ಮುಂಬಯಿ: ಕೈಗಾರಿಕೋದ್ಯಮಿ ಸೈರಸ್ ಮಿಸ್ತ್ರಿ ಅವರ ಕಾರು ಅಪಘಾತದ ಬಗ್ಗೆ ಐಷಾರಾಮಿ ಕಾರು ತಯಾರಕ ಮರ್ಸಿಡಿಸ್ ಬೆಂಜ್ ತನ್ನ ಮಧ್ಯಂತರ ವರದಿಯನ್ನು ಪಾಲ್ಘರ್ ಪೊಲೀಸರಿಗೆ ಸಲ್ಲಿಸಿದ್ದು, ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆಯುವ ಐದು ಸೆಕೆಂಡುಗಳ ಮೊದಲು ವಾಹನದ ಬ್ರೇಕನ್ನು ಹಾಕಲಾಗಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಮರ್ಸಿಡಿಸ್ ಬೆಂಝ್‌ನ ತಜ್ಞರ ತಂಡವು ಸೋಮವಾರ ಹಾಂಗ್ ಕಾಂಗ್‌ನಿಂದ ಮುಂಬೈಗೆ ಭೇಟಿ ನೀಡಿ ಕಾರಿನ ತಪಾಸಣೆ ನಡೆಸಲಿದೆ ಎಂದು ಅವರು ಹೇಳಿದರು.
ಜರ್ಮನ್ ವಾಹನ ತಯಾರಕರು ಕಾರು ಅಪಘಾತದ ತನಿಖೆಯಲ್ಲಿ ಅಧಿಕಾರಿಗಳೊಂದಿಗೆ ಸಹಕರಿಸುತ್ತಿದ್ದಾರೆ ಮತ್ತು ಗ್ರಾಹಕರ ಗೌಪ್ಯತೆಯನ್ನು ಗೌರವಿಸುವುದರಿಂದ ಅವರೊಂದಿಗೆ ಮಾತ್ರ ವಿವರಗಳನ್ನು ಹಂಚಿಕೊಳ್ಳುವುದಾಗಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮಿಸ್ತ್ರಿ (54) ಮತ್ತು ಅವರ ಸ್ನೇಹಿತ ಜಹಾಂಗೀರ್ ಪಾಂಡೋಲೆ ಭಾನುವಾರ ಮಧ್ಯಾಹ್ನ ಪಾಲ್ಘರ್ ಜಿಲ್ಲೆಯಲ್ಲಿ ಗುಜರಾತ್‌ನಿಂದ ಮುಂಬೈಗೆ ತೆರಳುತ್ತಿದ್ದಾಗ ಸೂರ್ಯ ನದಿ ಸೇತುವೆ ಮೇಲೆ ಕಾರು ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಸಾವನ್ನಪ್ಪಿದ್ದರು. ಕಾರಿನಲ್ಲಿದ್ದ ಅನಾಹಿತಾ ಪಾಂಡೋಲೆ (55) ಮತ್ತು ಅವರ ಪತಿ ಡೇರಿಯಸ್ ಪಾಂಡೋಲೆ (60) ಗಾಯಗೊಂಡಿದ್ದು ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
”ಮರ್ಸಿಡಿಸ್ ಬೆಂಜ್ ತನ್ನ ಮಧ್ಯಂತರ ವರದಿಯನ್ನು ಪೊಲೀಸರಿಗೆ ಸಲ್ಲಿಸಿದ್ದು, ಅಪಘಾತದ ಕೆಲವು ಸೆಕೆಂಡುಗಳ ಮೊದಲು ಕಾರು ಗಂಟೆಗೆ 100 ಕಿಮೀ ವೇಗದಲ್ಲಿ ಚಲಿಸುತ್ತಿತ್ತು, ಆದರೆ ಸೇತುವೆಯ ಮೇಲಿನ ಡಿವೈಡರ್‌ಗೆ ಢಿಕ್ಕಿ ಹೊಡೆದಾಗ ಅದರ ವೇಗ ಗಂಟೆಗೆ 89 ಕಿಮೀ ಆಗಿತ್ತು ”ಎಂದು ಪಾಲ್ಘರ್ ಪೊಲೀಸ್ ಅಧೀಕ್ಷಕ ಬಾಳಾಸಾಹೇಬ್ ಪಾಟೀಲ್ ಹೇಳಿದ್ದಾರೆ.