ಮಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಕಾರ್ಯಗಳು ಪೂರ್ಣಗೊಂಡು ಕಾಂಗ್ರೆಸ್‌ನಿಂದ ಬಹುಮತದ ಸರಕಾರ ರಚನೆಗೆ ಪ್ರಕ್ರಿಯೆಗಳು ಆರಂಭಗೊಂ ಡಿರುವಂತೆಯೇ ದ.ಕ. ಜಿಲ್ಲೆಯಲ್ಲಿ ಮತ್ತೆ ಸಚಿವರಾಗುವ ಭಾಗ್ಯ ಯಾರಿಗೆ ದೊರಕಲಿದೆ ಎಂಬ ಲೆಕ್ಕಾಚಾರ ಆರಂಭವಾಗಿದೆ.
ಐದನೇ ಬಾರಿ ಶಾಸಕರಾಗಿರುವ ಖಾದರ್ ಈಗಾಗಲೇ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ಆರೋಗ್ಯ ಖಾತೆ, ವಸತಿ ಮತ್ತು ನಗರಾಭಿವೃದ್ಧಿ ಜತೆಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸಿರುವ ಜತೆಗೆ ಕಳೆದ ಸರಕಾರದಲ್ಲಿ ವಿಧಾನಸಭೆಯ ವಿಪಕ್ಷ ಉಪನಾಯಕರಾಗಿ ಕರ್ತವ್ಯ ನಿರ್ವಹಿಸಿರುವ ಯು.ಟಿ. ಖಾದರ್ ಅವರಿಗೆ ಈ ಬಾರಿಯೂ ಸಚಿವ ಸ್ಥಾನ ಖಚಿತ ಎಂಬ ಮಾತು ಪಕ್ಷದಿಂದಲೇ ಕೇಳಿ ಬರುತ್ತಿದೆ.
ಆರೋಗ್ಯ, ಆಹಾರ, ವಸತಿ ಸೇರಿದಂತೆ ಪ್ರಮುಖ ಖಾತೆಗಳನ್ನು ನಿರ್ವಹಿಸಿರುವ ಜವಾಬ್ದಾರಿ ಹೊಂದಿರುವ ಅವರಿಗೆ ಈ ಬಾರಿಯ ಸರಕಾರದಲ್ಲಿ ಮೂರು ಉಪ ಮುಖ್ಯಮಂತ್ರಿಗಳಲ್ಲಿ ಒಂದು ಸ್ಥಾನ ಸಿಗಬಹುದೇ ಎಂಬ ಮಾತು ದಟ್ಟವಾಗಿದೆ. ಈ ಮೂಲಕ ಹಿಂದುತ್ವದ ಅಲೆಯ ನಡುವೆಯೂ ಕರಾವಳಿಯಲ್ಲಿ ಎರಡು ಸ್ಥಾನಗಳನ್ನು ಪಡೆಯಲು ಯಶಸ್ವಿಯಾಗಿರುವುದಕ್ಕೆ ಪ್ರಾತಿನಿಧಿತ್ವ ನೀಡುವ ಜತೆಗೆ, ಮಂತ್ರಿ ಮಂಡಲದಲ್ಲಿ ಮುಸ್ಲಿಂ ಸಮುದಾಯಕ್ಕೂ ಪ್ರಾತಿನಿಧ್ಯ ಒದಗಿಸಿದಂತಾಗುತ್ತದೆ ಎನ್ನುವ ಲೆಕ್ಕಾಚಾರ.
ವಿಧಾನ ಪರಿಷತ್‌ನ ಸದಸ್ಯರಾದ ಡಾ| ಮಂಜುನಾಥ ಭಂಡಾರಿ ಹಾಗೂ ಪಕ್ಷದ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಅವರ ಹೆಸರೂ ಕೇಳಿ ಬರುತ್ತಿದೆ. ವಿಧಾನ ಪರಿಷತ್ ಸದಸ್ಯರಾಗಿ ಹರೀಶ್ ಕುಮಾರ್ ಅವರ ಅವಧಿ ಒಂದು ವರ್ಷದೊಳಗೆ ಪೂರ್ಣಗೊಳ್ಳಲಿದ್ದು, ಡಾ| ಮಂಜುನಾಥ ಭಂಡಾರಿ ಅವರಿಗೆ ಇನ್ನೂ ಐದು ವರ್ಷಗಳ ಅವಧಿ ಇದೆ. ಹೈಕಮಾಂಡ್ ವಲಯದಲ್ಲೂ ಪ್ರಭಾವ ಹೊಂದಿರುವ ಡಾ| ಭಂಡಾರಿ ಅವರಿಗೆ ಯಾಕೆ ಸಚಿವ ಸ್ಥಾನ ನೀಡಬಾರದು ಎಂಬ ಮಾತು ಕಾಂಗ್ರೆಸ್ ವಲಯದಲ್ಲಿದೆ.
ಉಡುಪಿಯಲ್ಲಿ ಕಾಂಗ್ರೆಸ್ ಪಕ್ಷ ಖಾತೆ ತೆರೆಯುವಲ್ಲಿ ವಿಫಲವಾಗಿರುವ ಕಾರಣ, ಅಲ್ಲಿಗೆ ಉಸ್ತುವಾರಿಯನ್ನಾಗಿ ಡಾ| ಮಂಜುನಾಥ ಭಂಡಾರಿ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಈ ಮೂಲಕ ಬಂಟ ಸಮುದಾಯದ ಕೋಟಾ ಪೂರೈಸುವ ಉದ್ದೇಶವಾಗಿದ್ದರೆ, ಬಿಲ್ಲವ ಸಮುದಾಯ ಪ್ರತಿನಿಧಿಯಾಗಿ ಹರೀಶ್ ಕುಮಾರ್ ಅವರಿಗೆ ಸಚಿವ ಸ್ಥಾನ ಸಿಗಬಹುದೇ ? ಎಂಬ ಲೆಕ್ಕಾಚಾರ ಸದ್ಯ ಪಕ್ಷದೊಳಗೆ ನಡೆಯುತ್ತಿದೆ.
ಈಗಾಗಲೇ ಮುಖ್ಯಮಂತ್ರಿ ಯಾರಾಗಬೇಕೆನ್ನುವ ಬಗ್ಗೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆದಿದ್ದು, ಹೈಕಮಾಂಡ್ ತೀರ್ಮಾನದ ಬಳಿಕ ಅಂತಿಮವಾಗಲಿದೆ. ಬಳಿಕ ನೂತನ ಸರಕಾರ ರಚನೆಗೊಂಡು ಸಚಿವ ಸಂಪುಟ ವಿಸ್ತರಣೆಯ ವೇಳೆ ಸಚಿವ ಸ್ಥಾನದ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.