Advertisement

ಹೀಗೊಬ್ಬ”ಜೋಸೆಫ್ ಅಯ್ಯಂಗಾರ್‌’

06:26 PM Jul 09, 2022 | Team Udayavani |

ಜೋಸೆಫ್ ಅವರು ಸಾವಿರಾರು ಪ್ರವಚನ ನೀಡಿ, 1,000ಕ್ಕೂ ಹೆಚ್ಚು ವಿಷಯಗಳ ಬಗೆಗೆ ಸಿ.ಡಿ.ಗಳನ್ನು ಹೊರತಂದಿದ್ದಾರೆ. ಯುವವೃಂದಕ್ಕಾಗಿ ಸಾಮಾಜಿಕ ಜಾಲತಾಣ ಮೂಲಕ ನಿತ್ಯ ನೀಡುವ ಉಪನ್ಯಾಸವನ್ನು 3 ಲಕ್ಷ ಜನರು ಆಲಿಸುತ್ತಾರೆ. ಪಾಂಡಿಚೇರಿಯ ಪ್ರತಿಷ್ಠಿತ ಜಿಪ್‌ಮರ್‌ ವೈದ್ಯರಿಗೆ 20 ವಾರ ಭಗವದ್ಗೀತೆ ಕುರಿತು ಉಪನ್ಯಾಸ ನೀಡಿದ್ದರು. ಅಣ್ಣಾಮಲೈ ವಿ.ವಿ.ಯ ಸಂಸ್ಕೃತ ವಿಭಾಗದ ಆಡಳಿತ ಮಂಡಳಿ ಸದಸ್ಯರೂ ಆಗಿದ್ದು, ಹಿಂದೂ ತಣ್ತೀಶಾಸ್ತ್ರದ ಕುರಿತು ಉಪನ್ಯಾಸ ನೀಡಿದ್ದಾರೆ.

Advertisement

ಇವರ ಹೆಸರು ಡಾ| ಡಿ.ಎ. ಜೋಸೆಫ್. ಇವರ ಕಾಯಕ ಮಾತ್ರ ಶ್ರೀರಾಮಾನುಜಾಚಾರ್ಯರ ವಿಶಿಷ್ಟಾದ್ವೈತ ವೇದಾಂತ ಸಹಿತ ಸನಾತನ ಧರ್ಮದ ಮೌಲ್ಯಗಳ ಕುರಿತ ಪ್ರವಚನ. ಇದು ಇಂದು -ನಿನ್ನೆಯ ಬೆಳವಣಿಗೆಯಲ್ಲ. ಈಗ ಇವರಿಗೆ 72 ವರ್ಷ. ಒಂಬತ್ತನೆಯ ವರ್ಷದಲ್ಲೇ ಇವರು ತತ್ತಜ್ಞಾನ ಕ್ಷೇತ್ರದ ಕುರಿತು ಆಕರ್ಷಿತರಾಗಿದ್ದರು. ಆಗ ಇವರ ತಲೆಯ ತುಂಬೆಲ್ಲ ಪ್ರಶ್ನೆಗಳಿದ್ದವು, ಕ್ರಮೇಣ ಇವುಗಳಿಗೆ ಉತ್ತರ ಹುಡುಕುತ್ತ ತಮ್ಮ ಬದುಕಿಗೆ ಒಂದು ತಾತ್ವಿಕ ನೆಲೆಗಟ್ಟು ಕೊಟ್ಟರು.

ತತ್ವಜ್ಞಾನದ ಹಸಿವು
ಪ್ರವಚನ ನಡೆಸಲು ಇವರಿಗೆ ಪುರುಸೊತ್ತು ಇಲ್ಲ ಎನ್ನುವಷ್ಟು ಬೇಡಿಕೆ ಕಾದಿರುತ್ತದೆ. ಜೋಸೆಫ್ ಅವರು ತಮಿಳುನಾಡಿನ ಮಧುರೈಯವರು. ಹತ್ತನೆಯ ತರಗತಿಯಲ್ಲಿ ಮಧುರೈಯ ಸೈಂಟ್‌ ಮೇರೀಸ್‌ ಶಾಲೆಯಲ್ಲಿ

ಓದುವಾಗ ಸಂಸ್ಕೃತ ಮತ್ತು ತಮಿಳು ವಿದ್ವಾಂಸ ವೀರರಾಘವ ಅಯ್ಯಂಗಾರ್‌ ತಮಿಳು ಭಾಷಾ ಶಿಕ್ಷಕರಾಗಿ ಜೋಸೆಫ್ ಅವರಿಗೆ ಸಿಕ್ಕಿದರು. ಜೋಸೆಫ‌ರ ಪ್ರಶ್ನೆಗಳಿಗೆಲ್ಲ ತೃಪ್ತಿ ಸಿಗುವಂತೆ ಉತ್ತರ ಕೊಟ್ಟವರು ವೀರರಾಘವ ಅಯ್ಯಂಗಾರ್‌ ಅವರು. ಜೋಸೆಫ್ ಅವರು ಆಗ ಕೇಳಿದ ಪ್ರಶ್ನೆ ಪಾಠಕ್ಕೆ ಸಂಬಂಧಿಸಿದ್ದಾಗಿರಲಿಲ್ಲ: “ನೀವೇಕೆ ಧೋತಿಯನ್ನು ವಿಭಿನ್ನವಾಗಿ ತೊಡುತ್ತೀರಿ? ನಿಮಗೆ ಶಿಖೆ (ಜುಟ್ಟು)

ಏಕೆ? ಹಣೆಯಲ್ಲಿರುವ ನಾಮಧಾರಣೆ ಏನನ್ನು ಸೂಚಿಸುತ್ತದೆ?’ ವೀರರಾಘವರು ಒಂದೊಂದಾಗಿ ಧಾರ್ಮಿಕ ಆಚರಣೆಗಳ ಕುರಿತು ವಿವರಿಸಿದರು. ಜೋಸೆಫ‌ರ ತಂದೆ ವೀರರಾಘವರಲ್ಲಿ ಖಾಸಗಿ ಪಾಠಕ್ಕೆ ಏರ್ಪಾಟು ಮಾಡಿದರು. ಮುಂದೊಂದು ದಿನ ಜೋಸೆಫ‌ರ ತಣ್ತೀಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆಲ್ಲ ಸಮಾಧಾನಕರ ಉತ್ತರ ಲಭಿಸತೊಡಗಿತು.

Advertisement

ಋಷಿಧರ್ಮ ಪ್ರತಿಷ್ಠಾನ
ಜೋಸೆಫ‌ರು ಸಂಸ್ಕೃತ, ತಮಿಳು, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದರೆ, ಇವರ ಪತ್ನಿ ಫಾತಿಮಾ ಮೇರಿ (ಫಾತಿಮಾ ಜೋಸೆಫ್) ಸಾಗರ ಜೀವಶಾಸ್ತ್ರದಲ್ಲಿ ಪಿಎಚ್‌ಡಿ ಪದವಿ ಗಳಿಸಿದ ವಿಜ್ಞಾನಿ. ಗಂಡನಿಗೆ ಬೇಕಾದ ಮಾಹಿತಿಗಳನ್ನು ತನ್ನ ಕ್ಷೇತ್ರಾನುಭವದಿಂದ ಕೊಡುತ್ತಾರೆ ಈ ಪತ್ನಿ. ಅವರ ಮಗ ಜೆ. ಮ್ಯಾನುವೆಲ್‌ ಸುರೇಶರೂ ಧಾರ್ಮಿಕ ಪ್ರವಚನದಲ್ಲಿ ತೊಡಗುತ್ತಿದ್ದಾರೆ. ತಂದೆ ಆರಂಭದಲ್ಲಿ ಮಧುರೈ ಕಾಮರಾಜ್‌ ವಿ.ವಿ.ಯಲ್ಲಿ ಆಂಗ್ಲ ಪ್ರಾಧ್ಯಾಪಕರಾಗಿದ್ದು, ಬಳಿಕ ಪೂರ್ಣಕಾಲೀನ ಪ್ರವಚನಕಾರರಾದರೆ, ಮಗ ಸಾಫ್ಟ್ವೇರ್‌ ಡೆವಲಪರ್‌ ಆಗಿದ್ದು ಈಗ ತಂದೆಗೆ ಜೋಡಣೆಯಾಗಿದ್ದಾರೆ. ಪಾಂಡಿಚೇರಿಯಲ್ಲಿ ಋಷಿಧರ್ಮ ಪ್ರತಿಷ್ಠಾನವನ್ನು ಜತೆಗೂಡಿ ನಡೆಸುತ್ತಿದ್ದಾರೆ. ಜೋಸೆಫ್ ಅವರು ಸಾವಿರಾರು ಪ್ರವಚನ ನೀಡಿ, 1,000ಕ್ಕೂ ಹೆಚ್ಚು ವಿಷಯಗಳ ಬಗೆಗೆ ಸಿ.ಡಿ.ಗಳನ್ನು ಹೊರತಂದಿದ್ದಾರೆ. ಯುವವೃಂದಕ್ಕಾಗಿ ಸಾಮಾಜಿಕ ಜಾಲತಾಣ ಮೂಲಕ ನಿತ್ಯ ನೀಡುವ ಉಪನ್ಯಾಸವನ್ನು 3 ಲಕ್ಷ ಜನರು ಆಲಿಸುತ್ತಾರೆ. ಪಾಂಡಿಚೇರಿಯ ಪ್ರತಿಷ್ಠಿತ ಜಿಪ್‌ಮರ್‌ ವೈದ್ಯರಿಗೆ 20 ವಾರ ಭಗವದ್ಗೀತೆ ಕುರಿತು ಉಪನ್ಯಾಸ ನೀಡಿದ್ದರು. ಅಣ್ಣಾಮಲೈ ವಿ.ವಿ.ಯ ಸಂಸ್ಕೃತ ವಿಭಾಗದ ಆಡಳಿತ ಮಂಡಳಿ ಸದಸ್ಯರೂ ಆಗಿದ್ದು, ಹಿಂದೂ ತಣ್ತೀಶಾಸ್ತ್ರದ ಕುರಿತು ಉಪನ್ಯಾಸ ನೀಡಿದ್ದಾರೆ. ಆದಿತ್ಯ ಹೃದಯ, ಸುದರ್ಶನ ಸಹಸ್ರನಾಮ, ಗರುಡ ಪುರಾಣ, ಶ್ರೀರಾಘವೇಂದ್ರಸ್ವಾಮಿಗಳ ಜೀವನಚರಿತ್ರೆ ಇವು ಉಪನ್ಯಾಸದ ಜನಪ್ರಿಯ ವಿಷಯಗಳಾಗಿವೆ.

ಕಿಡಿಗೇಡಿಗಳು ಅಭಿಮಾನಿಗಳಾದಾಗ…
“ರಾಮಾನುಜರ ವಿಶಿಷ್ಟಾದ್ವೆ„ತ ಸಿದ್ಧಾಂತವನ್ನು ತಿಳಿದುಕೊಂಡಾಗ ನನ್ನ ಆಧ್ಯಾತ್ಮಿಕ ಜಿಜ್ಞಾಸೆಗಳಿಗೆ ಉತ್ತರ ಸಿಕ್ಕಿತು. ಬಳಿಕ ವಿದ್ವಾಂಸರು, ಮಠಾಧೀಶರ ಸಾಮೀಪ್ಯವೂ ದೊರಕಿತು’ ಎನ್ನುತ್ತಾರೆ ಜೋಸೆಫ್. ಅಯ್ಯಂಗಾರ್‌ ವಿದ್ವಾಂಸರು ವಿಶಿಷ್ಟಾದ್ವೆ„ತದ ಬಗ್ಗೆ ಉಪನ್ಯಾಸ ಮಾಡಿದರೆ ಕೇಳುವುದಕ್ಕಿಂತ ಹೆಚ್ಚು ಆಸಕ್ತಿ ಜೋಸೆಫ‌ರ ಉಪನ್ಯಾಸದ ಕಡೆ ಇರುತ್ತದೆ. ಕುತೂಹಲಕ್ಕಾಗಿಯೇ ಇವರ ಉಪನ್ಯಾಸಕ್ಕೆ ಬರುವವರಲ್ಲ, ಸಾರಕ್ಕಾಗಿ ಬರುತ್ತಾರೆ. ಎಷ್ಟೋ ಕಡೆ ಇವರೇನು ವಿಶಿಷ್ಟಾದ್ವೈತ ದ ಕುರಿತು ಉಪನ್ಯಾಸ ನೀಡಬಲ್ಲರು ಎಂದು ತಕರಾರು ಹುಟ್ಟಿದ್ದೂ ಇದೆ. ಆದರೆ ಇವರ ಪ್ರವಚನ ಕೇಳಿದ ಮೇಲೆ ತಕರಾರು ಹುಟ್ಟಿಸಿದವರೇ ಇವರ ಅಭಿಮಾನಿಗಳಾಗುವುದು ಇವರ ವಿದ್ವತ್‌ ಸಾಮರ್ಥ್ಯವನ್ನು ತೋರಿಸುತ್ತದೆ. ಶ್ರೀವಿಲ್ಲಿಪುತ್ತೂರಿನಲ್ಲಿ ಒಮ್ಮೆ ಒಂದು ಗುಂಪಿನ ಆಕ್ಷೇಪ ತೀವ್ರವಾದಾಗ ಶ್ರೀಪೆರಂಬದೂರಿನ (ರಾಜೀವ್‌ಗಾಂಧಿ ಹತ್ಯೆಯಾದ ಸ್ಥಳ, ರಾಮಾನುಜರ ಜನ್ಮಸ್ಥಳ) ಶ್ರೀವರದ ಯತಿರಾಜ ಜೀಯರ್‌ ಸ್ವಾಮೀಜಿಯವರು ಬಂದು, “ಜೋಸೆಫ್ ಅವರಂತಹ ಜಿಜ್ಞಾಸು, ಸಾತ್ವಿಕರ‌ ಮೇಲೆ ಹಲ್ಲೆ ನಡೆಸಿದರೆ ಅದು ನನ್ನ ಮೇಲೆ ಹಲ್ಲೆ ನಡೆಸಿದಂತೆ’ ಎಂದು ಹೇಳಬೇಕಾಯಿತು. ಭಾಷಣದ ಅನಂತರ ಕಿಡಿಗೇಡಿಗಳಾಗಿ ಬಂದವರು ಅಭಿಮಾನಿಯಾದರು.

ಟೀಕೆ ಎದುರಿಸಿದ ಗುರುಗಳು
ಜೋಸೆಫ‌ರಿಗೆ ಪಾಠ ಹೇಳಿದ್ದಕ್ಕಾಗಿ ವೀರರಾಘವ ಅಯ್ಯಂಗಾರರೂ ಟೀಕೆಯಿಂದ ಹೊರತಾಗಿರಲಿಲ್ಲ. “ರಾಮಾನುಜಾಚಾರ್ಯರು ಪ್ರಥಮ ಸಮಾಜಸುಧಾರಕ. ಆಗ ಸಮಾಜಸುಧಾರಣೆಯನ್ನು ಕಲ್ಪಿಸಲೂ ಆಗದ ಕಾಲವಾಗಿತ್ತು. ಬೇರೆ ಸಮುದಾಯದಲ್ಲಿ ಹುಟ್ಟಿದ್ದಾನೆಂಬ ಕಾರಣಕ್ಕೆ ಅಧ್ಯಯನ ನಡೆಸಲು ಬಂದ ವಿದ್ಯಾರ್ಥಿಯೊಬ್ಬನನ್ನು ಹೇಗೆ ನಿರಾಕರಿಸಲಿ?’ ಎಂದು ವೀರರಾಘವ ಅಯ್ಯಂಗಾರ್‌ ಪ್ರತ್ಯುತ್ತರ ನೀಡಿದ್ದರು.

ಖುಷಿಯಿಂದ ಕೊಟ್ಟ ಹೆಸರು
“ನನಗೆ ವಿರೋಧ ಬಂದಿರುವುದು ಹೌದು. ಆದರೆ ಅದಕ್ಕಿಂತ ಹೆಚ್ಚು ಜನರಿಂದ ಪ್ರೀತಿಯೂ ಹರಿದುಬಂದಿದೆ. ನಮ್ಮ ಯುವ ಜನಾಂಗ ತಣ್ತೀಶಾಸ್ತ್ರ, ಸಾಹಿತ್ಯ, ಕಲೆ, ವಿಜ್ಞಾನ ಅಥವಾ ತರ್ಕ ಇತ್ಯಾದಿಗಳಲ್ಲಿ ನಮ್ಮ ಶ್ರೀಮಂತ ಪರಂಪರೆ ಕುರಿತು ತಿಳಿದಿಲ್ಲ’ ಎಂಬುದನ್ನು ಜೋಸೆಫ್ ಬೆಟ್ಟು ಮಾಡುತ್ತಾರೆ. ನಿಮ್ಮ ಹೆಸರನ್ನು ಬದಲಾಯಿಸಿಲ್ಲವೇಕೆ ಎಂದು ಪ್ರಶ್ನಿಸಿದರೆ “ಆದ್ದರಿಂದಲೇ ನಾನು ಭಿನ್ನವಾಗಿ ನಿಲ್ಲುತ್ತೇನೆ. ನನ್ನ ಆತ್ಮಸಾಕ್ಷಿಯಂತೆ ಜೀವನ ನಡೆಸುತ್ತೇನೆ. ಅಂತಃಸತ್ವ ಮುಖ್ಯ. ಯಾವುದೋ ಮೇಲ್ನೋಟದ ಗುರುತಿನ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದುತ್ತರಿಸುತ್ತಾರೆ. “ಜನರು ಖುಷಿಯಿಂದ ಕೊಟ್ಟ ಜೋಸೆಫ್ ಅಯ್ಯಂಗಾರ್‌ ಎಂದು ಕೊಟ್ಟ ಹೆಸರನ್ನು ಹೇಗೆ ಮರೆಯಲಿ?’ ಎಂದು ಆತ್ಮೀಯತೆ ತೋರುತ್ತಾರೆ.

 ಕರ್ನಾಟಕದ ಸಂಬಂಧ
ಜೋಸೆಫ್ ಐದು ವರ್ಷ ಬೆಂಗಳೂರಿನಲ್ಲಿದ್ದು ಎಲ್‌ಎಲ್‌ಬಿ ಓದಿದ ಕಾರಣ ಕನ್ನಡವೂ ಗೊತ್ತಿದೆ, ಕರ್ನಾಟಕದ ಸಂಬಂಧವೂ ಇದೆ. ಇವರ ಪ್ರವಚನ ಕೇಳುವ ಅವಕಾಶ ಕರ್ನಾಟಕದ ಕರಾವಳಿಯವರಿಗೂ ಬಂದಿದೆ. ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರ ಸನ್ಯಾಸಾಶ್ರಮದ ಸುವರ್ಣ ಮಹೋತ್ಸವ ಮತ್ತು ಶ್ರೀಈಶಪ್ರಿಯತೀರ್ಥ ಶ್ರೀಪಾದರ ವಿಶ್ವಾರ್ಪಣಂ ಕಾರ್ಯಕ್ರಮದ ಭಾಗವಾಗಿ ಜು. 10ರ ಸಂಜೆ 4ಕ್ಕೆ ಉಡುಪಿ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ಜೋಸೆಫ್ “ವ್ಯಕ್ತಿತ್ವ ವಿಕಸನ’ ವಿಷಯ ಕುರಿತು ಮಾತನಾಡಲಿದ್ದಾರೆ.

-ಮಟಪಾಡಿ ಕುಮಾರಸ್ವಾಮಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next