Advertisement

ಬೆಳೆನಷ್ಟಕ್ಕೆ ಪ್ರತಿ ಎಕರೆಗೆ 10 ಸಾವಿರ ರೂ. ಪರಿಹಾರಕ್ಕೆ ಡಿಕೆಶಿ ಆಗ್ರಹ

08:55 PM Nov 24, 2021 | Team Udayavani |

ಬೆಂಗಳೂರು : ಮಳೆಹಾನಿಯಿಂದ ಉಂಟಾಗಿರುವ ಬೆಳೆನಷ್ಟಕ್ಕೆ ಪ್ರತಿ ಎಕರೆಗೆ ಹತ್ತು ಸಾವಿರ ರೂ. ಪರಿಹಾರ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆಗ್ರಹಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಆಡಳಿತದಲ್ಲಿ ರಾಜ್ಯದಲ್ಲಿ ಅನ್ನದಾತ ಅನಾಥನಾಗಿದ್ದಾನೆ. ಅಕ್ಟೋಬರ್‌ ಹಾಗೂ ನವೆಂಬರ್‌ ತಿಂಗಳಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದ್ದು, ರೈತರ ಬೆಳೆ ಜಮೀನಿನಲ್ಲೇ ನೀರು ಪಾಲಾಗಿದೆ. ಸರ್ಕಾರ ಪರಿಹಾರ ವಿಚಾರದಲ್ಲಿ ಮೀನಾ ಮೇಷ ಎಣಿಸುತ್ತಿದೆ ಎಂದು ಆರೋಪಿಸಿದರು.

ಲಕ್ಷಾಂತರ ಹೆಕ್ಟೇರ್‌ ನಲ್ಲಿ ಬೆಳೆದ ಭತ್ತ, ರಾಗಿ, ಮೆಕ್ಕೆಜೋಳ, ತರಕಾರಿ, ಹಣ್ಣು, ಕಾಫಿ ಮತ್ತಿತರ ಬೆಳೆಗಳು ಕಟಾವಿನ ಸಮಯದಲ್ಲಿ ಮಳೆಯಿಂದಾಗಿ ಕೊಳೆಯುತ್ತಿವೆ. ಈ ವರ್ಷದ ಮುಂಗಾರು ವೇಳೆ ಬಂದ ನೆರೆಗೆ ಹಾನಿಯಾದ ಬೆಳೆಗೆ ಸರ್ಕಾರ ಘೋಷಿಸಿದ ಪರಿಹಾರ ಇನ್ನೂ ರೈತರಿಗೆ ಸಿಕ್ಕಿಲ್ಲ ಎಂದು ದೂರಿದರು.

ಕೋವಿಡ್‌ ಸಮಯದಲ್ಲಿ ಬೆಳೆಗೆ ಮಾರುಕಟ್ಟೆ ಕಲ್ಪಿಸದ ಬಿಜೆಪಿ ಸರ್ಕಾರ ರೈತರನ್ನು ನಡುನೀರಲ್ಲಿ ಕೈಬಿಟ್ಟಿತ್ತು.ಕಳೆದ ಮೂರು ವಷರಗಳಿಂದ ನಿರಂತರ ನೆರೆ ಬಂದರೂ ಸರಿಯಾಗಿ ಪರಿಹಾರ ನೀಡದೆ ರೈತರ ಜೀವ ಹಿಂಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರಿಗೆ ಅನ್ಯಾಯ
ಪ್ರಕೃತಿ ವಿಕೋಪದಿಂದ ಬೆಳೆ ಹಾನಿಯಾದರೆ ರೈತರಿಗೆ ನೆರವಾಗಲು ಫಸಲ್‌ ಭಿಮಾ ಯೋಜನೆ ಜಾರಿಗೆ ತಂದಿದ್ದು, ಅದು ರೈತರಿಗೆ ನ್ಯಾಯ ಒದಗಿಸುವ ಬದಲು ಅನ್ಯಾಯ ಮಾಡುತ್ತಿದೆ.ಈ ಯೋಜನೆಯಲ್ಲಿ ರೈತ ಬೆಳೆ ವಿಮೆ ನೋಂದಣಿಗೆ ಕಾಲಮಿತಿ ನಿಗದಿ ಮಾಡಲಾಗಿದೆ. 45 ದಿನಗಳ ಒಳಗೆ ಪರಿಹಾರ ಸಿಗಬೇಕು. ಆದರೆ ಬೆಳೆ, ಪಹಣಿ, ಆಧಾರ್‌ ಸಂಖ್ಯೆ ಹೊಂದಾಣಿಕೆ ಇಲ್ಲ ಎಂಬ ತಾಂತ್ರಿಕ ಅಂಶಗಳ ನೆಪವೊಡ್ಡಿ ಪರಿಹಾರ ನಿರಾಕರಿಸಲಾಗುತ್ತಿದೆ ಎಂದು ಹೇಳಿದರು.

Advertisement

ಇದನ್ನೂ ಓದಿ ; ಯುನೈಟೆಡ್‌ ಕಿಂಗ್‌ಡಮ್‌ ಸಂಸತ್ತಿನ ಒಳಗೆ ಮಕ್ಕಳಿಗೆ ನಿಷೇಧಕ್ಕೆ ಭಾರೀ ಆಕ್ರೋಶ

ಸರ್ಕಾರ ಬೆಳೆ ನಾಶ ಸಮೀಕ್ಷೆ, ಅಧ್ಯಯನ, ಸಭೆ ನಂತರ ಪರಿಹಾರ ಅಂತ ಕಾಲಹರಣ ಮಾಡಬಾರದು.ಬೆಳೆ ಹಾನಿ ಬಗ್ಗೆ ತಕ್ಷಣ ರೈತರಿಂದ ಅರ್ಜಿ ಆಹ್ವಾನಿಸಬೇಕು. ತಹಶೀಲ್ದಾರ್‌ ಮೂಲಕ ಸ್ವೀಕರಿಸಬೇಕು. ಅಧಿಕಾರಿಗಳನ್ನು ಕೂಡಲೇ ಸ್ಥಳಕ್ಕೆ ಕಳುಹಿಸಿ, ವಿಡಿಯೋ, ಫೋಟೋ ತೆಗೆಸಿ, 30 ದಿನದೊಳಗೆ ಸೂಕ್ತ ಪರಿಹಾರ ಕೊಡಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಮುಗಿಸಲು ಸಿ.ಟಿ. ರವಿ ಸಾಕು
ಸಿ.ಟಿ. ರವಿ ದೇಶದ ಇಮೇಜ್‌ ಗೆ ಧಕ್ಕೆ ತರುತ್ತಿದ್ದಾರೆ. ಅವರನ್ನು ಬಿಜೆಪಿ ಯಾಕೆ ಇಟ್ಟುಕೊಂಡಿದೆಯೋ ಗೊತ್ತಿಲ್ಲ. ಬಿಜೆಪಿ ಮುಗಿಸೋಕೆ ಅವರೊಬ್ಬರೇ ಸಾಕು. ಅವರು ಬಹಳ ಒಳ್ಳೊಳ್ಳೆ ದೇಶಪ್ರೇಮಿ ಸ್ಟೇಟ್‌ ಮೆಂಟ್‌ ಕೊಡ್ತಿದ್ದಾರೆ. ಅದರಿಂದ ಬಿಜೆಪಿಗೂ ಡ್ಯಾಮೇಜ್‌ ಆಗ್ತಿದೆ. ಅದಕ್ಕೆ ನಾವೂ ಸುಮ್ಮನೆ ಇದ್ದೇವೆ.
– ಡಿ.ಕೆ.ಶಿವಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next