Advertisement

D.K. ಜಿಲ್ಲೆಯಲ್ಲಿ 1,61,053 ಟನ್‌, ಉಡುಪಿ 2,00431 ಟನ್‌ ಮೇವು ದಾಸ್ತಾನು

08:51 AM Mar 20, 2024 | |

ಮಂಗಳೂರು: ಈ ಬಾರಿ ಕರಾವಳಿಯಲ್ಲಿ ಬೇಸಗೆಯ ಬೇಗೆ ಹೆಚ್ಚುತ್ತಿದ್ದರೂ ಜಾನುವಾರುಗಳಿಗೆ ಮೇವಿನ ಕೊರತೆ ಬಾಧಿಸದು. ಸದ್ಯದ ಲೆಕ್ಕದ ಪ್ರಕಾರ ಜೂನ್‌ ವರೆಗೂ ಮೇವು ದಾಸ್ತಾನಿದೆ.

Advertisement

ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕರಾವಳಿಯಲ್ಲಿ ಅತೀ ಹೆಚ್ಚು ದನ, ಕರು, ಎಮ್ಮೆ, ಕೋಣಗಳಿವೆ. ಇವುಗಳಿಗೆ ಹಸಿ ಹುಲ್ಲು, ಒಣ ಹುಲ್ಲುಗಳ ಅವಶ್ಯಕತೆ ಹೆಚ್ಚಿರುತ್ತದೆ.ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ 1.61 ಲಕ್ಷ ಟನ್‌ ಮೇವು ಲಭ್ಯವಿದ್ದು, ಸುಮಾರು 15 ವಾರಗಳಿಗೆ ಮತ್ತು ಉಡುಪಿಯಲ್ಲಿ ಸಂಗ್ರಹವಿರುವ 2 ಲಕ್ಷ ಟನ್‌ ಮೇವು 19 ವಾರಗಳಿಗೆ ಸಾಕಾಗಲಿದೆ ಎಂಬುದು ಪಶು ಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯ ಅಧಿಕಾರಿಗಳು.

ಉಡುಪಿ ಜಿಲ್ಲೆಯಲ್ಲಿ 2,57,184 ಜಾನುವಾರುಗಳು ಮತ್ತು 3107 ಕುರಿ- ಮೇಕೆಗಳಿದ್ದು, ವಾರಕ್ಕೆ 10,812 ಟನ್‌ ಮೇವಿನ ಅಗತ್ಯವಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2, 52,423 ಜಾನುವಾರುಗಳಿದ್ದು, 32,508 ಕುರಿ ಮತ್ತು ಮೇಕೆಗಳಿವೆ. ಇವುಗಳಿಗೆ ವಾರಕ್ಕೆ ಕನಿಷ್ಠ 10,716 ಟನ್‌ಗಳಷ್ಟು ಮೇವು ಅಗತ್ಯವಿದೆ.

ಮೇವಿನ ಬೀಜದ ಕಿಟ್‌ ವಿತರಣೆ

ಉಡುಪಿ ಜಿಲ್ಲೆಯಲ್ಲಿ ಕೆಎಂಎಫ್‌ ವತಿಯಿಂದ 3,918 ಮಿನಿಕಿಟ್‌ಗಳನ್ನು 1306 ರೈತರಿಗೆ ವಿತರಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 720 ಮಿನಿ ಕಿಟ್‌ ಗಳನ್ನು ವಿತರಿಸಲಾಗಿದೆ. ಇದರಲ್ಲಿ ಹೈಬ್ರಿಡ್‌ ಮಲ್ಟಿಕಟ್‌ ಫ್ರೇಜ್‌ ಬಾಜ್ರಾ, ಕೌಪೀ, ಸೋರ್ಗಮ್‌, ಎಟಿಎಂ ಬೀಜಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿ ವಿಜ್ಞಾನ ಕೇಂದ್ರ ಮತ್ತು ಕೊçಲದ ಪಶು ಸಂಗೋಪನಾ ಕೇಂದ್ರದಲ್ಲಿಯೂ ಹುಲ್ಲುಗಳನ್ನು ಬೆಳೆಸಲು ಕ್ರಮ ಕೈಗೊಳ್ಳಲಾಗಿದೆ. ಪ್ರತಿ ವರ್ಷ ಎಪ್ರಿಲ್‌ನಲ್ಲಿ ಒಂದೆರಡು ಸಾಮಾನ್ಯ ಮಳೆಯಾಗುತ್ತದೆ. ಅದೇ ರೀತಿ ಈ ಬಾರಿಯೂ ಮಳೆಯಾದರೆ ಮೇವಿನ ಸಮಸ್ಯೆಯೇ ಇರದು ಎಂಬುದು ಇಲಾಖೆಯ ವಿವರಣೆ.

Advertisement

600 ಟನ್‌ ಮೇವಿಗೆ ಟೆಂಡರ್‌

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮಾನ್ಯ ಬರ ಪೀಡಿತ ತಾಲೂಕುಗಳು ಎಂದು ಘೋಷಣೆಯಾಗಿರುವ ಮೂಡುಬಿದಿರೆ ಮತ್ತು ಮಂಗಳೂರಿಗೆ ಸಂಬಂಧಿಸಿದಂತೆ ಮೇವಿಗೆ ಸಮಸ್ಯೆಯಾಗದಂತೆ ಮುಂಜಾಗ್ರತೆ ಕ್ರಮವಾಗಿ 600 ಟನ್‌ ಮೇವು (ಹುಲ್ಲು) ತರಿಸಿಕೊಳ್ಳಲು ಟೆಂಡರ್‌ ಕರೆಯಲಾಗಿದೆ. ಆದರೆ ಇಂಥ ಯಾವುದೇ ಕ್ರಮ ಸದ್ಯಕ್ಕೆ ಉಡುಪಿ ಜಿಲ್ಲೆಯಲ್ಲಿ ನಡೆದಿಲ್ಲ. ಇದರೊಂದಿಗೆ ಮೇವು ಉತ್ಪಾದನೆ ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಜಿಲ್ಲಾ ಮಟ್ಟದ ಮೇವು ಅಭಿವೃದ್ಧಿ ಕಾರ್ಯಪಡೆ ರಚಿಸಲಾಗಿದೆ. ಜಿಲ್ಲಾಧಿಕಾರಿ ಅಧ್ಯಕ್ಷತೆ ಮತ್ತು ಜಿಪಂ ಸಿಇಒ ಅವರ ಸಹ ಅಧ್ಯಕ್ಷತೆಯಲ್ಲಿ ಮೇವು ನಿರ್ವಹಣ ಸಮಿತಿ, ಕೃಷಿ, ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆಯ ಅಧಿಕಾರಿಗಳು ಸಮಿತಿ ಸದಸ್ಯರಾಗಿರುತ್ತಾರೆ. ನಿರಂತರ ಸಭೆಗಳನ್ನು ನಡೆಸಿ ನಿಗಾ ವಹಿಸುವುದು ಈ ಸಮಿತಿಯ ಕಾರ್ಯ ಉದ್ದೇಶ.

ಒಂದು ವೇಳೆ ಎಪ್ರಿಲ್‌ ನಲ್ಲಿ ಮಳೆ ಬೀಳದಿದ್ದರೆ ಜಾನುವಾರುಗಳಿಗೆ ಕೊರತೆಯಾಗುವುದೇ ಎಂಬ ಪ್ರಶ್ನೆಗೆ ಕಾದು ನೋಡಬೇಕಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸದ್ಯ ಜಾನುವಾರುಗಳ ಮೇವಿಗೆ ಯಾವುದೇ ಕೊರತೆ ಉಂಟಾಗಿಲ್ಲ. ಮುಂದಿನ ಕೆಲವು ವಾರಗಳಿಗೆ ಬೇಕಾದಷ್ಟು ಮೇವು ಸಂಗ್ರಹವಿದೆ. ಜತೆಗೆ ಮೇವಿನ ಬೀಜಗಳಿರುವ ಕಿಟ್‌ ಗಳನ್ನೂ ವಿತರಿಸಲಾಗಿದೆ. ಎಪ್ರಿಲ್‌ ತಿಂಗಳಲ್ಲಿ ಬೇಸಗೆಯ ಒಂದೆರಡು ಮಳೆಯಾದರೆ ಹುಲ್ಲು ಬೆಳೆಯುವುದರಿಂದ ಸಮಸ್ಯೆ ಬಗೆ ಹರಿಯಲಿದೆ. – ಡಾ| ಅರುಣ್‌ ಕುಮಾರ್‌, ಡಾ| ರೆಡ್ಡಪ್ಪ

ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next