ಮೂಲರಪಟ್ಣದ ಶಾಲೆಗಳು ಮೊದಲ ಹಂತದಲ್ಲಿ ಮಂಜೂರಾಗಿದ್ದವು. ಉಳಿದಂತೆ ಎಲ್ಲ ಶಾಲೆಗಳು ಕೂಡ ಇತರ ಪಕ್ಕದ ಸರಕಾರಿ ಶಾಲೆ ಸೇರಿದಂತೆ ವಿವಿಧೆಡೆ ಕಾರ್ಯಾಚರಿಸುತ್ತಿವೆ.

300 ವಿದ್ಯಾರ್ಥಿಗಳ ಸಾಮರ್ಥ್ಯ:

Advertisement

ಪ್ರಸ್ತುತ ಪ್ರತೀ ಶಾಲೆಗಳಲ್ಲಿ ಒಂದು ತರಗತಿಗೆ 60 ವಿದ್ಯಾರ್ಥಿಗಳಿಗೆ ಅವಕಾಶವಿದ್ದು, 5 ತರಗತಿಗಳು ಸೇರಿ ಒಂದು ಶಾಲೆಯಲ್ಲಿ 300 ವಿದ್ಯಾರ್ಥಿಗಳಿಗೆ ಅವಕಾಶವಿದೆ. ಒಂದು ವೇಳೆ ಹೆಚ್ಚಿನ ವಿದ್ಯಾರ್ಥಿಗಳಿಂದ ಬೇಡಿಕೆ ಬಂದರೆ 75:25 (75 ಅಲ್ಪಸಂಖ್ಯಾಕ ವಿದ್ಯಾರ್ಥಿಗಳು/ 25 ಇತರರು)ರ ಆಧಾರದಲ್ಲಿ ಪರೀಕ್ಷೆಯನ್ನು ನಡೆಸಬೇಕಾಗುತ್ತದೆ. ಗಂಡು ಹಾಗೂ ಹೆಣ್ಣು ಮಕ್ಕಳಿಗೆ 50:50 ಅವಕಾಶವಿದೆ ಎಂದು ಅಧಿಕಾರಿಗಳು ವಿವರಿಸುತ್ತಾರೆ.

ತಲಾ 2.35 ಕೋ.ರೂ. ಅನುದಾನ :

ಈ ಶಾಲೆಗಳ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ತಲಾ 2.35 ಕೋ.ರೂ.ಅನುದಾನ ಮಂಜೂರಾಗಿ ಕಾಮಗಾರಿ ನಡೆಯುತ್ತಿದೆ. ಉಳಿದಂತೆ ಶಾಲೆಯ ಆವರಣ ಗೋಡೆ, ಇತರ ಮೂಲಸೌಕರ್ಯಗಳಿಗೆ ಪ್ರತ್ಯೇಕ ಅನುದಾನ ಬಿಡುಗಡೆಗೊಳ್ಳಲಿದೆ. ಜತೆಗೆ ಪುತ್ತೂರು ಹಾಗೂ ಕುದ್ರೋಳಿಯಲ್ಲಿ ಶಾಲೆಯ ಖಾಯಂ ಶಿಕ್ಷಕರ ಜತೆ ಅತಿಥಿ ಶಿಕ್ಷಕರು ತರಗತಿಗಳನ್ನು ನಡೆಸುತ್ತಿದ್ದು, ಉಳಿದ ಕಡೆಗಳಲ್ಲಿ ಕೇವಲ ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮಂಗಳೂರು ಉಪವಿಭಾಗದ ತಾಲೂಕು ಅಲ್ಪಸಂಖ್ಯಾಕರ ವಿಸ್ತರಣಾಧಿಕಾರಿ ಮಂಜುನಾಥ್‌ ಆರ್‌. ತಿಳಿಸಿದ್ದಾರೆ.

ಉಡುಪಿಯ 2 ಶಾಲೆಗಳು :

ಉಡುಪಿ ಜಿಲ್ಲೆಯ ಕಾಪು ಹಾಗೂ ಕಾರ್ಕಳಕ್ಕೆ 2 ಮೌಲಾನಾ ಆಜಾದ್‌ ಶಾಲೆಗಳು ಮಂಜೂರಾಗಿದ್ದು, ಕಟ್ಟಡ ಇನ್ನಷ್ಟೇ ಆರಂಭಗೊಳ್ಳಬೇಕಿದೆ. ಕಾಪುವಿನ ಶಾಲೆ ಪ್ರಸ್ತುತ ಸ್ಥಳೀಯ ಉರ್ದು ಶಾಲಾ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದು, ಕಟ್ಟಡದ ಕ್ರಿಯಾಯೋಜನೆ ಸಲ್ಲಿಕೆಯಾಗಿದೆ. ಕಾರ್ಕಳದ ಶಾಲೆಯು ಖಾಸಗಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದು, ಕಟ್ಟಡ ನಿರ್ಮಾಣಕ್ಕೆ ಜಾಗ ಅಂತಿಮಗೊಳ್ಳಬೇಕಿದೆ ಎಂದು ಅಲ್ಪಸಂಖ್ಯಾಕರ ಕಲ್ಯಾಣ ಇಲಾಖೆಯ ಉಡುಪಿ ಜಿಲ್ಲಾ ಅಧಿಕಾರಿ (ಪ್ರಭಾರ) ಸಚಿನ್‌ ಕುಮಾರ್‌ ತಿಳಿಸಿದ್ದಾರೆ.

ಕಿರಣ್‌ ಸರಪಾಡಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next